ಭಾರತದೊಂದಿಗೆ ಹೊಸ ತೆರಿಗೆ ಒಪ್ಪಂದ

7

ಭಾರತದೊಂದಿಗೆ ಹೊಸ ತೆರಿಗೆ ಒಪ್ಪಂದ

Published:
Updated:

ಜಿನೀವಾ (ಪಿಟಿಐ): ಭಾರತದಲ್ಲಿ ತೆರಿಗೆ ವಂಚಿಸಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಂತಹ ಗೋಪ್ಯ ಖಾತೆಗಳನ್ನು ಭಾರತ ಸರ್ಕಾರ ಪರಿಶೀಲಿಸುವುದಕ್ಕೆ ಅವಕಾಶ ನೀಡುವುದಕ್ಕಾಗಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವೆ ಪರಿಷ್ಕೃತ ತೆರಿಗೆ ಒಪ್ಪಂದ ಮಾಡಿಕೊಳ್ಳುವುದಕ್ಕೆ ಸ್ವಿಸ್ ಸಂಸದೀಯ ಸಮಿತಿಯೊಂದು ಸಮ್ಮತಿ ಸೂಚಿಸಿದೆ.ಒಪ್ಪಂದಕ್ಕೆ ತರಲಾದ ತಿದ್ದುಪಡಿಯನ್ನು ಅಂತಿಮ ಒಪ್ಪಿಗೆಗಾಗಿ ಸಂಸತ್ತಿನ ಮುಂದೆ ಇಡಲಾಗುತ್ತದೆ. ಇದಕ್ಕೆ ಸಂಸತ್ತಿನ ಒಪ್ಪಿಗೆ ಸಿಕ್ಕಿದರೆ ಭಾರತದಲ್ಲಿ ತೆರಿಗೆ ವಂಚಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಿಸ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವುದಕ್ಕೆ ಸ್ವಿಸ್ ಸರ್ಕಾರ ಭಾರತಕ್ಕೆ ಆಡಳಿತಾತ್ಮಕ ಸಹಾಯ ನೀಡುವುದು ಸಾಧ್ಯವಾಗಲಿದೆ.ಕಪ್ಪು ಹಣವನ್ನು ವಿದೇಶಗಳಲ್ಲಿ ಇಟ್ಟವರ ಹೆಸರನ್ನು ಬಹಿರಂಗಪಡಿಸಬೇಕು ಎಂದು ವಿರೋಧ ಪಕ್ಷಗಳು ಮತ್ತು ಸುಪ್ರೀಂ ಕೋರ್ಟ್ ಭಾರತ ಸರ್ಕಾರದ ಮೇಲೆ ತೀವ್ರ ಒತ್ತಡ ಹಾಕುತ್ತಿರುವ ಸದ್ಯದ ಸನ್ನಿವೇಶದಲ್ಲೇ ಸ್ವಿಟ್ಜರ್ಲೆಂಡ್‌ನಲ್ಲಿ ಈ ಬೆಳವಣಿಗೆ ನಡೆದಿದೆ. ಭಾರತ-ಸ್ವಿಟ್ಜರ್ಲೆಂಡ್ ನಡುವಿನ ಇಬ್ಬಗೆಯ ತೆರಿಗೆ ಒಪ್ಪಂದ ದಾಖಲೆಯನ್ನು ತಾನು ಸ್ವೀಕರಿಸಿದ್ದು, ಅದನ್ನು ಸಂಸತ್ತಿಗೆ ಕಳುಹಿಸಲಾಗಿದೆ ಎಂದು ಸಂಸತ್ತಿನ ಆರ್ಥಿಕ ವ್ಯವಹಾರ ಮತ್ತು ತೆರಿಗೆ (ಸಿಇಎಟಿ) ಸಮಿತಿ ನೀಡಿದ ಹೇಳಿಕೆಯಿಂದ ಈ ವಿಷಯ ಗೊತ್ತಾಗಿದೆ.2010ರ ಆಗಸ್ಟ್ 30ರಂದು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮತ್ತು ಸ್ವಿಸ್ ಕೌನ್ಸಿಲರ್ ಮಿಚೆಲಿನ್ ಕಾಲ್‌ಮಿರೇ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. ಸ್ವಿಸ್ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುವ ಅಧಿಕಾರ ಸಹಿತ ಹಲವು ತೆರಿಗೆ ವಂಚನೆ ತಡೆ ಕ್ರಮಗಳು ಈ ಒಪ್ಪಂದದಲ್ಲಿ ಇದ್ದು, ವಾಸ್ತವವಾಗಿ ಕಳೆದ ಜನವರಿ 1ರಿಂದಲೇ ಒಪ್ಪಂದ ಜಾರಿಗೆ ಬರಬೇಕಿತ್ತು. ಆದರೆ ಒಪ್ಪಂದದ ಬಗ್ಗೆ ಸೂಕ್ತ ಒಪ್ಪಿಗೆಗಳನ್ನು ಪಡೆಯುವುದು ಬಾಕಿ ಇರುವುದರಿಂದ ಅದು ಇನ್ನೂ ಜಾರಿಗೆ ಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry