ಮಂಗಳವಾರ, ಮಾರ್ಚ್ 2, 2021
29 °C
ಸೌರಶಕ್ತಿ ಯೋಜನೆಯಲ್ಲಿ ಸ್ಥಳೀಯ ಸಾಮಗ್ರಿ ಬಳಕೆ

ಭಾರತದ ವಿರುದ್ಧ ಡಬ್ಲ್ಯುಟಿಒಗೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ ವಿರುದ್ಧ ಡಬ್ಲ್ಯುಟಿಒಗೆ ದೂರು

ವಾಷಿಂಗ್ಟನ್‌/ಮುಂಬೈ(ಪಿಟಿಐ): ಸೌರಶಕ್ತಿ ಯೋಜನೆ­ಯಲ್ಲಿ ಸ್ಥಳೀಯ ಸಾಮಗ್ರಿಗಳನ್ನೆ ಬಳಸಬೇಕೆಂಬ ಭಾರತದ ನಿರ್ಧಾರ ಇದೀಗ ವಿವಾದಕ್ಕೆ ಕಾರಣವಾಗಿದೆ.ಭಾರತದ ಈ ಕ್ರಮವನ್ನು ಪ್ರಶ್ನಿಸಿರುವ ಅಮೆರಿಕ, ಈ  ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವ ವಾಣಿಜ್ಯ ಸಂಘಟನೆಗೆ (ಡಬ್ಲ್ಯುಟಿಒ) ದೂರು ಸಲ್ಲಿಸಿದೆ. ಇದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವುದಾಗಿ ಭಾರತ ಹೇಳಿದೆ.‘ಭಾರತದ ಸೌರಶಕ್ತಿ ಕಾರ್ಯಕ್ರಮದ ಎರಡನೇ ಹಂತದಲ್ಲಿ ಸ್ಥಳೀಯ ವಸ್ತುಗಳನ್ನೆ ಬಳಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಸಂಬಂಧಿಸಿದಂತೆ ಭಾರತದೊಂದಿಗೆ ಸಮಾಲೋಚನೆ ನಡೆಸಿ ವಿವಾದ ಬಗೆಹರಿಸಲು ಡಬ್ಲ್ಯುಟಿಒ ಮೊರೆ ಹೋಗಿದ್ದೇವೆ’ ಎಂದು ಅಮೆರಿಕದ ವಾಣಿಜ್ಯ ಪ್ರತಿನಿಧಿ ಮೈಕಲ್‌ ಫ್ರೊಮ್ಯಾನ್‌ ತಿಳಿಸಿದ್ದಾರೆ.‘ಭಾರತದ ಈ ನಿರ್ಧಾರ ತಾರತಮ್ಯದಿಂದ ಕೂಡಿದೆ. ಅಲ್ಲದೇ ಡಬ್ಲ್ಯುಟಿಒ ನಿಯಮಗಳಿಗೆ ವಿರುದ್ಧವಾದದ್ದು. ಅಮೆರಿಕದ ಉದ್ಯಮಿಗಳು ಮತ್ತು ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದ್ದಾರೆ.ಭಾರತವು 2010ರಲ್ಲಿ ಜವಾಹರಲಾಲ್‌ ನೆಹರು ರಾಷ್ಟ್ರೀಯ ಸೌರಶಕ್ತಿ ಯೋಜನೆ ಜಾರಿಗೆ ತಂದಿತ್ತು. ಸೌರಶಕ್ತಿಯಿಂದ 2022ರವರೆಗೆ 20 ಸಾವಿರ ಮೆಗಾವಾಟ್‌ ಗ್ರಿಡ್‌ ಸಂಪರ್ಕಿಸುವ ಗುರಿ ಹೊಂದಿದೆ.

‘ನಿಯಮಕ್ಕೆ ತಕ್ಕಂತೆ ಇದೆ’

‘ನಮ್ಮ ಸೌರಶಕ್ತಿ ಕಾರ್ಯಕ್ರಮ ಡಬ್ಲ್ಯುಟಿಒ ನಿಯಮ­ಗಳಿಗೆ ಅನುಗುಣವಾಗಿಯೇ ಇದೆ. ನಮ್ಮ ವಾದವನ್ನು ಡಬ್ಲ್ಯುಟಿಒನಲ್ಲಿ ಪ್ರಬಲವಾಗಿ ಮಂಡಿಸುತ್ತೇವೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ ಶರ್ಮಾ ಹೇಳಿದ್ದಾರೆ.ಸೌರಶಕ್ತಿ ಕಾರ್ಯಕ್ರಮವು ದೊಡ್ಡ ಮೊತ್ತದ ಸಬ್ಸಿಡಿಯನ್ನು ಒಳಗೊಂಡಿದೆ. ಸಾರ್ವಜನಿಕರ ಹಣವನ್ನು ವಸ್ತುಗಳ ಆಮದಿಗೆ ಅನಗತ್ಯವಾಗಿ ವೆಚ್ಚ ಮಾಡುವುದಿಲ್ಲ ಎಂದೂ ತಿಳಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.