ಭಾರತೀಯರು ಬುದ್ಧಿಹೀನರೇ?!

7

ಭಾರತೀಯರು ಬುದ್ಧಿಹೀನರೇ?!

Published:
Updated:

ಮಾರ್ಕಂಡೆಯ ಕಾಟ್ಜು ಅವರ ಹೇಳಿಕೆಗೆ ಬಹಳಷ್ಟು ವಿರೋಧ ವ್ಯಕ್ತವಾಗಿದೆ. `ಪ್ರತಿಶತ 90ರಷ್ಟು ಭಾರತೀಯರು ತಿಳಿಗೇಡಿಗಳು. ಅವರ ತಲೆಯಲ್ಲಿ  ಮಿದುಳೇ ಇಲ್ಲ..'. ಎಂದೆಲ್ಲ ಹೇಳಿದರೆ ಸಿಟ್ಟು ಬರದೇ ಇರುವುದೇ? ಹಾಗೆ ಹೇಳಿದವರು ಯಾರೋ ಒಬ್ಬ ಸಾಮಾನ್ಯ ವ್ಯಕ್ತಿಯಲ್ಲ. ಅವರು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ  ಸದ್ಯದ  ಅಧ್ಯಕ್ಷರು. ಅವರು ತಮ್ಮ ಹೇಳಿಕೆಯನ್ನು ಮುಂದುವರೆಸುತ್ತ ಪ್ರತಿಶತ 80ರಷ್ಟು ಹಿಂದುಗಳು ಹಾಗು ಪ್ರತಿಶತ 80ರಷ್ಟು ಮುಸ್ಲಿಮರು ಜಾತಿವಾದಿಗಳು ಎನ್ನುತ್ತಾರೆ.  ಈ ಪ್ರತಿಶತ ಪ್ರಮಾಣವನ್ನು ಅವರು ಎಲ್ಲಿಂದ ಪಡೆದರೋ ಗೊತ್ತಿಲ್ಲ. ಕಾಟ್ಜು ಅವರ ಹೇಳಿಕೆಯಲ್ಲಿ ನಯ ನಾಜೂಕು ಇಲ್ಲ.  ಹಾಗೆಂದು ಅದನ್ನು ಸಾರಸಗಟಾಗಿ ತಳ್ಳಿಹಾಕುವಂತೆಯೂ ಇಲ್ಲ.  ಅಲ್ಲಿ ಒಂದು ಬಗೆಯ ಸಾಮಾಜಿಕ ಕಾಳಜಿಯ ಎಳೆ ಇದೆ.  ಹಿಂದೂ-ಮುಸ್ಲಿಂ ಮನಸ್ಸುಗಳಲ್ಲಿ  ಬ್ರಿಟಿಷರು ಭೇದದ ವಿಷಬೀಜ ಬಿತ್ತಿದರು.  ಅದು ಅವರ ಒಡೆದು ಆಳುವ ನೀತಿಯ ಫಲ. ಹಿಂದು ಮುಸ್ಲಿಮರು ಪರಸ್ಪರ ಜಗಳವಾಡುತ್ತಿದ್ದರೆ ಮಾತ್ರ, ತಾವು ನಿರಾಯಾಸವಾಗಿ ರಾಜ್ಯವಾಳಬಹುದು ಎಂಬ ಧೋರಣೆ ಅವರದು.  ಅದನ್ನು ಅರಿಯದ ಭಾರತೀಯರು ಮೂರ್ಖರು ಎಂಬುದು ಕಾಟ್ಜು ವಾದ.  ಬ್ರಿಟಿಷರ ಭೇದ ನೀತಿ ಅಷ್ಟಕ್ಕೆ ನಿಲ್ಲಲಿಲ್ಲ.  ಹಿಂದಿ ಭಾಷೆ ಹಿಂದುಗಳದ್ದು, ಉರ್ದು ಮುಸ್ಲಿಮರದ್ದು ಎಂದು ಬಿಂಬಿಸಿದರು.  ಇದರಿಂದಾಗಿಯೇ ಭಾರತ ಇಬ್ಭಾಗವಾಯಿತು.  ಬಹು ಹಿಂದಿನಿಂದ ಬಂದ ಸೌಹಾರ್ದ ವಾತಾವರಣ ನಾಶವಾಯಿತು.  ಭೂಮಿಯ ಮೇಲಿನ ಸ್ವರ್ಗ ಎಂಬ ಕೀರ್ತಿ ಪಡೆದ ಕಾಶ್ಮೀರ ನರಕವಾಯಿತು.  ಭಾರತ ಆ ಶಾಪವನ್ನಿನ್ನೂ ಅನುಭವಿಸುತ್ತಿದೆ. 

ಇದೆಲ್ಲ ಪರಕೀಯರ ಕುಹಕತನದಿಂದ ಎನ್ನುವುದಕ್ಕಿಂತ, ಅದನ್ನು ಒಪ್ಪಿಕೊಂಡ ನಮ್ಮ ಮೂರ್ಖತನದಿಂದ ಎಂಬುದು ಕಾಟ್ಜು ಅವರ ವಾದ.  ಭಾರತ ವಿಭಜನೆಯಾಗಿ ಎರಡಾದದ್ದು, ಆಮೇಲೆ ಬಂಗ್ಲಾದೇಶದ ಉದಯದಿಂದ ಮೂರಾದದ್ದು; ಭಾರತೀಯರ ತಿಳಿಗೇಡಿತನದಿಂದಲೇ. ಈಗಲಾದರೂ, ಭಾರತದಲ್ಲಿರುವವರೆಲ್ಲ ಒಂದು ಎಂಬ ಭಾವನೆ ಮೂಡುತ್ತಿಲ್ಲ ಎಂಬುದು ಕಾಟ್ಜು ಆತಂಕಕ್ಕೆ ಕಾರಣ.  ಅದು ಸ್ವಲ್ಪ ಮಟ್ಟಿಗೆ ಸರಿಯೂ ಕೂಡ. ಇದನ್ನೇ ಅವರು ಸೌಮ್ಯವಾಗಿ ಸೂಕ್ಷ್ಮವಾಗಿ ಹೇಳಬಹುದಿತ್ತು.  ಅವರ ಒರಟುತನವನ್ನು ಮರೆತು, ಕಳಕಳಿಯನ್ನು-ಕಾಳಜಿಯನ್ನು ಸ್ವೀಕರಿಸುವ ಬುದ್ಧಿವಂತಿಕೆಯನ್ನು ನಾವೀಗ ಪ್ರದರ್ಶಿಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry