ಭಾರತದ ವನಿತೆಯರಿಗೆ ಅಗ್ನಿಪರೀಕ್ಷೆ

7

ಭಾರತದ ವನಿತೆಯರಿಗೆ ಅಗ್ನಿಪರೀಕ್ಷೆ

Published:
Updated:

ನವದೆಹಲಿ: ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಭಾರತ ಮಹಿಳಾ ಹಾಕಿ ತಂಡ ದಕ್ಷಿಣ ಆಫ್ರಿಕಾ ಎದುರು ಫೈನಲ್ ಆಡುವುದೇ ಎನ್ನುವ ಪ್ರಶ್ನೆಗೆ ಶುಕ್ರವಾರ ಸಂಜೆಯೇ ಉತ್ತರ ನೀಡಲು ಸಾಧ್ಯ!

ಬುಧವಾರ ಸಂಜೆ ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ಮಾಡಿದ ತಪ್ಪುಗಳಿಂದಾಗಿ ಭಾರತದ ಮಹಿಳೆಯರ ತಂಡ ಶುಕ್ರವಾರ ಅಗ್ನಿಪರೀಕ್ಷೆ ಎದುರಿಸಬೇಕಾಗಿದೆ.ನಿನ್ನೆ ಪಂದ್ಯದಲ್ಲಿ ಸ್ವಲ್ಪ ಹೆಚ್ಚು ಶ್ರಮಪಟ್ಟಿದ್ದರೆ, ಹೊಂದಾಣಿಕೆ ಮತ್ತು ಪಾಸಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರೆ ಈ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಶುಕ್ರವಾರ ಇಟಲಿ ತಂಡವನ್ನು ಸೋಲಿಸಿದರೆ ಮಾತ್ರ ಫೈನಲ್‌ನಲ್ಲಿ ಆಡುವ ಅವಕಾಶ ಅಸುಂತಾ ಲಕ್ರಾ ಬಳಗಕ್ಕೆ. ಇಲ್ಲದಿದ್ದರೆ ಒಲಿಂಪಿಕ್ಸ್ ಅರ್ಹತೆಯ ಕನಸು ನುಚ್ಚುನೂರು.32 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಲಕ್ರಾ ಬಳಗದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಅರ್ಹತಾ ಟೂರ್ನಿಯ ಮೊದಲ ಪಂದ್ಯದಲ್ಲಿ ಉಕ್ರೇನ್ ವಿರುದ್ಧ ಡ್ರಾ ಮಾಡಿಕೊಂಡಿದ್ದ ತಂಡ ನಂತರದ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದು ಮೊದಲ ಸ್ಥಾನಕ್ಕೇರಿತ್ತು.

 

ಆದರೆ ಬುಧವಾರ ದಕ್ಷಿಣ ಆಫ್ರಿಕಾ ಭಾರತವನ್ನು ಸುಲಭವಾಗಿ ಸೋಲಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕುಳಿತುಬಿಟ್ಟಿತು. ಆದರೆ ಭಾರತ ತಂಡ ಮೂರನೇ ಸ್ಥಾನಕ್ಕೆ ಕುಸಿಯಿತು.ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅನುರಾಧಾ ದೇವಿ ಗಾಯಗೊಂಡು ಹೊರಗುಳಿದಿದ್ದು ಮತ್ತು ಪೆನಾಲ್ಟಿ ಕಾರ್ನರ್‌ಗಳನ್ನು ಸಮರ್ಥವಾಗಿ ನಿಭಾಯಿಸದ ದೌರ್ಬಲ್ಯದಿಂದಾಗಿ ವನಿತೆಯರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.ನಾಲ್ಕರಲ್ಲಿ ಎರಡು ಪಂದ್ಯ ಗೆದ್ದು, ಎರಡರಲ್ಲಿ ಸೋತಿರುವ ಇಟಲಿ ಸುಲಭವಾಗಿ ಸೋಲುವ ತಂಡವಲ್ಲ. ಅನುಭವ ಕಡಿಮೆಯಿರುವ ಆಟಗಾರ್ತಿಯರನ್ನು ಹೊಂದಿದ್ದರೂ ಕೌಶಲಪೂರ್ಣ ಆಟದಿಂದ ಇಟಲಿ ತಂಡ ಗಮನ ಸೆಳೆದಿದೆ. 62 ಪಂದ್ಯಗಳನ್ನು ಆಡಿರುವ ನಾಯಕಿ ಚೇರಾ ಟಿಡ್ಡಿ ಬಳಗವು ಈಗ ಸಿಕ್ಕಿರುವ ಸದವಕಾಶವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಆದ್ದರಿಂದ ಭಾರತ ಶುಕ್ರವಾರ `ಮಾಡು ಇಲ್ಲವೇ ಮಡಿ~ ಎನ್ನುವ ಛಲದಲ್ಲಿ ಪಂದ್ಯವನ್ನು ಆಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry