ಭಾನುವಾರ, ಅಕ್ಟೋಬರ್ 20, 2019
21 °C

ಭಾರತೀಯರಿಗೆ ರಾಷ್ಟ್ರಾಭಿಮಾನ ಅಗತ್ಯ

Published:
Updated:

ಜೇವರ್ಗಿ: ಭಾರತೀಯರು ಬೇರೆ ರಾಷ್ಟ್ರಗಳ ವ್ಯಾಮೋಹಕ್ಕೆ ಮಾರುಹೋಗದೇ, ನಮ್ಮ ಮಾತೃ ಭೂಮಿ ಭಾರತ ದೇಶದ ಬಗ್ಗೆ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳುವುದು ಅವಶ್ಯಕವೆಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.ಅವರು ಬುಧವಾರ ಪಟ್ಟಣದ ನ್ಯಾಯಾಲಯದ ಎದುರುಗಡೆ ಇರುವ ಮೈದಾನದಲ್ಲಿ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ವತಿಯಿಂದ ಆಯೋಜಿಸಲಾದ ಜ್ಞಾನಯೋಗಿ, ವಿಜಾಪುರ ಜ್ಞಾನಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ 11ನೇ ದಿನದ ಸತ್ಸಂಗ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.ನಾವೇಲ್ಲರು ಬೆಳಿಗ್ಗೆ ಎದ್ದ ತಕ್ಷಣ  ಶುಚಿರ್ಭೂತರಾಗಿ ಸುಮಾರು 10ನಿಮಿಷಗಳ ಕಾಲ ಶೃಂಗಾರ ಮಾಡಿಕೊಳ್ಳುತ್ತೇವೆ. ಆದರೆ ನಮ್ಮನ್ನು ಹೊತ್ತಿರುವ ಭೂಮಿ ತಾಯಿಗೆ ಶೃಂಗಾರ ಮಾಡುವುದಿಲ್ಲ. ಬೆಳಿಗ್ಗೆ ಎದ್ದು ಮಹಿಳೆಯರು ಮನೆಯ ಬಾಗಿಲು ಬಳಿ ನೀರು ಹಾಕಿ ಭೂಮಿ ತಾಯಿಗೆ ರಂಗೋಲಿ ಬೀಡಿಸಿ, ನಮಸ್ಕರಿಸಬೇಕು. ಅದು ಭೂಮಿ ತಾಯಿಗೆ ಪ್ರತಿ ದಿನ ಪೂಜೆ ಸಲ್ಲಿಸಿದಂತೆ.ಗ್ರಾಮೀಣ ಪ್ರದೇಶದಲ್ಲಿ ಭಾವನಾತ್ಮಕ ಸಂಬಂಧಗಳು ಗಟ್ಟಿಯಾಗಿ ಉಳಿಯಲು ಸನಾತನ ಪರಂಪರೆ, ಸಂಸ್ಕೃತಿ, ಉತ್ತಮ ಸಂಸ್ಕಾರ ಹಾಗೂ ಧಾರ್ಮಿಕ ಆಚರಣೆಗಳು ಕಾರಣ. ನಮ್ಮ ಹಳ್ಳಿಗಳನ್ನು ಹೃದಯಪೂರ್ವಕವಾಗಿ ನೋಡಿದಾಗ ಸುಂದರವಾಗಿ ಕಾಣುತ್ತವೆ. ಯಾವುದೇ ಪಟ್ಟಣ, ಶಹರಗಳಿಗೂ ಹಳ್ಳಿಗಳಿಗೆ ಸರಿಸಾಟಿಯಾಗುವುದಿಲ್ಲ. ಜಗತ್ತಿನ ಭೂ ಪಟದಲ್ಲಿ ಅತ್ಯಂತ ಶ್ರೇಷ್ಠ ರಾಷ್ಟ್ರವೆಂದರೆ ಭಾರತವೆಂದು ನಾವು ಹೆಮ್ಮೆಯಿಂದ ಹೇಳಬಹುದು.ಸ್ವಾಮಿ ವಿವೇಕಾನಂದರು ಇಡೀ ಜಗತ್ತನ್ನು ಸಂಚರಿಸಿ, ಭಾರತ ದೇಶಕ್ಕೆ ಮರಳಿದಾಗ ಭಾರತ ಮಾತೆಯ ಮಣ್ಣನ್ನು ದೇಹಕ್ಕೆ ಸವರಿಕೊಂಡು ಪವಿತ್ರಗೊಂಡರು.ದೇಶದಲ್ಲಿ ಆಗಿಹೋದ ಅನೇಕ ಶರಣರು, ಸಂತರು, ದಾರ್ಶನಿಕರು ಬಾಳಿ ಬೆಳಗಿದ್ದರಿಂದ ಭಾರತ ಶ್ರೇಷ್ಟ ಪರಂಪರೆ, ಇತಿಹಾಸ ಹೊಂದಿದೆ. ಭಾರತದಲ್ಲಿ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಚಿಂತನೆಗಳಿವೆ.ಎಲ್ಲಾ ವರ್ಗಗಳ ಜನರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಭಗವಂತ ನಮಗೆ ಜೀವಿಸಲು ಉತ್ತಮವಾದ ಗಾಳಿ, ನೀರು, ಆಹಾರ ನೀಡಿದ್ದಾನೆ. ಹಳ್ಳಿಗರ ಜೀವನ ನೆಮ್ಮದಿಯಿಂದ ಕೂಡಿರುತ್ತದೆ.ನಮ್ಮ ಪೂರ್ವಜರು ಭಾರತದ ಇತಿಹಾಸ, ಧಾರ್ಮಿಕ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ನಮಗೆ ಬಿಟ್ಟು ಹೋಗಿದ್ದರಿಂದ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಭಾರತ ದೇಶದ ಪ್ರತಿಯೊಬ್ಬರು ಹೆಮ್ಮೆಪಡಬೇಕು.ಸಮಾಜದಲ್ಲಿನ ಪ್ರತಿಯೊಬ್ಬರು ರಾಷ್ಟ್ರಾಭಿಮಾನ ಹಾಗೂ ಗುರು ಹಿರಿಯರಿಗೆ ಗೌರವಿಸುವುದನ್ನು ಮರೆಯಬಾರದೆಂದು ಸೂಲಿಬೆಲೆ ತಿಳಿಸಿದರು. ವಿಜಾಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ರಾಮು ಮುಲಗೆ ಮತ್ತಿತರರು ಇದ್ದರು.

Post Comments (+)