ಬುಧವಾರ, ನವೆಂಬರ್ 20, 2019
20 °C
ವಿಶ್ವ ಪ್ಯಾರಾ ಅಥ್ಲೆಟಿಕ್ಸ್: ಜಾವೆಲಿನ್ ಎಸೆತದಲ್ಲಿ ಈ ಸಾಧನೆ

ಭಾರತದ ದೇವೇಂದ್ರಗೆ ಚಿನ್ನದ ಪದಕ

Published:
Updated:

ನವದೆಹಲಿ (ಪಿಟಿಐ): ಭಾರತದ ದೇವೇಂದ್ರ ಜಾಜಾರಿಯಾ ಫ್ರಾನ್ಸ್‌ನ ಲಿಯಾನ್‌ನಲ್ಲಿ ನಡೆಯುತ್ತಿರುವ ಐಪಿಸಿ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕವಿದು.ರಾಜಸ್ತಾನ ಮೂಲದ ದೇವೇಂದ್ರ ರೋನ್ ಕ್ರೀಡಾಂಗಣದಲ್ಲಿ ನಡೆದ `ಎಫ್46' ವಿಭಾಗದ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ. ಅವರು 57.04 ಮೀಟರ್ ದೂರ ಎಸೆದು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇದು ಚಾಂಪಿಯನ್‌ಷಿಪ್‌ನ ದಾಖಲೆ ಕೂಡ. ನ್ಯೂಜಿಲೆಂಡ್‌ನಲ್ಲಿ 2011ರಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಚೀನಾದ ಚುನ್‌ಲಿಯಾಂಗ್ (55.90 ಮೀಟರ್ಸ್‌) ನಿರ್ಮಿಸಿದ್ದ ದಾಖಲೆಯನ್ನು ದೇವೇಂದ್ರ ಅಳಿಸಿ ಹಾಕಿದರು.ರಜತ ಪದಕ ಇರಾನ್‌ನ ಮಿರ್ಶೆಂಕರಿ ಅಬ್ದೊರಸೊಲ್ (52.62 ಮೀಟರ್ಸ್‌) ಅವರ ಪಾಲಾಯಿತು. ಮೂರನೇ ಸ್ಥಾನವನ್ನು ಈಜಿಪ್ಟ್‌ನ ಮೊಹಮ್ಮದ್ ಇಸ್ಮಾಯಿಲ್ (50.22 ಮೀಟರ್ಸ್‌) ಪಡೆದರು.ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಭಾರತದ ಗಿರೀಶ್ ಇದೇ ಚಾಂಪಿಯನ್‌ಷಿಪ್‌ನ ಪುರುಷರ ಹೈಜಂಪ್ (ಟಿ42/44) ಸ್ಪರ್ಧೆಯಲ್ಲಿ  ಆರನೇ ಸ್ಥಾನ ಪಡೆದಿದ್ದರು.ಐದು ಲಕ್ಷ ರೂಪಾಯಿ ಬಹುಮಾನ

32 ವರ್ಷ ವಯಸ್ಸಿನ ಸಾಧಕ ದೇವೇಂದ್ರ ಅವರಿಗೆ ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಐದು ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದೆ. ಈ ವಿಷಯವನ್ನು ಪಿಸಿಐ ಅಧ್ಯಕ್ಷ ಸುಲ್ತಾನ್ ಅಹ್ಮದ್ ತಿಳಿಸಿದ್ದಾರೆ.ದೇವೇಂದ್ರ ಐಪಿಸಿ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಜಯಿಸಿದ ಭಾರತದ ಮೊದಲ ಸ್ಪರ್ಧಿ ಎನಿಸಿದ್ದಾರೆ. ಪದ್ಮಶ್ರೀ ಪುರಸ್ಕೃತ ದೇವೇಂದ್ರ ಒಂದು ಕೈ ಮಾತ್ರ ಹೊಂದಿದ್ದಾರೆ. ಅವರು 2004ರ ಅಥೆನ್ಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. 62.15 ಮೀಟರ್ಸ್‌ ದೂರ ಎಸೆದು ವಿಶ್ವ ದಾಖಲೆ ನಿರ್ಮಿಸಿದ್ದರು.

ಪ್ರತಿಕ್ರಿಯಿಸಿ (+)