ಭಾರತವೆಂದೂ ಪಾಕಿಸ್ತಾನಕ್ಕೆ ಸೋತಿಲ್ಲ

7

ಭಾರತವೆಂದೂ ಪಾಕಿಸ್ತಾನಕ್ಕೆ ಸೋತಿಲ್ಲ

Published:
Updated:

ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸಂಬಂಧ ಹಳಸಿ ಬಹಳ ದಿನಗಳೇ ಆಗಿವೆ. ಈ ಎರಡೂ ರಾಷ್ಟ್ರಗಳ ನಡುವಣ ಕ್ರಿಕೆಟ್ ಪಂದ್ಯ ಎಂದರೆ ಅದೊಂದು ‘ಜಿಹಾದ್’ ಎಂದು ಯಾವನೋ ಒಬ್ಬ ಮತಾಂಧ ಘೋಷಿಸಿದ್ದ. ಪಂದ್ಯ ನಡೆಯುತ್ತಿದ್ದರೆ ಜನರ ಮನಸ್ಸಿನಲ್ಲೂ ಅದೇನೋ ಒಂದು ರೀತಿಯ ಕಿಚ್ಚು ಹತ್ತಿಕೊಳ್ಳುತ್ತಿತ್ತು. ಕ್ರಿಕೆಟ್‌ಗಿಂತ ಬೇರೆ ಭಾವನೆಗಳೇ ಕೆರಳುತ್ತಿದ್ದವು. ಭಾರತ ಬೇರೆ ಯಾರಿಗೆ ಸೋತರೂ ಅಡ್ಡಿಯಿಲ್ಲ, ಪಾಕಿಸ್ತಾನ ವಿರುದ್ಧ ಮಾತ್ರ ಸೋಲಬಾರದು ಎಂಬ ಭಾವನೆ ಬಹುತೇಕ ಜನರದ್ಧಾಗಿರುತ್ತಿತ್ತು. ಪಾಕಿಸ್ತಾನದಲ್ಲೂ ಇದೇ ಸ್ಥಿತಿ ಇತ್ತು. ಮೈದಾನದ ಹೊರಗೆ ಉತ್ತಮ ಸ್ನೇಹಿತರಾಗಿರುವ ಎರಡೂ ದೇಶಗಳ ಆಟಗಾರರು ಮೈದಾನದಲ್ಲಿ ಮಾತ್ರ ಕಡುವೈರಿಗಳಂತೆ ಸೆಣಸುತ್ತಿದ್ದರು. ಅದಕ್ಕೆ ಮತಾಂಧರು ತುಪ್ಪ ಸುರಿಯುತ್ತಿದ್ದರು. ಎರಡೂ ದೇಶಗಳನ್ನು ಒಂದುಗೂಡಿಸುವಲ್ಲಿ ಕ್ರಿಕೆಟ್ ಮಹತ್ವದ ಪಾತ್ರ ವಹಿಸುತ್ತದೆ ಎಂಬ ಅಂಶವನ್ನು ಎಲ್ಲರೂ ಮರೆಯುತ್ತಿದ್ದರು.ಭಾರತದಲ್ಲಿ ಪಾಕಿಸ್ತಾನದ ಪ್ರತಿಭಾವಂತ ಆಟಗಾರರ ಆಟವನ್ನು ನೋಡುವ ಅವಕಾಶ ಮಾತ್ರ ಕ್ರಿಕೆಟ್ ಪ್ರಿಯರಿಗೆ ತಪ್ಪಿದೆ. ಅದೇ ರೀತಿ ಪಾಕಿಸ್ತಾನಿಗಳಿಗೆ ಭಾರತದ ಆಟಗಾರರನ್ನು ನೋಡುವ ಅವಕಾಶ ತಪ್ಪಿದೆ. 1987 ಹಾಗೂ 1996ರಲ್ಲಿ ಭಾರತದ ಜೊತೆ ಜಂಟಿಯಾಗಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಸಿದ್ದ ಪಾಕಿಸ್ತಾನವನ್ನು ಈ ಸಲ ಹೊರಗಿಡಲಾಗಿದೆ. ಪಾಕಿಸ್ತಾನದ ಬದಲು ಬಾಂಗ್ಲಾದೇಶಕ್ಕೆ ಆ ಅವಕಾಶ ಸಿಕ್ಕಿದೆ. ಪಾಕಿಸ್ತಾನ ತನ್ನ ಲೀಗ್ ಪಂದ್ಯಗಳಲ್ಲಿ ಯಾವುದನ್ನೂ ಭಾರತದಲ್ಲಿ ಆಡುವುದಿಲ್ಲ. ಕ್ವಾರ್ಟರ್‌ಫೈನಲ್‌ನಲ್ಲಿ ಭಾರತವನ್ನು ಎದುರಿಸುವಂತಾದರೆ ಮಾತ್ರ (ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಲಿದೆ.) ಅದು ಭಾರತಕ್ಕೆ ಬರುತ್ತದೆ. ಭಾರತ ವಿರುದ್ಧ ಸೆಮಿಫೈನಲ್‌ನಲ್ಲಿ ಎದುರಾಳಿಯಾದರೂ ಚಂಡೀಗಢದಲ್ಲಿ ಪಂದ್ಯ ಆಡಬೇಕಾಗುತ್ತದೆ. ಬೇರೆ ತಂಡಗಳ ವಿರುದ್ಧ ಆಡಿ ಫೈನಲ್‌ಗೆ ಅರ್ಹತೆ ಗಳಿಸಿದರೆ ಅದನ್ನು ಆಡಲು ಮುಂಬೈಗೆ ಬರಬೇಕಾಗುತ್ತದೆ. (ಪಾಕಿಸ್ತಾನ ತಂಡಕ್ಕೆ ಮುಂಬೈನಲ್ಲಿ ಆಡಲು ಕೊಡುವುದಿಲ್ಲ ಎಂದು ಬಾಳ ಠಾಕ್ರೆ ಇನ್ನೂ ಕ್ಯಾತೆ ತೆಗೆದಿಲ್ಲ!)ಅದೇನೇ ಇರಲಿ, ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಮಾತ್ರ ಭಾರತ ತಂಡ ಒಮ್ಮೆಯೂ ಪಾಕಿಸ್ತಾನದ ಕೈಲಿ ಸೋತಿಲ್ಲ. (‘ಪ್ರಜಾವಾಣಿ’ಯ ಮೊದಲ ಕ್ರೀಡಾ ಸಂಪಾದಕ ದಿ. ಸೂರಿ ಅವರು ಇದ್ದಿದ್ದರೆ ಅವರಿಗೆ ಇದರಿಂದ ಬಹಳ ಸಂತೋಷವಾಗುತ್ತಿತ್ತು. ಯಾಕೆಂದರೆ ಅವರು ‘ಪಾಕಿಸ್ತಾನ ವಿರುದ್ಧ ಭಾರತಕ್ಕೆ ಸೋಲು’ ಎಂಬ ಶೀರ್ಷಿಕೆ ಕೊಡುತ್ತಲೇ ಇರಲಿಲ್ಲ. ಬೇರೆ ತಂಡಗಳ ವಿರುದ್ಧ ಸೋತಾಗಲೂ ‘ಭಾರತಕ್ಕೆ ಸೋಲು’ ಎಂಬ ಶೀರ್ಷಿಕೆ ಮಾತ್ರ ಬರೆಯುವಂತಿರಲಿಲ್ಲ. ಕರ್ನಾಟಕ ತಂಡಗಳ ಬಗ್ಗೆಯೂ ಅವರಿಗೆ ಅದೇ ರೀತಿಯ ವ್ಯಾಮೋಹ ಇತ್ತು. ಭಾರತ ವಿರುದ್ಧ ಪಾಕಿಸ್ತಾನಕ್ಕೆ ಗೆಲುವು ಅಥವಾ ಕರ್ನಾಟಕ ವಿರುದ್ಧ ಮುಂಬೈಗೆ ಗೆಲುವು ಎಂದು ಬರೆಯಬಹುದಿತ್ತು!) ಇದುವರೆಗಿನ ಒಂಬತ್ತು ವಿಶ್ವ ಕಪ್ ಟೂರ್ನಿಗಳಲ್ಲಿ, ಪಾಕಿಸ್ತಾನ ವಿರುದ್ಧ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಭಾರತವೇ ಗೆದ್ದಿದೆ. ಮೊದಲ ನಾಲ್ಕು ಟೂರ್ನಿಗಳಲ್ಲಿ ಅಂದರೆ 1975, 79, 83 ಮತ್ತು 87 ರಲ್ಲಿ ಎರಡೂ ತಂಡಗಳಿಗೆ ಒಂದನ್ನೊಂದು ಎದುರಿಸುವ ಅವಕಾಶವೇ ಸಿಕ್ಕಿರಲಿಲ್ಲ. 1992 ರಲ್ಲಿ, ಇಮ್ರಾನ್ ಖಾನ್ ನಾಯಕತ್ವದ ಪಾಕಿಸ್ತಾನ ತಂಡ ವಿಶ್ವ ಕಪ್ ಗೆದ್ದರೂ ಲೀಗ್ ಹಂತದಲ್ಲಿ 43 ರನ್ನುಗಳಿಂದ ಭಾರತಕ್ಕೆ ಸೋತಿತ್ತು. ಅಲ್ಲಿಂದ 1996, 99 ಮತ್ತು 2003 ರಲ್ಲಿಯೂ ಭಾರತವೇ ಜಯ ಗಳಿಸಿತು. 2007ರಲ್ಲಿ ಆರಂಭದ ಲೀಗ್ ಹಂತದಲ್ಲೇ ಎರಡೂ ತಂಡಗಳು ಸೋತು ಸುಣ್ಣವಾಗಿ ನಿರ್ಗಮಿಸಿದ್ದರಿಂದ ಎದುರಾಳಿಗಳಾಗುವ ಸಂದರ್ಭವೇ ಬರಲಿಲ್ಲ.ಈ ನಾಲ್ಕು ಪಂದ್ಯಗಳಲ್ಲಿ ಎರಡು ಪಂದ್ಯಗಳ ಬಗ್ಗೆ ಹೇಳಲೇಬೇಕು. ಆ ಎರಡು ಗೆಲುವಿನ ರೋಚಕ ನೆನಪು ಈ ಬಾರಿಯ ವಿಶ್ವ ಕಪ್‌ನಲ್ಲಿ ಭಾರತಕ್ಕೆ ಸ್ಫೂರ್ತಿ ನೀಡಬಲ್ಲದು. ‘ಒತ್ತಡದಲ್ಲಿದ್ದಾಗಲೇ ಭಾರತ ಚೆನ್ನಾಗಿ ಹೋರಾಡುತ್ತದೆ’ ಎಂದು ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧ ರಕ್ತದೊತ್ತಡ ಹೆಚ್ಚಿದಂತೆ ಬೇರೆಯವರ ವಿರುದ್ಧ ಏರುವುದಿಲ್ಲ! ಮೊದಲು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, 1996 ರ ಮಾರ್ಚ್ 9 ರಂದು ನಡೆದ ಕ್ವಾರ್ಟರ್‌ಫೈನಲ್ ಪಂದ್ಯವನ್ನು ನೋಡೋಣ. ಅಂದು ಬೆಂಗಳೂರಿನಲ್ಲಿ ಮಧ್ಯರಾತ್ರಿ ವರೆಗೆ ಯಾರೂ ಮಲಗಿರಲಿಲ್ಲ. (ಅಂತಿಮವಾಗಿ ಅದೊಂದು ‘ಮದ್ಯ’ರಾತ್ರಿಯಾಗಿಯೇ ಮುಗಿದಿತ್ತು.) ಭಾರತದ ಅಮೋಘ ಗೆಲುವು, ಪಂದ್ಯ ಮುಗಿದ ಮೇಲೆ ಪ್ರೇಕ್ಷಕರು ಎಂ.ಜಿ. ರಸ್ತೆಯಲ್ಲಿ ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ರಸ್ತೆ ತುಂಬೆಲ್ಲ ಒಡೆದ ಬಿಯರ್ ಬಾಟಲುಗಳ ಚೂರುಗಳು ಇದಕ್ಕೆ ಸಾಕ್ಷಿಯಾಗಿದ್ದವು.ಟಾಸ್ ಗೆದ್ದು ಸೂರ್ಯನ ಬೆಳಕಿನಲ್ಲಿ ಬ್ಯಾಟ್ ಮಾಡಿದ ಭಾರತ ನವಜೋತ್ ‘ಸಿಕ್ಸರ್’ ಸಿಧು (93, ಅಂದು ಅವರು ಒಂದೇ ಒಂದು ಸಿಕ್ಸರ್ ಕೂಡ ಎತ್ತಲಿಲ್ಲ ಎಂಬುದು ಬೇರೆ ಮಾತು), ಸಚಿನ್ (31), ಅಜಯ್ ಜಡೇಜ (25 ಎಸೆತಗಳಲ್ಲಿ 45, ಇವರ ಹೊಡೆತಕ್ಕೆ ವಕಾರ್ ಯೂನುಸ್ ಸುಸ್ತಾಗಿ ಹೋಗಿದ್ದರು.) ಅವರ ಉತ್ತಮ ಆಟದಿಂದ 8 ವಿಕೆಟ್‌ಗೆ 287 ರನ್ ಗಳಿಸಿತು. ಸವಾಲನ್ನು ಭರ್ಜರಿಯಾಗಿಯೇ ಸ್ವೀಕರಿಸಿದ ಪಾಕಿಸ್ತಾನದ ನಾಯಕ ಆಮಿರ್ ಸೊಹೇಲ್ (ಕೊನೇ ಗಳಿಗೆಯಲ್ಲಿ ನಾಯಕ ವಾಸಿಮ್ ಅಕ್ರಮ್ ಅನಾರೋಗ್ಯದಿಂದ ಆಡಿರಲಿಲ್ಲ.) ಮತ್ತು ಸಯೀದ್ ಅನ್ವರ್ ಮೊದಲ ವಿಕೆಟ್‌ಗೆ 84 ರನ್ ಸೇರಿಸಿ ಶ್ರೀನಾಥ್ ಮತ್ತು ವೆಂಕಟೇಶಪ್ರಸಾದ್ ಅವರನ್ನು ದಂಡಿಸಿದ್ದರು. ಆದರೆ ಅಂತಿಮ ನಗು ಬೌಲರುಗಳದ್ದೇ ಆಗಿತ್ತು. ಅಜರುದ್ದೀನ್ ಬೌಲಿಂಗ್ ಬದಲಾವಣೆ ಮಾಡುವ ಯೋಚನೆಯಲ್ಲಿದ್ದಾಗ, ಇನ್ನೊಂದು ಓವರ್ ಕೊಡುವಂತೆ ಕೋರಿದ ಶ್ರೀನಾಥ್ ಆ ಓವರ್‌ನಲ್ಲಿ ಸಯೀದ್ ಅನ್ವರ್ ಅವರನ್ನು ಕೆಡವಿದರು. ವೆಂಕಿ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಚೆಂಡನ್ನು ಕವರ್ ಬೌಂಡರಿಗೆ ಅಟ್ಟಿದ್ದ ಸೊಹೇಲ್ ಬೌಲರನನ್ನು ಕೆಣಕಿದ್ದರು. ಮರುಎಸೆತದಲ್ಲಿ ಅದೇ ರೀತಿಯ ಹೊಡೆತಕ್ಕೆ ಯತ್ನಿಸಿದ್ದ ಸೋಹೇಲ್ ತಮ್ಮ ಸ್ಟಂಪ್ ಹಾರಿ ಗಿಲ್ಲಿಯಂತೆ ಪಲ್ಟಿ ಹೊಡೆಯುವುದನ್ನು ನೋಡಬೇಕಾಯಿತು. ಸಲೀಮ್ ಮಲಿಕ್ ಮತ್ತು ಜಾವೇದ್ ಮಿಯಾಂದಾದ್ ಹೋರಾಡಿದರಾದರೂ ಪಂದ್ಯ ಭಾರತದ ಹಿಡಿತದಲ್ಲಿ ಸಿಕ್ಕಿಬಿಟ್ಟಿತ್ತು. ಅಂತಿಮವಾಗಿ ಭಾರತ 39 ರನ್ನುಗಳಿಂದ ಜಯ ಗಳಿಸಿತು. ಪಂದ್ಯದ ನಂತರ ಸೊಹೇಲ್ ವೆಂಕಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದರು.ಏಳು ವರ್ಷಗಳ ನಂತರ, ದಕ್ಷಿಣ ಆಫ್ರಿಕದಲ್ಲಿ ನಡೆದ ಪಂದ್ಯವೂ ಇಷ್ಟೇ ರೋಚಕವಾಗಿತ್ತು. ಈ ಸಲ ಸವಾಲು ಎದುರಾಗಿದ್ದು ಭಾರತಕ್ಕೆ. ಗೆಲ್ಲಲು 274 ರನ್ ಮಾಡುವ ಗುರಿ ಎದುರಾಗಿತ್ತು. ಶೋಯೆಬ್ ಅಖ್ತರ್ ಅವರ ‘ಎಸೆತ’ಗಳಿಗೆ ಸಚಿನ್ ಉತ್ತರ ಕೊಟ್ಟಿದ್ದರು. ವಾಸಿಮ್ ಅಕ್ರಮ್ ಬೌಲಿಂಗ್‌ನಲ್ಲಿ ಅಬ್ದುಲ್ ರಜಾಕ್ ಸ್ಕೇರ್‌ಲೆಗ್‌ನಲ್ಲಿ ಸಚಿನ್ ಅವರ ಕ್ಯಾಚ್ ಬಿಟ್ಟಾಗ, ‘ಅರೆ, ನೀನು ಕ್ಯಾಚ್ ಬಿಡಲಿಲ್ಲ, ವಿಶ್ವ ಕಪ್ ಅನ್ನೇ ಕೆಳಕ್ಕೆ ಚೆಲ್ಲಿದೆ’ ಎಂದು ಅಕ್ರಮ್ ಹತಾಶರಾಗಿ ನುಡಿದಿದ್ದರು. ಕೊನೆಗೆ ಅಖ್ತರ್ ಅವರ ಎಗರಿದ ಎಸೆತದಲ್ಲೇ ಔಟಾದ ಸಚಿನ್ ಎರಡು ರನ್ನುಗಳಿಂದ ಶತಕ ತಪ್ಪಿಸಿಕೊಂಡರೂ ಭಾರತ ಆರಾಮವಾಗಿ (4 ವಿಕೆಟ್‌ಗೆ 276) ಜಯ ಸಾಧಿಸಿತ್ತು. ಪಾಕಿಸ್ತಾನ ಸೂಪರ್ ಸಿಕ್ಸ್ ಹಂತ ತಲುಪಲಿಲ್ಲ. ಭಾರತ ಫೈನಲ್ ವರೆಗೆ ಮುನ್ನಡೆದರೂ ಕಪ್ ಗೆಲ್ಲಲಿಲ್ಲ.ಭಾರತ ಹಾಗೂ ಪಾಕಿಸ್ತಾನ 1987 ರಲ್ಲಿ ಟೂರ್ನಿಯನ್ನು ಜಂಟಿಯಾಗಿ ನಡೆಸಿದಾಗ ಫೈನಲ್‌ಗೆ ಈ ಎರಡೂ ತಂಡಗಳೇ ಬರಬೇಕು, ಬರಬಹುದು ಎಂದೇ ಎಲ್ಲರೂ ಆಶಿಸಿದ್ದರು. ಆದರೆ ಎರಡೂ ತಂಡಗಳು ಸೆಮಿಫೈನಲ್ ಹಂತದಲ್ಲಿ ಸೋತಿದ್ದವು. ಈ ಸಲ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎದುರಾಳಿಗಳಾದರೆ ಹಿಂದೆಂದೂ ಕಾಣದಂಥ ರೋಚಕ ಹೋರಾಟದ ಜೊತೆ, ವಿಶ್ವ ಕಪ್ ಇತಿಹಾಸದಲ್ಲೇ ಅದ್ಭುತ ಅಧ್ಯಾಯವೊಂದು ರೂಪುಗೊಳ್ಳುವುದು ನಿಶ್ಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry