ಮಂಗಳವಾರ, ಅಕ್ಟೋಬರ್ 22, 2019
22 °C

ಭಾರತೀಯರಿಗೆ ಕಿರುಕುಳ: ಚೀನಾ ಕ್ರಮದ ಭರವಸೆ

Published:
Updated:

ನವದೆಹಲಿ (ಪಿಟಿಐ/ಐಎಎನ್‌ಎಸ್):  ಚೀನಾದ ಯಿವು ಎಂಬಲ್ಲಿ ಭಾರತೀಯ ಮೂಲದ ವರ್ತಕರಾದ ಶ್ಯಾಂಸುಂದರ್ ಅಗರ್‌ವಾಲ್ ಮತ್ತು ದೀಪಕ್ ರಹೇಜಾ ಅವರಿಗೆ ದುಷ್ಕರ್ಮಿಗಳು ಈಚೆಗೆ ನೀಡಿದ ಕಿರುಕುಳ ಘಟನೆಯನ್ನು ಅಲ್ಲಿನ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ ಎಂದು ಭಾರತದ ಚೀನಾ ರಾಯಭಾರಿ ಝಾಂಗ್ ಯಾನ್ ಅವರು ತಿಳಿಸಿದ್ದಾರೆ.ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಹಾಗೂ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯ) ಗೌತಮ್ ಬಾಂಬೆವಾಲೆ ಅವರನ್ನು ಬುಧವಾರ ಪ್ರತ್ಯೇಕವಾಗಿ ಭೇಟಿಯಾದ ಯಾನ್, ಚೀನಾದಲ್ಲಿರುವ ಭಾರತೀಯರ ರಕ್ಷಣೆಯ ಭರವಸೆ ನೀಡಿದರು. ಸ್ಥಳೀಯ ಐವರು ಶಂಕಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಈಗಾಗಲೇ ಆದೇಶಿಸಲಾಗಿದೆ ಎಂದು ಗಮನಕ್ಕೆ ತಂದರು.ಕೃಷ್ಣ ತೃಪ್ತಿ: ಇಬ್ಬರೂ ವರ್ತಕರು ಯಿವುವಿನಿಂದ ಶಾಂಘೈಗೆ ಹೊರಟಿದ್ದಾರೆ. ಈ ವಿಷಯದಲ್ಲಿ ಚೀನಾ ಕೈಗೊಂಡ ತ್ವರಿತ ಕ್ರಮ ತಮಗೆ ತೃಪ್ತಿ ತಂದಿದೆ ಎಂದು ಯಾನ್ ಭೇಟಿಯ ಬಳಿಕ ಎಸ್.ಎಂ.ಕೃಷ್ಣ ಸುದ್ದಿಗಾರರಿಗೆ ತಿಳಿಸಿದರು.ಬಿಕ್ಕಟ್ಟು ಸದ್ಯ ಅಂತ್ಯ

ಬೀಜಿಂಗ್ (ಪಿಟಿಐ): ಇಪ್ಪತ್ತು ದಿನಗಳಿಂದ ಚೀನಾದ ಉತ್ಪನ್ನ ಪೂರೈಕೆದಾರರ ಒತ್ತೆಯಲ್ಲಿದ್ದ ಭಾರತೀಯ ಮೂಲದ ವರ್ತಕರಾದ ಶ್ಯಾಂಸುಂದರ್ ಅಗರ್‌ವಾಲ್ ಮತ್ತು ದೀಪಕ್ ರಹೇಜಾ ಅವರನ್ನು ತೀವ್ರ ಸಂಧಾನ ಪ್ರಯತ್ನಗಳ ನಂತರ ಬುಧವಾರ ರಾಜತಾಂತ್ರಿಕ ಅಧಿಕಾರಿಗಳ ಬೆಂಗಾವಲಿನಲ್ಲಿ ಶಾಂಘೈ ನಗರಕ್ಕೆ ಕರೆತರಲಾಗಿದೆ. ಇದರಿಂದ ಎರಡು ರಾಷ್ಟ್ರಗಳ ನಡುವೆ ಉದ್ಭವಿಸಿದ್ದ ರಾಜತಾಂತ್ರಿಕ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿದಂತೆ ಆಗಿದೆ. ಆದರೆ ಸ್ಥಳೀಯ ಉತ್ಪನ್ನ ಸರಬರಾಜುದಾರರಿಗೆ ಆಗಬೇಕಿರುವ ಬಾಕಿ ಪಾವತಿ ಸಂಬಂಧ ಈ ಇಬ್ಬರು ನ್ಯಾಯಾಲಯದ ಸುದೀರ್ಘ ವಿಚಾರಣೆ ಎದುರಿಸಬೇಕಾಗುವ ಸಂಭವವಿದೆ.ಹಿನ್ನೆಲೆ: ಯಿವು ವ್ಯಾಪಾರ ಕೇಂದ್ರದಲ್ಲಿನ ಕಂಪೆನಿಯೊಂದಕ್ಕೆ ಸ್ಥಳೀಯ ವ್ಯಾಪಾರಿಗಳು ಉತ್ಪನ್ನಗಳನ್ನು ಪೂರೈಸುತ್ತಿದ್ದರು. ಈ ಸಂಬಂಧ ಕಂಪೆನಿಯ ಮಾಲೀಕನೆನ್ನಲಾದ ಯೆಮನ್ ಮೂಲದ ಫಿರೋಜ್ ಖಾನ್ ಎಂಬಾತ ಉತ್ಪನ್ನ ಸರಬರಾಜುದಾರರಿಗೆ ಬಾಕಿ ಪಾವತಿಸಬೇಕಿತ್ತು. ಆದರೆ ಆತ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾದ. ಆಗ ಪೂರೈಕೆದಾರರು ಮುಂಬೈ ಮೂಲದ ಈ ಇಬ್ಬರನ್ನು ಡಿ.15ರಂದು ಅಪಹರಿಸಿ ಒತ್ತೆಯಲ್ಲಿ ಇರಿಸಿಕೊಂಡಿದ್ದರು. ತಾವು ಈ ಕಂಪೆನಿ ನೌಕರರು ಮಾತ್ರ. ತಮ್ಮನ್ನು ಅಪಹರಿಸಿದ ನಂತರ ದಾಖಲೆ ಪತ್ರಗಳಿಗೆ ಬಲವಂತವಾಗಿ ಸಹಿ ಹಾಕಿಸಿಕೊಳ್ಳಲಾಗಿದೆ ಎಂಬುದು ಅವರ ವಾದ.

 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)