ಭಾರತದ ಧ್ವಜ ಹರಿದು ಅಪಮಾನ: ಉಕ್ರೇನ್ ಮಹಿಳೆಯರಿಗೆ ಸಜೆ?

7

ಭಾರತದ ಧ್ವಜ ಹರಿದು ಅಪಮಾನ: ಉಕ್ರೇನ್ ಮಹಿಳೆಯರಿಗೆ ಸಜೆ?

Published:
Updated:

ಮಾಸ್ಕೊ (ಪಿಟಿಐ): ಉಕ್ರೇನ್ ಯುವತಿಯರಿಗೆ ವೀಸಾ ನಿಯಮಗಳನ್ನು ಭಾರತ ಕಠಿಣಗೊಳಿಸಲಿದೆ ಎಂಬ ವರದಿ ಹಿನ್ನೆಲೆಯಲ್ಲಿ ಕಳೆದ ತಿಂಗಳು ಕೀವ್‌ನಲ್ಲಿ ಅರೆನಗ್ನ ಪ್ರತಿಭಟನೆ ನಡೆಸಿ ಭಾರತದ ಧ್ವಜ ಹರಿದುಹಾಕಿದ್ದ ಮಹಿಳೆಯರಿಗೆ ನಾಲ್ಕು ವರ್ಷಗಳ ಕಾಲ ಸಜೆ ಆಗುವ ಸಾಧ್ಯತೆ ಇದೆ.`ನಾವು ವೇಶ್ಯೆಯರಲ್ಲ~ ಎಂಬ ಫಲಕಗಳನ್ನು ಹಿಡಿದ ಮಹಿಳೆಯರು ಭಾರತದ ರಾಯಭಾರಿ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ಅವರಲ್ಲಿ ಕೆಲವರು ಮನೆ ಮಹಡಿಯ ಮೊಗಸಾಲೆಗೆ ಹತ್ತಿಹೋಗಿ ಶೂನ್ಯಕ್ಕಿಂತಲೂ ಕಡಿಮೆ ತಾಪಮಾನ ಇದ್ದರೂ ತಮ್ಮ ಮೇಲುಡುಗೆ ತೆಗೆದು ಭಾರತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.ಪ್ರತಿಭಟನೆ ನಡೆಸಿದ್ದ ಮಹಿಳೆಯರು ಭಾರತದ ಧ್ವಜ ಎಳೆದಾಡಿ, ಬಾಗಿಲು, ಕಿಟಕಿಗಳಿಗೆ ಧ್ವಜವನ್ನು ಹೊಸಕಿ, ನಂತರ ಅದನ್ನು ಹರಿದುಹಾಕಿ ಬೀದಿಯಲ್ಲಿ ಎಸೆದು ಹೋಗಿದ್ದರು. ಪ್ರತಿಭಟನೆ ಮಾಡಿದವರ ವಿರುದ್ಧ ಪುಂಡಾಟಿಕೆ ಮತ್ತು ರಾಷ್ಟ್ರವೊಂದರ ಲಾಂಛನಕ್ಕೆ ಅವಮಾನ ಎಸಗಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.ಉಕ್ರೇನ್ ಮಹಿಳೆಯರಿಗೆ, ವಿಶೇಷವಾಗಿ 15ರಿಂದ 40 ವರ್ಷದೊಳಗಿನವರಿಗೆ ವೀಸಾ ನೀಡುವಾಗ ಕೂಲಂಕಷವಾಗಿ ಪರಿಶೀಲಿಸುವಂತೆ ಭಾರತದ ವಿದೇಶಾಂಗ ಸಚಿವಾಲಯ ಆದೇಶಿಸಿದೆ ಎಂಬ ವರದಿಯಿಂದ ಸಿಟ್ಟಿಗೆದ್ದ ಉಕ್ರೇನ್ ಮಹಿಳೆಯರು ಈ ರೀತಿ ಪ್ರತಿಭಟನೆ ನಡೆಸಿದ್ದರು.ಭಾರತದಲ್ಲಿ ವೇಶ್ಯಾವಾಟಿಕೆ ಹೆಚ್ಚುತ್ತಿದ್ದು, ಇದರಲ್ಲಿ ಕೇಂದ್ರ ಏಷ್ಯಾ ರಾಷ್ಟ್ರಗಳ ಮಹಿಳೆಯರೂ ಭಾಗಿಯಾಗಿದ್ದಾರೆ ಎಂಬ ಹಿನ್ನೆಲೆಯಲ್ಲಿ ಉಕ್ರೇನ್ ಯುವತಿಯರಿಗೆ ವೀಸಾ ನಿಯಮಗಳನ್ನು ಕಠಿಣಗೊಳಿಸಲು ಭಾರತ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.ಉಕ್ರೇನ್‌ನಲ್ಲಿ ಹೀಗೆ ಅರೆನಗ್ನ ಪ್ರತಿಭಟನೆ ನಡೆಸುವುದು 2008ರಿಂದ ಈಚೆಗೆ ಸಾಮಾನ್ಯವಾಗಿದೆ. ಆದರೆ ಅಂತಹ ಸಂದರ್ಭದಲ್ಲಿ ರಾಷ್ಟ್ರವೊಂದರ ಲಾಂಛನಕ್ಕೆ ಅಪಮಾನ ಎಸಗಿದ್ದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು. ಹೀಗಾಗಿ, ಅರೆನಗ್ನ ಪ್ರತಿಭಟನೆ ವೇಳೆ ಕ್ರಿಮಿನಲ್ ಮೊಕದ್ದಮೆಗೆ ಒಳಗಾದ ಮೊತ್ತಮೊದಲನೆಯ ಪ್ರಕರಣವೂ ಇದಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry