ಗುರುವಾರ , ಫೆಬ್ರವರಿ 25, 2021
19 °C

ಭಾರತದ ಅಭಿವೃದ್ಧಿ ಪರ್ವ 30 ವರ್ಷ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ಅಭಿವೃದ್ಧಿ ಪರ್ವ 30 ವರ್ಷ ಹಿಂದೆ

ಶಿವಮೊಗ್ಗ: ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತ ಅಭಿವೃದ್ಧಿಯಲ್ಲಿ 30 ವರ್ಷಗಳಷ್ಟು ಹಿಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಕಳವಳ ವ್ಯಕ್ತಪಡಿಸಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಶುಕ್ರವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು.ವಿಶ್ವದಲ್ಲಿ ನೂರು ವರ್ಷಗಳ ಹಿಂದೆ ಅಭಿವೃದ್ಧಿ ಪರ್ವ ಆರಂಭಗೊಂಡಿತ್ತು.  ಭಾರತದಲ್ಲಿ 70 ವರ್ಷಗಳ ಹಿಂದೆ ಅಭಿವೃದ್ಧಿ ಆರಂಭಗೊಂಡಿದೆ. ಹಾಗಾಗಿ ಇತರೆ ದೇಶಗಳಿಗೆ ಹೋಲಿಸಿದಲ್ಲಿ ನಾವು 30 ವರ್ಷದಷ್ಟು ಹಿಂದಿದ್ದೇವೆ ಎಂದು ಇತಿಹಾಸ ಮೆಲುಕು ಹಾಕಿದರು.ಬಂಡವಾಳ ಹೂಡಿಕೆಗೆ ಶಿವಮೊಗ್ಗ ದಲ್ಲಿಯೂ ವಿಪುಲ ಅವಕಾಶಗಳಿದ್ದು, 15  ವರ್ಷಗಳಲ್ಲಿ ಬೆಂಗಳೂರನ್ನೂ ಹಿಂದಿಕ್ಕಲಿದೆ ಎಂದು ಭವಿಷ್ಯ ನುಡಿದರು.

ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣ ಸೃಷ್ಟಿಸುವುದು ಆಯಾ ಜಿಲ್ಲಾಡಳಿತದ ಜವಾಬ್ದಾರಿ. ವಿಶ್ವದಲ್ಲಿ ಭಾರತ ವಿಕಾಸದ ಹಂತದಲ್ಲಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ವಿಪುಲವಾದ ಅವಕಾಶಗಳಿವೆ. ಇಲ್ಲಿ ಐದು ನದಿಗಳು ಹರಿಯುತ್ತವೆ. ಸ್ಮಾರ್ಟ್‌ ಸಿಟಿ ಯೋಜನೆಯೂ  ಘೋಷಣೆಯಾಗಿದೆ. ಅವಕಾಶಗಳು ಹೆಚ್ಚಿವೆ. ಬಂಡವಾಳ ಹೂಡಿಕೆದಾರರು ಇಂತಹ ಅವಕಾಶ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಬಂಡವಾಳದಾರರ ಸೆಳೆಯುವಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ದೇಶದಲ್ಲೇ ಮುಂಚೂಣಿಯಲ್ಲಿದ್ದಾರೆ. ಅಲ್ಲಿನ ರಾಜಧಾನಿ ಅಮರಾವತಿ ಕಲ್ಪನೆ ಕೂಡ ಅದ್ಭುತವಾಗಿದೆ. ಇನ್ನು ದೇಶದ ಪ್ರಧಾನಮಂತ್ರಿಗಳು ಕೂಡ ಬಂಡವಾಳ ಹೂಡಿಕೆದಾರರನ್ನು ದೇಶದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕರಲ್ಲಿರುವ ದೂರದರ್ಶಿತ್ವ ಗುಣಗಳ ಮೇಲೆ ರಾಜ್ಯ ಮತ್ತು ದೇಶದ ಅಭಿವೃದ್ಧಿ ಪಥ ನಿರ್ಧಾರವಾಗುತ್ತದೆ ಎಂದರು.ಸಮಾವೇಶ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ರಾಕೇಶ್ ಕುಮಾರ್ ಮಾತನಾಡಿ, ಎಲ್ಲಾ ಮುಂದುವರಿದ ದೇಶಗಳು ಕೈಗಾರಿಕೆ, ಕೃಷಿ ಮತ್ತು ಸೇವಾ ಕ್ಷೇತ್ರಕ್ಕೆ ಪ್ರಾಧಾನ್ಯತೆ ನೀಡಿವೆ. ಆದರೆ, ಭಾರತ ಇದುವರೆಗೂ ಕೃಷಿ ಪ್ರಧಾನ ದೇಶವಾಗಿಯೇ ಉಳಿದಿದೆ. ಬೇರೆ ದೇಶಗಳಲ್ಲಿ ಕೈಗಾರಿಕೆಯ ನಂತರ ಸೇವಾ ಕ್ಷೇತ್ರಕ್ಕೆ ಪ್ರಾಧಾನ್ಯತೆ ನೀಡಲಾಗುತ್ತದೆ. ಆದರೆ, ಭಾರತದಲ್ಲಿ ದಿಢೀರ್ ಸೇವಾ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದರು.ದೇಶದಲ್ಲಿ ಕ್ಷಿಪ್ರವಾಗಿ ಗುರುತಿಸಿಕೊಂಡ ಐಟಿ ಕ್ಷೇತ್ರ ಶೇ 54 ರಷ್ಟು ಪಾಲುದಾರಿಕೆ ಹೊಂದಿದೆ. ಕೈಗಾರಿಕೆ ಕೇವಲ ಶೇ 26 ರಷ್ಟು ಪಾಲನ್ನು ಮಾತ್ರ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುವ ದೃಷ್ಟಿಯಿಂದ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ವಿವರ ನೀಡಿದರು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಡಿ.ಎಸ್.ಅರುಣ್‌, ಕೆನರಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಶಂಕರ್‌ ಕುಮಾರ್‌, ನಗರ ಯೋಜನಾ ನಿರ್ದೇಶಕ ರಾಜಪ್ಪ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.