ಗುರುವಾರ , ಆಗಸ್ಟ್ 13, 2020
26 °C

ಭಾರತದ 13ನೇ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ 13ನೇ ರಾಷ್ಟ್ರಪತಿ ಪ್ರಣವ್ ಮುಖರ್ಜಿ

ನವದೆಹಲಿ (ಪಿಟಿಐ/ಐಎಎನ್ ಎಸ್): ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಪ್ರಣವ್ ಮುಖರ್ಜಿ ಅವರು ಭಾನುವಾರ ಭಾರತದ 13ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ತಮ್ಮ ನಾಲ್ಕು ದಶಕಗಳ ಸಕ್ರಿಯ ರಾಜಕಾರಣದ ಬದುಕಿನ ಬಳಿಕ ಹೊಸ ಹಾದಿಯಲ್ಲಿ ಪಯಣ ಆರಂಭಿಸಲಿದ್ದಾರೆ. ಯುಪಿಎ ಅಭ್ಯರ್ಥಿಯಾದ ಮುಖರ್ಜಿ ಅವರು 30 ರಾಜ್ಯಗಳ ಪೈಕಿ 20 ರಾಜ್ಯಗಳ ಮತ ಎಣಿಕೆ ಪೂರ್ಣಗೊಂಡಾಗ ಸಂಸದರು ಮತ್ತು ಶಾಸಕರು ಚಲಾಯಿಸಿದ ಮತಗಳಲ್ಲಿ  5,64,469 ಮತ ಮೌಲ್ಯ ಪಡೆದು 10.5 ಲಕ್ಷ ಮೌಲ್ಯದಲ್ಲಿ ಅರ್ಧಭಾಗವಾದ 5,25,140ನ್ನು ದಾಟಿದ್ದರು.ಪ್ರಣವ್ ಪ್ರತಿಸ್ಪರ್ಧಿ ಪಿ.ಎ. ಸಂಗ್ಮಾ ಅವರು ಕೇವಲ 2,57,466 ಮತಮೌಲ್ಯ ಗಳಿಸುವಲ್ಲಿ ಸಫಲರಾಗಿದ್ದಾರೆ ಎಂದು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಅಗ್ನಿಹೋತ್ರಿ ತಿಳಿಸಿದರು. ಬಿಜೆಪಿ ಹಾಗೂ ಏಐಎಡಿಎಂಕೆ, ಬಿಜೆಡಿ ಮತ್ತಿತರ ಇತರ ವಿರೋಧ ಪಕ್ಷಗಳು ಸಂಗ್ಮಾ ಅವರನ್ನು ಬೆಂಬಲಿಸಿದ್ದವು.ಸರ್ಕಾರದಲ್ಲಿ ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳ ಖಾತೆಗಳ ಸಚಿವರಾಗಿದ್ದುದಲ್ಲದೆ, ಪಕ್ಷದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿರುವ 76 ವರ್ಷಗಳ ಪ್ರಣವ್ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ತಮ್ಮ ಅನುಭವವನ್ನು ಧಾರೆ ಎರೆಯಲಿದ್ದಾರೆ.ಬಿಜೆಪಿ ಆಡಳಿತದ ರಾಜ್ಯಗಳನ್ನು ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲೂ ಸಂಸತ್ ಸದಸ್ಯರ ಮತಗಳ ಎಣಿಕೆಯ ಆರಂಭದಲ್ಲೇ ಪ್ರಣವ್ ಮುನ್ನಡೆ ಕಾಯ್ದಿರಿಸಿಕೊಂಡೇ ಬಂದರು.

 

ಬಿಜೆಪಿ ಆಡಳಿತ ಇರುವ ಕರ್ನಾಟಕದಲ್ಲಿ 224 ಸದಸ್ಯಬಲದ ವಿಧಾನಸಭೆ ಶಾಸಕರಿಂದ 117 ಮತಗಳನ್ನು ಪಡೆಯುವ ಮೂಲಕ ಮುಖರ್ಜಿ ಅಚ್ಚರಿ ಮೂಡಿಸಿದರು. ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ 103 ಮತಗಳಷ್ಟೆ ಬಂದವು.ಮತಚಲಾಯಿಸಿದ 748 ಸಂಸತ್ ಸದಸ್ಯರ ಪೈಕಿ ಪ್ರಣವ್ ಅವರು 527 ಮತಗಳನ್ನು ಪಡೆದು 3,73,116 ಮತ ಮೌಲ್ಯದ ಸಾಧನೆ ತೋರಿದರು. ಪ್ರತಿಸ್ಪರ್ಧಿ ಸಂಗ್ಮಾ 206 ಮತಗಳೊಂದಿಗೆ 1,45,848 ಮತಮೌಲ್ಯ ಗಿಟ್ಟಿಸಿದರು.ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಸೇರಿದಂತೆ 15 ಮತಗಳು ತಿರಸ್ಕೃತಗೊಂಡವು ಇವುಗಳ ಪೈಕಿ 9 ಮತಗಳು ಮುಖರ್ಜಿ ಪರವಾಗಿ ಬಂದಿದ್ದರೆ ಆರು ಮತಗಳು ಸಂಗ್ಮಾ ಪರವಾಗಿ ಬಂದಿದ್ದವು.ಜುಲೈ 19ರಂದು ರಾಷ್ಟ್ರಪತಿ ಚುನಾವಣೆಗಾಗಿ ಮತದಾನ ನಡೆದಿದ್ದು, ಸಂಸತ್ ಸದಸ್ಯರು ಶಾಸಕರು ದೇಶದಾದ್ಯಂತ ಮತ ಚಲಾಯಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.