ಸೋಮವಾರ, ಜೂನ್ 14, 2021
24 °C

ಭಾರತದ ಕೊಳೆಗೇರಿ ಬಾಲಕನಿಗೆ ವಿಶ್ವ ಯುವ ಸಮ್ಮೇಳನದಲ್ಲಿ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಕಡುಬಡತನದಲ್ಲಿ ಬೆಳೆದ ಬಾಲಕ ಶರತ್‌ಬಾಬು ಏಳುಮಲೈ ತನ್ನ ತಾಯಿಯ ಪರಿಶ್ರಮದಿಂದಾಗಿ ಉನ್ನತ ಶಿಕ್ಷಣ ಪಡೆದು ದೇಶದ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ. ಇವರ ಎತ್ತರದ ಸಾಧನೆಯನ್ನು ಗುರುತಿಸಿ ವಿಶ್ವ ಯುವ ಸಮ್ಮೇಳನದಲ್ಲಿ ಸನ್ಮಾನಿಸಲಾಗಿದೆ.ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡಿ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಚೆನ್ನೈನ ಮಹಿಳೆ ತನ್ನ ಬದುಕಿನಲ್ಲಿ ಸಾರ್ಥಕತೆ ಕಂಡು ಕೊಂಡಿದ್ದಾರೆ. ಇವರ ಮಗ ಶರತ್ ಬಾಬು ಈಗ ದೊಡ್ಡ ಹೋಟೆಲ್ ಉದ್ಯಮಿಯಾಗಿದ್ದು, ಸುಮಾರು ಮುನ್ನೂರು ಮಂದಿಗೆ ಉದ್ಯೋಗ ನೀಡಿದ್ದಾರೆ.ವಿಶ್ವ ಬ್ಯಾಂಕ್‌ನ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಯುವ ಸಮ್ಮೇಳನದಲ್ಲಿ ಶರತ್ ಬಾಬು ಸೇರಿದಂತೆ ಇಪ್ಪತ್ತು ದೇಶಗಳ ಮೂವರು ಯುವ ಉದ್ಯಮಿಗಳನ್ನು ಗೌರವಿಸಲಾಯಿತು.ಚೆನ್ನೈನ ಕೊಳೆಗೇರಿಯಲ್ಲಿ ಬೆಳೆದ ಶರತ್‌ಬಾಬು ಅಹಮದಾಬಾದ್‌ನ ಐಐಎಂ ನಲ್ಲಿ ಉನ್ನತ ಶ್ರೇಣಿಯಲ್ಲಿ ಎಂಬಿಎ ಪದವಿ ಪಡೆದರು. ನಂತರ ಚೆನ್ನೈನಲ್ಲಿ `ಫುಡ್ ಕಿಂಗ್~ ಹೋಟೆಲ್ ಆರಂಭಿಸಿದ್ದು, ಚೆನ್ನೈ ಅಲ್ಲದೇ, ಹೈದರಾಬಾದ್ ಮತ್ತು ಜೈಪುರದಲ್ಲಿಯೂ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.`ಐದು ಮಕ್ಕಳ ಜೀವನ ಹಾಗೂ ಶಿಕ್ಷಣದ ಹೊರೆ ಹೊತ್ತ ತಾಯಿ ಅತ್ಯಂತ ಕಷ್ಟದಲ್ಲಿ ಎಲ್ಲರಿಗೂ ಶಿಕ್ಷಣ ಕೊಡಿಸಿದರು. ಮಧ್ಯಾಹ್ನದ ಬಿಸಿಯೂಟ ಯೋಜನೆಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆಕೆ, ಬೆಳಿಗ್ಗೆ ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡಿ, ಸಂಜೆ ವೇಳೆ ವಯಸ್ಕರ ಶಿಕ್ಷಣದಲ್ಲಿ ಪಾಠ ಮಾಡಿ ಗಳಿಸುತ್ತಿದ್ದ ಅತ್ಯಂತ ಕಡಿಮೆ ಹಣದಲ್ಲಿ ಜೀವನ ಸಾಗಿಸುತ್ತಿದ್ದರು. ಅನೇಕ ದಿನ ಉಪವಾಸ ಇದ್ದ ಉದಾಹರಣೆಗಳಿವೆ. ಆಕೆ ಪರಿಶ್ರಮಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಶಿಕ್ಷಣ ಪಡೆದು, ಈಗ ಹೋಟೆಲ್ ಉದ್ಯಮ ನಡೆಸುತ್ತಿದ್ದೇನೆ~ ಎಂದು ಶರತ್ ಸುದ್ದಿ ಸಂಸ್ಥೆಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.