ಗುರುವಾರ , ನವೆಂಬರ್ 21, 2019
20 °C
ಎಐಟಿಎ-ಆಟಗಾರರ ನಡುವಿನ ವಿವಾದಕ್ಕೆ ಪೂರ್ಣ ಮುಕ್ತಿ ಲಭಿಸಿಲ್ಲ: ಸೋಮದೇವ್

`ಭಾರತದ ಟೆನಿಸ್‌ಗೆ ಸಾರಥಿಯಾಗಬ್ಲ್ಲಲೆ'

Published:
Updated:

ಬೆಂಗಳೂರು: `ಭಾರತದ ಟೆನಿಸ್ ಖಂಡಿತ ವಿವಾದದಿಂದ ಪೂರ್ಣ ಮುಕ್ತವಾಗಿಲ್ಲ. ಆದರೆ ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಒಳ್ಳೆಯ ದಿನಗಳು ಬರಲಿವೆ ಎಂಬ ಭರವಸೆ ಮೂಡಿದೆ. ನಮ್ಮ ಉದ್ದೇಶವೇ ಅದು. ಗೆಲ್ಲುತ್ತಾ ಹೋದಂತೆ ವಿವಾದಗಳು ಬದಿಗೆ ಸರಿಯಬಹುದು'-ಇಂಡೊನೇಷ್ಯಾ ಎದುರಿನ ಡೇವಿಸ್ ಕಪ್  ಪೈಪೋಟಿಯಲ್ಲಿ ಭಾರತ 5-0 ಗೆಲುವು ಸಾಧಿಸಿದ ಬಳಿಕ ಸೋಮದೇವ್ ದೇವವರ್ಮನ್ `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದರು.40 ವರ್ಷ ವಯಸ್ಸಿನ ಲಿಯಾಂಡರ್ ಪೇಸ್ ಹಾಗೂ 38 ವರ್ಷ ವಯಸ್ಸಿನ ಮಹೇಶ್ ಭೂಪತಿ ಅವರ ಯುಗ ಮುಗಿಯುತ್ತಾ ಬಂದಿದೆ. ಹಾಗಾಗಿ ಇವರಿಬ್ಬರ ವಿದಾಯದ ಬಳಿಕ ಭಾರತದ ಟೆನಿಸ್ ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿತ್ತು. ಅದಕ್ಕೆಲ್ಲಾ 28 ವರ್ಷ ವಯಸ್ಸಿನ ಸೋಮದೇವ್ ಉತ್ತರವಾಗಿದ್ದಾರೆ.ಭಾರತದ ಪುರುಷರ ಟೆನಿಸ್ ಈಗ ಸೋಮದೇವ್ ಅವರ ಮೇಲೆ ಹೆಚ್ಚು ಅವಲಂಬಿತವಾಗಿದೆ. `ಪೇಸ್, ಭೂಪತಿ ಭಾರತದ ಟೆನಿಸ್‌ಗೆ ನೀಡಿದ ಕೊಡುಗೆ ಅಪಾರ. ಅವರಿಂದ ನಾನು ಹಲವು ವಿಷಯಗಳನ್ನು ಕಲಿತಿದ್ದೇನೆ. ಹಾಗಾಗಿ ಭಾರತ ಟೆನಿಸ್‌ಗೆ ಸಾರಥಿಯಾಗಬಲ್ಲ ಸಾಮರ್ಥ್ಯ ನನ್ನಲ್ಲಿದೆ' ಎಂದು ಅವರು ನುಡಿದಿದ್ದಾರೆ. ಪತ್ರಿಕೆಯೊಂದಿಗೆ ಅವರು ಭಾನುವಾರ ಹಲವು ವಿಷಯ ಹಂಚಿಕೊಂಡಿದ್ದಾರೆ.* ಟೆನಿಸ್ ಸಂಸ್ಥೆ ವಿರುದ್ಧದ ನಿಮ್ಮ ಬಂಡಾಯ ಭಾರತದ ಟೆನಿಸ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿಲ್ಲವೇ?

ನಮ್ಮ ಉದ್ದೇಶ ಸ್ಪಷ್ಟ. ಆಟಗಾರರಿಗೆ ಸಿಗಬೇಕಾದ ನ್ಯಾಯಕ್ಕಾಗಿ ನಾವು ಹೋರಾಟ ನಡೆಸಿದ್ದೇವೆ ಅಷ್ಟೆ. ಇದು ಬಂಡಾಯ ಎಂದು ಮಾಧ್ಯಮಗಳು ಸೃಷ್ಟಿ. ನಾವು ತೆಗೆದುಕೊಂಡ ನಿಲುವಿನಿಂದ ಹಲವು ಸಮಸ್ಯೆಗಳಿಗೆ ಉತ್ತರ ಸಿಕ್ಕಿದೆ.* ಆಟಕ್ಕಿಂತ ಜಗಳ, ವಿವಾದ, ಸಮಸ್ಯೆಯೇ ಹೆಚ್ಚಾಗಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಭಾರತದ ಟೆನಿಸ್‌ನಲ್ಲಿ ಕೆಲವೊಂದು ಸಮಸ್ಯೆ ಇರುವ ಕಾರಣ ಈ ರೀತಿ ಆಗುತ್ತಿದೆ ಅಷ್ಟೆ. ಅದಕ್ಕೆಲ್ಲಾ ಆಟಗಾರರು ಹಾಗೂ ಸಂಸ್ಥೆಯ ಅಧಿಕಾರಿಗಳು ಒಟ್ಟಿಗೆ ಕುಳಿತು ಸಮಾಲೋಚನೆ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಇದರಲ್ಲಿ ಒಬ್ಬರು ವಿರುದ್ಧ ದಿಕ್ಕಿಗೆ ಮುಖ ಮಾಡಿದರೂ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.* ಈ ಸಮಸ್ಯೆಗಳಿಗೆ ಈಗ ಮುಕ್ತಿ ಲಭಿಸಿದೆಯೇ?

ಪೂರ್ಣವಾಗಿ ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕಾಗಿಯೇ ನಾವು ಭಾರತೀಯ ಟೆನಿಸ್ ಆಟಗಾರರ ಸಂಘ ಶುರು ಮಾಡಿದ್ದೇವೆ. ಉತ್ತಮ ದಿಕ್ಕಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.* ಪೇಸ್ ಹಾಗೂ ಭೂಪತಿ ಟೆನಿಸ್ ಯುಗ ಮುಗಿಯುತ್ತಾ ಬಂದಿದೆ. ಈ ಹಂತದಲ್ಲಿ ನಿಮ್ಮ ಜವಾಬ್ದಾರಿ?

ಪೇಸ್ ಹಾಗೂ ಭೂಪತಿ ದೇಶಕ್ಕೆ ನೀಡಿದ ಕೊಡುಗೆ ಅದ್ಭುತ. ಅವರ ಸ್ಥಾನವನ್ನು ತುಂಬುವುದು ಕಷ್ಟ. ಆದರೆ ನನಗೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ.* ಭುಜದ ಗಾಯದ ಬಳಿಕ ಯಾವ ರೀತಿ ಆಟ ಮೂಡಿಬರುತ್ತಿದೆ?

ಭುಜದ ಗಾಯದ ಕಾರಣ ನನ್ನ ರ‌್ಯಾಂಕಿಂಗ್‌ನಲ್ಲಿ ಕುಸಿತ ಕಂಡಿತ್ತು.ಆ ಬಳಿಕ ಹಲವು ಟೂರ್ನಿಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರಿದ್ದೇನೆ. ನೂರು ರ‌್ಯಾಂಕ್‌ನೊಳಗೆ ಸ್ಥಾನ ಪಡೆಯುವ ಗುರಿಯಿದೆ.* ಮಿಯಾಮಿ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಅಗ್ರ ರ‌್ಯಾಂಕ್‌ನ ನೊವಾಕ್ ಜೊಕೊವಿಚ್ ಎದುರು ನಡೆಸಿದ ಪೈಪೋಟಿ ಬಗ್ಗೆ ಹೇಳಿ?

ಹಿಂದೆಯೂ ನಾನು ಅಗ್ರಮಾನ್ಯ ಆಟಗಾರರೊಂದಿಗೆ ಹೋರಾಟ ನಡೆಸಿದ್ದೇನೆ. ಆದರೆ ಜೊಕೊವಿಚ್ ಎದುರಿನ ಪೈಪೋಟಿ ವಿಶೇಷವಾದದ್ದು. ತುಂಬಾ ಅನುಭವ ನೀಡಿತು. ಹಲವು ವಿಚಾರ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.*  ಯುವ ಆಟಗಾರರಿಂದ ಕೂಡಿರುವ ಭಾರತ ಡೇವಿಸ್ ಕಪ್ ತಂಡ ವಿಶ್ವ ಗುಂಪಿಗೆ ಅರ್ಹತೆ ಗಿಟ್ಟಿಸುವ ಸಾಮರ್ಥ್ಯ ಹೊಂದಿದೆಯೇ?

ಖಂಡಿತ ಸಾಧ್ಯವಿದೆ. ಯೂಕಿ ಭಾಂಬ್ರಿ, ಸನಮ್ ಸಿಂಗ್, ವಿಜಯಾಂತ್ ಮಲಿಕ್ ಅವರಂಥ ಆಟಗಾರರು ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸುತ್ತಿದ್ದಾರೆ. ಸ್ಥಿರ ಪ್ರದರ್ಶನ ತೋರಿದರೆ ಕೆಲ ವರ್ಷಗಳಲ್ಲಿ ನಾವು ಡೇವಿಸ್ ಕಪ್ ಟೂರ್ನಿಯ ವಿಶ್ವ ಗುಂಪಿನಲ್ಲಿ ಆಡಬಹುದು.

ಪ್ರತಿಕ್ರಿಯಿಸಿ (+)