ಭಾರತಿ ಸೆಳೆಯಲು ಸರ್ವ ಯತ್ನ?

7

ಭಾರತಿ ಸೆಳೆಯಲು ಸರ್ವ ಯತ್ನ?

Published:
Updated:

ಕೋಲಾರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನ ಯಾರಿಗೆ ದೊರಕಲಿದೆ. ಎಂಬ ಪ್ರಶ್ನೆ ದಿನೇದಿನೇ ನಿಗೂಢವಾಗುತ್ತಿದೆ. ಚುನಾವಣೆಯೋ ಅಥವಾ ಅವಿರೋಧ ಆಯ್ಕೆಯೋ ಎಂಬ ಬಿಸಿ ಚರ್ಚೆಯೂ ಶುರುವಾಗಿದೆ.ಗುರುವಾರವಷ್ಟೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಏರ್ಪಟ್ಟಿರುವ ಹೊಂದಾಣಿಕೆಯು ಅನುಕೂಲ ಸಿಂಧು ರಾಜಕಾರಣದ ಹೊಸ ವರಸೆಗಳಿಗೂ ದಾರಿ ಮಾಡಿದೆ. ಜಿ.ಪಂ ಮೇಲೆ ಬಿಜೆಪಿ ಬಾವುಟ ಹಾರಿಸುವ ಭವಿಷ್ಯ ನುಡಿದಿದ್ದ ಶಾಸಕ ಆರ್.ವರ್ತೂರು ಪ್ರಕಾಶರೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಏಕೆಂದರೆ ಅವರ ಎದುರಾಳಿ, ಸಚಿವ ಕೆ.ಎಚ್.ಮುನಿಯಪ್ಪನವರೇ ಅಧ್ಯಕ್ಷರ ಆಯ್ಕೆಯ ಅಂಗಳಕ್ಕೆ ಇಳಿದಿದ್ದಾರೆ.ಇರುವ ಇಬ್ಬರು ಅರ್ಹ ಅಭ್ಯರ್ಥಿಗಳಲ್ಲಿ ವೇಮಗಲ್ ಕ್ಷೇತ್ರದ ಪಕ್ಷೇತರ ಸದಸ್ಯೆ ಭಾರತಿ ಈಗ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ. ಪಕ್ಷಾಂತರಕ್ಕೆ ಅವರಿಗಿರುವ ಸ್ಪಷ್ಟ ಅವಕಾಶವೇ ಅಂಥದೊಂದು ಸನ್ನಿವೇಶವನ್ನು ಸೃಷ್ಟಿ ಮಾಡಿದೆ. ಬಲ್ಲ ಮೂಲಗಳು ತಿಳಿಸಿರುವಂತೆ, ವರ್ತೂರು ಬೆಂಬಲ ಪಡೆದು ಗೆದ್ದಿರುವ ಭಾರತಿ ಅವರನ್ನು ಮುನಿಯಪ್ಪ ತಮ್ಮ ಹೊಂದಾಣಿಕೆಯ ಬಣದ ಕಡೆಗೆ ಸೆಳೆಯುವ ಪ್ರಯತ್ನ ಮೊದಲ ಹಂತ ದಾಟಿದೆ. ಇನ್ನೇನಿದ್ದರೂ ಹೊಂದಾಣಿಕೆಯ ಮಾತಷ್ಟೆ ಉಳಿದಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ಏರ್ಪಡುವವರೆಗೂ ಸನ್ನಿವೇಶ ತಿಳಿಯಾಗಿಯೇ ಇತ್ತು. ಈಗ ಕದಡಿದೆ.‘ಇಬ್ಬರು ಅಭ್ಯರ್ಥಿಗಳೂ ತಮ್ಮ ಕಡೆಯವರೇ ಆಗಿರುವುದರಿಂದ ಒಬ್ಬರಿಂದ ಮಾತ್ರ ನಾಮಪತ್ರ ಸಲ್ಲಿಸುವಂತೆ ಮಾಡಿ ಅಧ್ಯಕ್ಷ ಸ್ಥಾನವನ್ನು ಯಾವುದೇ ವಿರೋಧವಿಲ್ಲದೆ, ಚುನಾವಣೆಯೇ ಇಲ್ಲದೆ, ಸಲೀಸಾಗಿ ಪಡೆಯುವ ಬಿಜೆಪಿ ಮತ್ತು ವರ್ತೂರು ಆಶಯಕ್ಕೆ ಜೆಡಿಎಸ್-ಕಾಂಗ್ರೆಸ್ ಎದುರೇಟು ನೀಡಲು ಸಜ್ಜಾಗಿವೆ. ಚುನಾವಣೆ ನಡೆಯುವಂತೆ ಮಾಡುವುದೇ ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆಯ ಪ್ರಮುಖ ಸೂತ್ರ’ ಎಂದೂ ತಿಳಿದುಬಂದಿದೆ.ಚುನಾವಣೆ ನಡೆದರೆ? ಪ್ರಸ್ತುತ ಸನ್ನಿವೇಶದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯೇ ಹೆಚ್ಚಿದೆ. ಭಾರತಿಯವರು ಜೆಡಿಎಸ್-ಕಾಂಗ್ರೆಸ್ ಬಣದ ಕಡೆಗೆ ಸೇರಿದರೆ ಚುನಾವಣೆ ಖಚಿತ. ಆಗ ಪಕ್ಷಗಳ ಬಲಾಬಲವನ್ನು ಗಮನಿಸಿದರೆ ಭಾರತಿಯವರೇ ಆಯ್ಕೆಯಾಗುವ ಸಾಧ್ಯತೆಯೂ ಇದೆ.ಪ್ರಸ್ತುತ ಜೆಡಿಎಸ್‌ನಲ್ಲಿ 11 ಸದಸ್ಯರು, ಕಾಂಗ್ರೆಸ್‌ನಲ್ಲಿ ಐವರು ಮತ್ತು ಜೆಡಿಎಸ್‌ನಿಂದ ಟಿಕೆಟ್ ದೊರಕದೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ಎಂ.ಎಸ್.ಆನಂದ್ ಸೇರಿದರೆ ಒಟ್ಟು 17 ಮತಗಳಾಗುತ್ತವೆ. ಅಧ್ಯಕ್ಷರಾಗುವವರಿಗೆ ಒಟ್ಟು ಸದಸ್ಯ ಬಲದಲ್ಲಿ, ಅರ್ಧಕ್ಕಿಂತಲೂ ಹೆಚ್ಚು ಮತ ಅಂದರೆ, ಕನಿಷ್ಠ 15 ಮತಗಳು ಅಗತ್ಯ. ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಕಡೆಗೆ ಬಹುಮತದ ಬೆಂಬಲವಿರುವುದು ಸ್ಪಷ್ಟ.ಬಿಜೆಪಿ? ಇಂಥ ಸನ್ನಿವೇಶದಲ್ಲಿ ಬಿಜೆಪಿ ಮತ್ತು ವರ್ತೂರು ನಡುವಿನ ಹೊಂದಾಣಿಕೆಗೆ ಗೆಲ್ಲುವಷ್ಟು ಮತ ದೊರಕುವುದು ಅನುಮಾನ. 7 ಸದಸ್ಯರ ಬಲವನ್ನು ನೆಚ್ಚಿಕೊಂಡಿರುವ ಬಿಜೆಪಿ ಜೊತೆಗೆ ಶಾಸಕರ ಬಣದ ಇಬ್ಬರು ಸದಸ್ಯರು ಮಾತ್ರ ಉಳಿದುಕೊಂಡರೂ ಬಹುಮತ ಗಳಿಸುವುದು ದೂರದ ಮಾತು. ಬಿಜೆಪಿ ಸದಸ್ಯೆಗೇ ಅಧ್ಯಕ್ಷೆ ಪಟ್ಟ ಬೇಕು ಎಂಬ ಮಾಲೂರು ಶಾಸಕ ಕೃಷ್ಣಯ್ಯಶೆಟ್ಟರ ಒತ್ತಾಯವೂ ಶಾಸಕರ ಮೇಲಿದೆ ಎನ್ನಲಾಗಿದೆ.ಯಾರಿಗೆ ನಿಷ್ಠೆ? ಒಟ್ಟಾರೆ ಸನ್ನಿವೇಶವು ವರ್ತೂರು ಬಣದಲ್ಲಿ ಗುರುತಿಸಿಕೊಂಡು ಗೆದ್ದಿರುವ ಭಾರತಿಯವರು ಶಾಸಕರಿಗೆ ಪ್ರಕಟಿಸುವ ನಿಷ್ಠೆಯನ್ನು ಆಧರಿಸಿದೆ. ನಿಷ್ಠೆ ಮುರಿದರೆ ಕಾಂಗ್ರೆಸ್-ಜೆಡಿಎಸ್‌ಗೆ ಹೊಂದಾಣಿಕೆಗೆ ಅಧಿಕಾರ ಸಿಕ್ಕಂತಾಗುತ್ತದೆ. ಇಲ್ಲವಾದರೆ ವರ್ತೂರು-ಬಿಜೆಪಿ ದಾರಿ ಸುಗಮವಾಗುತ್ತದೆ. ಅದನ್ನು ನಿಯಂತ್ರಿಸುವ ರಾಜಕೀಯ ಮೇಲಾಟಗಳನ್ನು ಕಾದು ನೋಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry