ಶನಿವಾರ, ಡಿಸೆಂಬರ್ 7, 2019
16 °C

ಭಾರತದ ಹಳೆಯ ಚಾಳಿ ಮತ್ತೆ ಶುರು...

Published:
Updated:
ಭಾರತದ ಹಳೆಯ ಚಾಳಿ ಮತ್ತೆ ಶುರು...

ಸತತ ಆರು ಸೋಲು. ಕೆಲವು ಪಂದ್ಯಗಳು ನಾಲ್ಕೇ ದಿನದಲ್ಲಿ ಅಂತ್ಯ...!

ವಿದೇಶಿ ನೆಲದಲ್ಲಿ ಟೆಸ್ಟ್ ಗೆಲ್ಲುವುದನ್ನು ಕಲಿಸಿಕೊಟ್ಟಿದ್ದು ಆಗಿನ ನಾಯಕ ಸೌರವ್ ಗಂಗೂಲಿ ಎನ್ನುತ್ತಾರೆ. ಆದರೆ ಮಹೇಂದ್ರ ಸಿಂಗ್ ದೋನಿ ಈಗ ಹಳೆಯ ಚಾಳಿಗೆ ಮತ್ತೆ ಹೊಸ ಮುನ್ನುಡಿ ಬರೆಯುವವರಂತೆ ಕಾಣುತ್ತಿದ್ದಾರೆ.ಅವರು ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಗೆದ್ದುಕೊಟ್ಟಿರಬಹುದು, 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಜಯಕ್ಕೆ ಕಾರಣರಾಗಿರಬಹುದು. ಆದರೆ ವಿದೇಶಿ ನೆಲದಲ್ಲಿ ನಾಯಕರಾಗಿ ವಿಫಲರಾಗಿದ್ದೇ ಹೆಚ್ಚು. ದೋನಿ ಅವರ ನಾಯಕತ್ವ ಶೈಲಿಯತ್ತ ಟೀಕೆಗಳ ಬಾಣ ಎಸೆಯುತ್ತಿರುವ ಮಾಜಿ ಆಟಗಾರರ ಮಾತುಗಳನ್ನು ಪರಿಗಣಿಸಿದರೆ ಇಂತಹದೊಂದು ನಿರ್ಧಾರಕ್ಕೆ ಬರಬಹುದು. ಆಸ್ಟ್ರೇಲಿಯಾ ಮಾಧ್ಯಮಗಳು ಕೂಡ ದೋನಿ ನಾಯಕತ್ವದ ಶೈಲಿಯನ್ನು ಬೆತ್ತಲು ಮಾಡುತ್ತಿವೆ.ದೋನಿಗೆ ತಮ್ಮ ಎಂದಿನ ಆ `ಸ್ಪರ್ಶ~ವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವಿದೇಶಿ ನೆಲದಲ್ಲಿ ಅವರ ಯೋಚನೆ, ಯೋಜನೆ ಈಗ ಕ್ಲಿಕ್ ಆಗುತ್ತಿಲ್ಲ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರಿನ ಸರಣಿಯೇ ಅದಕ್ಕೆ ಉದಾಹರಣೆ. ವಿದೇಶದಲ್ಲಿ ಆಡಿದ ಕೊನೆಯ 12 ಟೆಸ್ಟ್‌ಗಳಲ್ಲಿ ಭಾರತ 16 ಬಾರಿ 300ಕ್ಕಿಂತ ಕಡಿಮೆ ಸ್ಕೋರ್ ಮಾಡಿರುವುದು ಅದಕ್ಕೆ ಮತ್ತೊಂದು ಸಾಕ್ಷಿ.ನಿಜ, ಅನನುಭವಿ ಬ್ಯಾಟ್ಸ್‌ಮನ್‌ಗಳು ವಿಫಲವಾದರೆ ದೋನಿ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆ ಏಳಬಹುದು. ಆದರೆ ಕಪಿಲ್ ದೇವ್ ಪ್ರಕಾರ ಹಿರಿಯ ಆಟಗಾರರಿಗೆ ತಮ್ಮ ತಮ್ಮ ಪಾತ್ರದ ಬಗ್ಗೆ ಅರಿವು ಮೂಡಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಜೊತೆಗೆ ವಿದೇಶಿ ನೆಲದಲ್ಲಿ ಸ್ವತ: ದೋನಿ ಅವರ ಪ್ರದರ್ಶನ ತುಂಬಾ ಕಳಪೆಯಾಗಿದೆ. ಇದರಿಂದ ಅವರ ಮೇಲೆ ಸಹ ಆಟಗಾರರು ಇಟ್ಟಿರುವ ಗೌರವ ಕಡಿಮೆಯಾಗುತ್ತದೆ ಎನ್ನುವುದು ಸುನಿಲ್ ಗಾವಸ್ಕರ್ ವಿಶ್ಲೇಷಣೆ.1990-2000ರ ಅವಧಿಯಲ್ಲಿ ಭಾರತ ವಿದೇಶಿ ನೆಲದಲ್ಲಿ ಗೆಲ್ಲುವುದು ಒತ್ತಟ್ಟಿಗಿರಲಿ, ಮೂರು ದಿನದೊಳಗೆ ಟೆಸ್ಟ್ ಪಂದ್ಯ ಮುಗಿಯದಿದ್ದರೆ ಸಾಕು ಎಂದು ಪಾಯೋಜಕರು ಹಾಗೂ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದರು. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಂತಹ ತಂಡಗಳ ಎದುರು ಭಾರತ 100 ರನ್‌ಗಳಿಸಲು ಪರದಾಡುತಿತ್ತು. ಹಾಗಾಗಿ ಟೆಸ್ಟ್ ಪಂದ್ಯ ಮೂರು ದಿನಗಳಲ್ಲಿ ಮುಗಿದು ಹೋಗುತಿತ್ತು. ಗಂಗೂಲಿ ನಾಯಕರಾಗಿ ಬಂದ ಮೇಲೆ ವಿದೇಶದಲ್ಲೂ ಭಾರತ ಗೆಲ್ಲುವುದನ್ನು ಅಭ್ಯಾಸ ಮಾಡಿಕೊಂಡಿತ್ತು. ಆದರೆ ಈಗ ಮತ್ತೆ ಹಳೆಯ ಟ್ರ್ಯಾಕ್‌ಗೆ ಹಿಂದಿರುಗುವಂತೆ ಭಾಸವಾಗುತ್ತಿದೆ.ಇನ್ನು ಈ ಸರಣಿಯಲ್ಲಿ ತಿರುಗೇಟು ನೀಡುವುದು ಬದಿಗಿರಲಿ, ಇದುವರೆಗಿನ ಆಘಾತದಿಂದ ಹೊರ ಬಂದರೆ ಅದೇ ಅದೃಷ್ಟ. ಗಾವಸ್ಕರ್ ಹಾಗೂ ಗ್ಲೆನ್ ಮೆಕ್‌ಗ್ರಾ ಹೇಳಿದಂತೆ ಭಾರತ ಇನ್ನು ಈ ಸರಣಿಯಲ್ಲಿ ಒಂದು ಪಂದ್ಯದಲ್ಲಿ ಗೆಲ್ಲುವುದು ಕೂಡ ಕಷ್ಟ! ಏಕೆಂದರೆ ಕಾಂಗರೂ ನಾಡಿನ ಪಿಚ್‌ಗಳ ಪೈಕಿ ಸಿಡ್ನಿ `ಬ್ಯಾಟ್ಸ್‌ಮನ್ ಸ್ನೇಹಿ~ ಎನಿಸಿದೆ. ಆದರೆ ಈ ಪಿಚ್‌ನ್ಲ್ಲಲೇ ತಿರುಗೇಟು ನೀಡಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಇನ್ನು `ವೇಗಿಗಳ ಸ್ವರ್ಗ~ ಎನಿಸಿರುವ      ಪರ್ತ್‌ನಲ್ಲಿ ಈ ಬ್ಯಾಟ್ಸ್‌ಮನ್‌ಗಳು ಏನು ಮಾಡುತ್ತಾರೊ ಏನೋ?ಸಚಿನ್ ಹೊರತುಪಡಿಸಿ ಉಳಿದವರೆಲ್ಲಾ ಪೂರ್ಣ ವೈಫಲ್ಯ ಅನುಭವಿಸುತ್ತಿದ್ದಾರೆ. ಶತಕಗಳ ಶತಕ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆಗಳನ್ನು ಸಚಿನ್ ಎದುರಿಸುತ್ತಿರಬಹುದು. ಆದರೆ ಈ ಸರಣಿಯಲ್ಲಿ ಕಾಂಗರೂಗಳ ವೇಗಕ್ಕೆ ಎದೆಕೊಟ್ಟು ಆಡುತ್ತಿರುವುದು ಸಚಿನ್ ಮಾತ್ರ. ನೂರಾರು ದಾಖಲೆ ನಿರ್ಮಿಸಿರುವ ಸಚಿನ್‌ಗೆ ಇದೊಂದು ಸಾಧನೆ ಮಾಡುವುದು ದೊಡ್ಡ ವಿಷಯವಲ್ಲ. ಇಲ್ಲಿಯವರೆಗೆ 99 ಶತಕ ಗಳಿಸಿದ್ದರಲ್ಲ ಎಂಬುದನ್ನು ನೆನೆದು ಖುಷಿಪಡಬೇಕು. ಆದರೆ ಮುಕ್ಕಾಲು ಭಾಗ ತುಂಬಿರುವ ನೀರಿನ ಲೋಟದ ಖಾಲಿ ಭಾಗದತ್ತ ಕೈ ಮಾಡುವುದು ಬೇಡ!ಆಫ್ ಸ್ಪಿನ್ನರ್ ಅಶ್ವಿನ್ ಯಾವುದೇ ಭಯವಿಲ್ಲದೇ ಬ್ಯಾಟ್ ಬೀಸಿ ರನ್ ಗಳಿಸುತ್ತಿದ್ದಾರೆ. ಆದರೆ ಅನುಭವಿ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಸಚಿನ್ (226) ಬಳಿಕ ಈ ಸರಣಿಯಲ್ಲಿ ಇದುವರೆಗೆ ಹೆಚ್ಚು ರನ್ ಗಳಿಸಿರುವ ಆಟಗಾರ ಅಶ್ವಿನ್ (143 ರನ್). ಇನ್ನು ವಿರಾಟ್ ಕೊಹ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದ್ದಾರೆ.ವಿದೇಶಿ ಪಿಚ್‌ಗಳಲ್ಲಿ ಕೊಹ್ಲಿ ಕಳೆದ 11  ಇನಿಂಗ್ಸ್‌ಗಳಿಂದ ಕಲೆಹಾಕಿರುವುದು ಕೇವಲ 150 ರನ್. ದ್ರಾವಿಡ್ 2011ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಲ್ಲಿ ಒಬ್ಬರು. ಇಂಗ್ಲೆಂಡ್ ಎದುರು 4-0ರಲ್ಲಿ ಸೋತರೂ ಅವರು ಮಿಂಚಿದ್ದರು. ಆದರೆ ಇಲ್ಲಿ ಬೌಲ್ಡ್ ಆಗುವುದೊಂದೇ ಕೆಲಸವಾಗಿಬಿಟ್ಟಿದೆ. ನೋಬಾಲ್‌ನಲ್ಲಿ ಒಮ್ಮೆ ಬೌಲ್ಡ್ ಆಗಿದ್ದು ಸೇರಿ ನಾಲ್ಕು ಬಾರಿ ಬ್ಯಾಟ್ ಹಾಗೂ ಪ್ಯಾಡ್ ನಡುವೆ ನುಸುಳಿದ ಚೆಂಡು ವಿಕೆಟ್‌ಗೆ ಅಪ್ಪಳಿಸಿದೆ. ಈ ಲೋಪ ಸರಿಪಡಿಸಿಕೊಳ್ಳಲು ಎಷ್ಟು ಪ್ರಯತ್ನಪಟ್ಟರೂ ಅವರಿಗೆ ಸಾಧ್ಯವಾಗುತ್ತಿಲ್ಲ.ಆಸ್ಟ್ರೇಲಿಯಾ ಕಂಡ ಅತಿ ದುರ್ಬಲ ತಂಡ ಎಂದು ಮೈಕಲ್ ಕ್ಲಾರ್ಕ್ ಪಡೆಯನ್ನು ಟೀಕಿಸಲಾಗಿತ್ತು. ಆದರೆ ಇಂತಹ ತಂಡದ ಎದುರು ಎರಡೂ ಟೆಸ್ಟ್ ಪಂದ್ಯಗಳನ್ನು ನಾಲ್ಕು ದಿನದೊಳಗೆ ಸೋತಿದ್ದು ವಿಪರ್ಯಾಸ. ಫಾರ್ಮ್‌ನಲ್ಲಿ ಇಲ್ಲದೇ ಸ್ಥಾನ ಕಳೆದುಕೊಳ್ಳುವ ಹಂತದಲ್ಲಿದ್ದ ಪಾಂಟಿಂಗ್ ಹಾಗೂ ಹಸ್ಸಿ ಅವರಿಗೆ ಇನ್ನೊಂದಿಷ್ಟು ದಿನ ಆಡಲು ಅವಕಾಶ ಮಾಡಿಕೊಟ್ಟ್ದ್ದಿದು ಬಿಟ್ಟರೆ ಈ ಸರಣಿಯಲ್ಲಿ ಭಾರತದ ಇದುವರೆಗಿನ ಸಾಧನೆ ಶೂನ್ಯ.

ಆಸ್ಟ್ರೇಲಿಯಾದಲ್ಲಿ ಈಗೊಂದು ಜೋಕು ಹರಿದಾಡುತ್ತಿದೆ. ಅದೆಂದರೆ  ಆ ದೇಶದ ಪ್ರಧಾನಿ ಜೂಲಿಯಾ ಗಿಲಾರ್ಡ್ ಭೇಟಿ ಮಾಡಲು ಭಾರತದ ಆಟಗಾರರು 15 ನಿಮಿಷ ಕಾಯಬೇಕಾಯಿತಂತೆ.ಅದಕ್ಕೆ ಈ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ಸಿಟ್ಟಿನಿಂದ ಕ್ರೀಸ್‌ನಲ್ಲಿ ಕೂಡ ಹೆಚ್ಚು ಹೊತ್ತು ನಿಲ್ಲುತ್ತಿಲ್ಲ ಎಂಬುದೇ ಆ ಜೋಕ್!ನಿಜ, ಹಳ್ಳಕ್ಕೆ ಬಿದ್ದ ಕುರಿಗೆ ಆಳಿಗೊಂದು ಕಲ್ಲು ಎಂಬ ಗಾದೆ ಇದೆ. ಆದರೆ ಭಾರತದ ಕ್ರಿಕೆಟ್‌ನಲ್ಲಿ ಯಾವತ್ತೂ ಹೀಗೆ.

                           

ಪ್ರತಿಕ್ರಿಯಿಸಿ (+)