ಭಾರತದ ಅಬ್ಬರಕ್ಕೆ ತತ್ತರಿಸಿದ ಸಿಂಗಪುರ

7

ಭಾರತದ ಅಬ್ಬರಕ್ಕೆ ತತ್ತರಿಸಿದ ಸಿಂಗಪುರ

Published:
Updated:
ಭಾರತದ ಅಬ್ಬರಕ್ಕೆ ತತ್ತರಿಸಿದ ಸಿಂಗಪುರ

ನವದೆಹಲಿ: ಶನಿವಾರ ರಾತ್ರಿ ನವದೆಹಲಿಯ ಕಠೋರ ಚಳಿ ಮತ್ತು ಆತಿಥೇಯ ತಂಡದ ಗೋಲುಗಳ ಮಳೆಯಲ್ಲಿ ಸಿಂಗಪುರದ `ಹುಡುಗರು~ ಗಡಗಡ ನಡುಗಿದರು!ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಒಲಿಂಪಿಕ್ಸ್ ಹಾಕಿ ಅರ್ಹತಾ ಟೂರ್ನಿಯಲ್ಲಿ ಆತಿಥೇಯ ತಂಡದ ಆಟಗಾರರ ಶರವೇಗದ ಆಟಕ್ಕೆ 15-1 ರಿಂದ ಸಿಂಗಪುರ ಶರಣಾಯಿತು. ಇದರೊಂದಿಗೆ 30 ವರ್ಷದ ಹಿಂದೆ ಕರಾಚಿಯಲ್ಲಿ ನಡೆದ ಏಷ್ಯಾ ಕಪ್ ಹಾಕಿಯಲ್ಲಿ ಸಿಂಗಪುರದ ವಿರುದ್ಧ ಮಾಡಿದ್ದ 12 ಗೋಲುಗಳ ಗೆಲುವಿನ ದಾಖಲೆ ನಿರ್ಮಿಸಿದ್ದ ಭಾರತ ಶನಿವಾರ ಉತ್ತಮಪಡಿಸಿಕೊಂಡಿತು.  ಸಿಂಗಪುರದ ಎಲ್ಲ ಆಟಗಾರರಿಗೂ ಇದು ಪದಾರ್ಪಣೆಯ ಪಂದ್ಯ. ಆದರೆ 2008ರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದೇ ಗಾಯಗೊಂಡ ಹುಲಿಗಳಾಗಿರುವ ಭಾರತದ ಆಟಗಾರರು ಮಾತ್ರ ತಮ್ಮ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿದರು.  ಪ್ರಥಮಾರ್ಧದಲ್ಲಿ 6-0 ಮುನ್ನಡೆ ಸಾಧಿಸಿದ್ದ ಚೆಟ್ರಿ ಬಳಗವು ದ್ವಿತೀಯಾರ್ಧದಲ್ಲಿ 9 ಗೋಲುಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು. ಕೇವಲ ಒಂದು ಗೋಲು ಗಳಿಸಿದ ಖುಷಿ ಸಿಂಗಪುರದ್ದಾಯಿತು. ಭಾರತ ಸಂಪೂರ್ಣ ಮೂರು ಪಾಯಿಂಟ್‌ಗಳನ್ನು ಪಡೆದುಕೊಂಡಿತು.ಅಭ್ಯಾಸ ಪಂದ್ಯ: ಎರಡು ದಿನಗಳ ಹಿಂದೆ ಭಾರತ ತಂಡದ ನಾಯಕ ಭರತ್ ಚೆಟ್ರಿ ನೀಡಿದ್ದ ಹೇಳಿಕೆಯಂತೆ ಮೊದಲ ಪಂದ್ಯವನ್ನು ಅಕ್ಷರಶಃ ಅಭ್ಯಾಸಕ್ಕಾಗಿಯೇ ಆಟಗಾರರು ಬಳಸಿಕೊಂಡರು. ಟೂರ್ನಿಗೂ ಮುನ್ನ  ಒಂದೂ ಅಭ್ಯಾಸ ಪಂದ್ಯವನ್ನು ತಂಡ ಆಡಿರಲಿಲ್ಲ.ಪಂದ್ಯದ ಮೊದಲನೇ ಕ್ಷಣದಿಂದಲೇ ಶರವೇಗ ಮತ್ತು ಅಕ್ರಮಣಕಾರಿ ಆಟವನ್ನು ಆರಂಭಿಸಿದರು. ಮೊದಲ ಹತ್ತು ನಿಮಿಷದಲ್ಲಿಯೇ ಏಳು ಬಾರಿ ಗೋಲು ಹೊಡೆಯುವ ಗುರಿ ತಪ್ಪಿತ್ತು. ಆದರೆ 10ನೇ ನಿಮಿಷದಲ್ಲಿ ತಂಡದ ಖಾತೆ ಅರಂಭವಾಯಿತು. ಗೋಲುಪೆಟ್ಟಿಗೆ ಸಮೀಪದಿಂದಲೇ ತುಷಾರ್ ಖಾಂಡ್ಕರ್ ನೀಡಿದ ಪಾಸ್ ಪಡೆದ ಸೆಂಟರ್ ಫಾರ್ವರ್ಡ್ ಗುರುವಿಂದರ್‌ಸಿಂಗ್ ಚಂಡಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.ಗುರುವಿಂದರ್ ಚಂಡಿ ಮೂರು, ಶಿವೇಂದ್ರಸಿಂಗ್, ದನೀಶ್ ಮುಜ್ತಾಬಾ, ಎಸ್.ವಿ. ಸುನಿಲ್ ತಲಾ ಎರಡು ಯುವರಾಜ್ ವಾಲ್ಮೀಕಿ, ಸಂದೀಪ್ ಸಿಂಗ್, ಕೊಡಗಿನ ಹುಡುಗ ಉತ್ತಪ್ಪ, ಸರದಾರಸಿಂಗ್, ತುಷಾರ್ ಖಾಂಡ್ಕರ್ ಮತ್ತು ವೀರೇಂದ್ರ ಲಕ್ರಾ ತಲಾ ಒಂದು ಗಳಿಸಿದರು. ಪಂದ್ಯದ 11ನೇ ನಿಮಿಷದಲ್ಲಿಯೇ  ಸರದಾರಸಿಂಗ್ ಹಿಟ್ ಗೋಲ್‌ಕೀಪರ್ ಯಿ ರು ಟಾನ್ ಅವರನ್ನು ದಾಟಿ ಗೋಲುಪೆಟ್ಟಿಗೆ ಸೇರಿತು. ನಂತರ 16ನೇ ನಿಮಿಷದಲ್ಲಿ ಮೊಣಕಾಲಿನೆತ್ತರಕ್ಕೆ ತೇಲಿ ಬಂದ ಚೆಂಡನ್ನು ಪೆಟ್ಟಿಗೆಯ ಸಮೀಪದಲ್ಲಿ ನಿಂತಿದ್ದ ಶಿವೇಂದ್ರಸಿಂಗ್ ನಿಧಾನವಾಗಿ ಗುರಿ ತಲುಪಿಸಿದರು. 20ನೇ ನಿಮಿಷದಲ್ಲಿ ಮತ್ತೆ ಮಿಂಚಿದ ಚಂಡಿ ಪುಷ್ ಮೂಲಕ ಗೋಲು ಗಳಿಸಿದರು.ಐದು ನಿಮಿಷಗಳ ನಂತರ ಸಂದೀಪ್ ಪಾಸ್ ಮಾಡಿದ ಚೆಂಡಿಗೆ ದನೀಶ್ ಮುಜ್ತಾಬಾ ಗೋಲುಪೆಟ್ಟಿಗೆಗೆ ಕಳಿಸಿದರು. ಈ ಸಂದರ್ಭದಲ್ಲಿ ಎದುರಾಳಿ ಆಟಗಾರರೂ ಗೋಲು ಗಳಿಸುವ ಒತ್ತಡದಲ್ಲಿ ಬಿರುಸಿನ ಆಟವಾಡುವ ಪ್ರಯತ್ನ ಮಾಡಿದರು. 27ನೇ ನಿಮಿಷದಲ್ಲಿ ಕನ್ನಡದ ಹುಡುಗ ಎಸ್.ವಿ. ಸುನಿಲ್ ಹಳದಿ ಕಾರ್ಡ್ ದರ್ಶನ ಮಾಡಿದರು. 30ನೇ ನಿಮಿಷದಲ್ಲಿ  ಶಿವೇಂದ್ರಸಿಂಗ್ ಮತ್ತೊಂದು ಗೋಲಿನ ಕಾಣಿಕೆ ನೀಡಿದರು.ದ್ವಿತೀಯಾರ್ಧದಲ್ಲಿ ಸಿಂಗಪುರದ ಮಾರಿಕನ್ ಎನ್ರಿಕ್ ಎಲಿಕೋ  (39ನಿ) ಗೋಲು ಗಳಿಸಿ ಸಂಭ್ರಮ ಆಚರಿಸಿದರು. ಆ ಬಳಿಕ ಭಾರತದ ಆಟಗಾರರು ಯಾವುದೇ ಅವಕಾಶವನ್ನು ಕೊಡಲೇ ಇಲ್ಲ. ಬದಲಿಗೆ ಒಂದರ ಹಿಂದೆ ಒಂದು ಗೋಲು ಹೊಡೆದರು.ಭಾನುವಾರದ ಪಂದ್ಯ: ಭಾರತ - ಇಟಲಿ (ರಾತ್ರಿ 8.00ಕ್ಕೆ ಆರಂಭ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry