ಸೋಮವಾರ, ಜನವರಿ 20, 2020
18 °C

ಭಾರತದ ವೈದ್ಯರತ್ತ ಜಗದ ಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: “ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ ಭಾರತದ ವೈದ್ಯರ ಬಗ್ಗೆ ಇರುವ ಗೌರವ ಹಾಗೂ ಅಭಿಮಾನ ಬೇರೆ ದೇಶಗಳ ವೈದ್ಯರಿಗೆ ಸಿಕ್ಕಿಲ್ಲ. ನಮ್ಮ ವೈದ್ಯರ ಈ ಸಾಧನೆ ಸಣ್ಣದೇನಲ್ಲ” ಎಂದು ಖ್ಯಾತ ವಾಗ್ಮಿ ಸೂಲಿಬೆಲೆ ಚಕ್ರವರ್ತಿ ಶ್ಲಾಘಿಸಿದರು.ಒಂದು ಕಾಲದಲ್ಲಿ ಭಾರತದ ವೈದ್ಯರು ಹಾಗೂ ಔಷಧಿಗಳ ಬಗ್ಗೆ ತಾತ್ಸಾರ ಮನೋಭಾವ ಇತ್ತು; ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಭಾರತದ ವೈದ್ಯರು ಹಾಗೂ ಇಲ್ಲಿ ಉತ್ಪಾದನೆಯಾಗುವ ಔಷಧಿಗಳಿಗೆ ಮನ್ನಣೆ ಇದೆ ಎಂದು ಅವರು ಹೇಳಿದರು.ಭಾನುವಾರ ಸಂಜೆ ಇಲ್ಲಿ ನಡೆದ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ 12ನೇ ವಾರ್ಷಿಕೋತ್ಸವದಲ್ಲಿ ವೈದ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. “ಆರೋಗ್ಯ ಕ್ಷೇತ್ರದಲ್ಲಿ ಕೇವಲ ಕಂಪ್ಯೂಟರ್ ತಪಾಸಣೆ ವರದಿ ನೋಡಿ ಔಷಧಿ ಕೊಡುವ ವೈದ್ಯರಿದ್ದಾರೆ. ಇಂಥ ಸಮಯದಲ್ಲಿ ವೈದ್ಯರ ಅಗತ್ಯವಾದರೂ ಏನಿದೆ? ದೇಹದ ಯಾವ ಭಾಗದ ಯಾವ ಕಾಯಿಲೆಗಳಿಗೆ ಯಾವ ಔಷಧಿ ಕೊಡಬೇಕು ಎಂಬ ಬಗ್ಗೆ ಪಠ್ಯದಲ್ಲಿ ಮಾಹಿತಿ ಇರುತ್ತದೆಯೇ ಹೊರತೂ ಪ್ರೀತಿ, ಅಂತಃಕರಣಕ್ಕೆ ಅಲ್ಲಿ ಜಾಗವೇ ಇಲ್ಲ!” ಎಂದು ಅವರು ಉದ್ಗರಿಸಿದರು. ಆರೋಗ್ಯ ಎಂಬುದು ಮಾತ್ರೆಗಳಿಗೆ ಅಲ್ಲ; ಮನಸ್ಸಿಗೆ ಸಂಬಂಧಿಸಿದೆ. ಮನಸ್ಸು ದೃಢವಾಗಿದ್ದರೆ ಶರೀರಕ್ಕೆ ಯಾವುದೇ ರೋಗ ದಾಳಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಚಕ್ರವರ್ತಿ, ಎದುರಿಗೆ ಕುಳಿತು ರೋಗಿಯನ್ನು ಬಂಧುವಿನಂತೆ ಭಾವಿಸಿ ವೈದ್ಯರು ಚಿಕಿತ್ಸೆ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.2011ನೇ ಸಾಲಿನ `ಡಾ. ಪಿ.ಎಸ್.ಶಂಕರ ವೈದ್ಯಶ್ರೀ~ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಿ.ಎನ್.ಮಂಜುನಾಥ, ನೂರು ಜನರಿಗೆ ಉಪದೇಶ ಮಾಡುವ ಬದಲಿಗೆ ಒಬ್ಬನಿಗೆ ನೆರವು ನೀಡುವುದು ಶ್ರೇಷ್ಠ ಎಂಬ ಭಾವನೆಯಿಂದ ವೈದ್ಯ ವೃತ್ತಿ ಸ್ವೀಕರಿಸಿದ್ದಾಗಿ ನುಡಿದರು.`ನೋವು ನೀಗುವ ಕಾಯಕದಲ್ಲಿ ಕಂಡ ಬದುಕು, ಬೆಳಕು~ ಕೃತಿಗೆ 2010ನೇ ಸಾಲಿನ `ಶ್ರೇಷ್ಠ ವೈದ್ಯ ಸಾಹಿತ್ಯ~ ಪ್ರಶಸ್ತಿ ಪಡೆದ ಖ್ಯಾತ ಹೋಮಿಯೋಪಥಿ ತಜ್ಞ ಡಾ. ಬಿ.ಟಿ.ರುದ್ರೇಶ, ಸಾಹಿತ್ಯ ಮನುಷ್ಯನನ್ನು ಉತ್ತಮ ಕೆಲಸಕ್ಕೆ ಪ್ರೇರೇಪಿಸಬೇಕು. ಆತನಲ್ಲಿ ಮಾನವೀಯ ಚಿಂತನೆ ಮೂಡಿಸಬೇಕು ಎಂದು ಆಶಿಸಿದರು.ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ, ಉಪಾಧ್ಯಕ್ಷ ಡಾ. ಎಸ್.ಎಸ್.ಪಾಟೀಲ, ಕಾರ್ಯದರ್ಶಿ ಎಸ್.ಎಸ್.ಹಿರೇಮಠ ಹಾಗೂ ಡಾ. ಪಿ.ಎಸ್.ಶಂಕರ ವೇದಿಕೆಯಲ್ಲಿ ಇದ್ದರು.

ಪ್ರತಿಕ್ರಿಯಿಸಿ (+)