ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಜಯ

7

ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಜಯ

Published:
Updated:

ಬೆಂಗಳೂರು: ಕನ್ನಡಿಗ ಪ್ರಕಾಶ್ ಜಯರಾಮಯ್ಯ ಅವರ ಶತಕದ ಓಟ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಮುಂದುವರಿಯಿತು. ಆದರೆ, ಪಾಕ್ ತಂಡದ ಬ್ಯಾಟ್ಸ್‌ಮನ್‌ಗಳ ಅಬ್ಬರದ ಬ್ಯಾಟಿಂಗ್ ಮುಂದೆ ಆತಿಥೇಯರು ನಿರಾಸೆ ಅನುಭವಿಸಬೇಕಾಯಿತು.ನೆಲಮಂಗಲದ ಬಳಿಯಿರುವ ಆದಿತ್ಯ ಗ್ಲೋಬಲ್ ಶಾಲಾ ಮೈದಾನದಲ್ಲಿ ಶುಕ್ರವಾರ ನಡೆದ ಅಂಧರ ಚೊಚ್ಚಲ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಆತಿಥೇಯ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲೂ ಶತಕ ಸಂಪಾದಿಸಿದ್ದ ಪ್ರಕಾಶ್ (126, 82 ಎಸೆತ) ಪಾಕ್ ವಿರುದ್ಧವೂ ಅಬ್ಬರಿಸಿದರು. ಇವರ ಶತಕದ ನೆರವಿನಿಂದ ಶೇಖರ್ ನಾಯ್ಕ ಸಾರಥ್ಯದ ಭಾರತ 20 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 250 ರನ್ ಗಳಿಸಿತು. ಪಾಕ್ 18.5 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಈ ಗುರಿ ತಲುಪಿತು.ಹಿಂದೆ ಆಡಿದ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಕಂಡಿದ್ದ ಭಾರತಕ್ಕೆ ಈ ಟೂರ್ನಿಯಲ್ಲಿ ಎದುರಾದ ಮೊದಲ ಸೋಲು ಇದು. ಪಾಕ್ ಒಂದೂ ಸೋಲು ಕಾಣದೆ ಅಜೇಯ ಗೆಲುವಿನ ಓಟ ಮುಂದುವರಿಸಿದೆ.ಸೋತರೂ ಮನಗೆದ್ದರು:ಭಾರತ ತಂಡದವರು ಪಾಕ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡರೂ, ಕ್ರೀಡಾಪ್ರೇಮಿಗಳ ಮನಗೆಲ್ಲುವಲ್ಲಿ ಯಶ ಕಂಡರು. ಪ್ರಕಾಶ್ ಅವರ ಶತಕದ ರಸದೂಟದ ಸವಿಯಲ್ಲಿ ಮಿಂದು ಅಭಿಮಾನಿಗಳು ಸಂಭ್ರಮ ಪಟ್ಟರು. ಸಾಂಪ್ರದಾಯಿಕ ಎದುರಾಳಿಗಳ  ನಡುವಿನ ಪಂದ್ಯವಾದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು. ಶಾಲಾ ಮಕ್ಕಳು ಹೆಚ್ಚಾಗಿ ಬಂದಿದ್ದು ವಿಶೇಷವಾಗಿತ್ತು. ಶನಿವಾರ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರು ನೇಪಾಳ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.ದಿನದ ಇತರ ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ನೇಪಾಳ ವಿರುದ್ಧ ಹತ್ತು ವಿಕೆಟ್ ಗೆಲುವು ಪಡೆದರೆ, ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ಬಳಗವನ್ನು 27 ರನ್‌ಗಳಿಂದ ಸೋಲಿಸಿತು. ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾದವರು ಬಾಂಗ್ಲಾದೇಶ ವಿರುದ್ಧ 95 ರನ್‌ಗಳ ಸುಲಭ ಜಯ ಪಡೆದರು.ಸಂಕ್ಷಿಪ್ತ ಸ್ಕೋರು: ಭಾರತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 250. (ಪ್ರಕಾಶ್ ಜಯರಾಮಯ್ಯ 126, ಕೇತನ್ ಪಟೇಲ್ 72). ಪಾಕಿಸ್ತಾನ 18.5 ಓವರ್‌ಗಳಲ್ಲಿ 2 ವಿಕೆಟ್‌ಗೆ 251. (ಮಹಮ್ಮದ್ ಅಕ್ರಮ್ 98, ಅಮೀರ್ ಇಷಾಫಿಕ್ ಔಟಾಗದೆ 90, ಮಹಮ್ಮದ್ ಜಮೀಲ್ ಔಟಾಗದೆ 45). ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್‌ಗಳ ಜಯ. ಪಂದ್ಯ ಶ್ರೇಷ್ಠ: ಅಮೀರ್ ಇಷಾಫಿಕ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry