`ಭಾರತೀಯ ಗುರು ಪರಂಪರೆ ವಿಶ್ವಕ್ಕೆ ಮಾದರಿ'

7
ಜಿಲ್ಲೆಯ ಎಲ್ಲೆಡೆ ಶಿಕ್ಷಕರ ದಿನಾಚರಣೆ ಸಡಗರ; ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶಗಳ ಗುಣಗಾನ

`ಭಾರತೀಯ ಗುರು ಪರಂಪರೆ ವಿಶ್ವಕ್ಕೆ ಮಾದರಿ'

Published:
Updated:

ಮಂಡ್ಯ: ಗುರುವಾರ ಜಿಲ್ಲೆಯಾದ್ಯಂತ ಶಾಲೆ ಹಾಗೂ ಕಾಲೇಜುಗಳ ಶಿಕ್ಷಕರಿಗೆ ಸಡಗರವೋ ಸಡಗರ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಅಂಗವಾಗಿ ಆಚರಿಸಲಾಗುವ ಶಿಕ್ಷಕರ ದಿನ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರು ಭಾಗಿಯಾಗಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನೂ ನೀಡಲಾಯಿತು. ಮತ್ತೆ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳೇ ಮುಂದಾಗಿ ಶಿಕ್ಷಕರ ದಿನಾಚರಣೆ ಮಾಡುವ ಮೂಲಕ ಗುರುಗಳಿಗೆ ನಮನ ಸಲ್ಲಿಸಿದರು.`ಮಕ್ಕಳ ಭವಿಷ್ಯದಲ್ಲಿ ದೇಶದ ಭವಿಷ್ಯ'

ಮಂಡ್ಯ: ಮಕ್ಕಳ ಭವಿಷ್ಯವನ್ನು ಶಿಕ್ಷಕರು ಉತ್ತಮಗೊಳಿಸಿದರೆ ದೇಶದ ಭವಿಷ್ಯವೂ ಉತ್ತಮಗೊಳ್ಳುತ್ತದೆ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಹೇಳಿದರು.ನಗರದ ಕಲಾ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ತಂದೆ-ತಾಯಿಗಳು ಮಕ್ಕಳನ್ನು ದೈಹಿಕವಾಗಿ ಬೆಳೆಸುತ್ತಾರೆ. ಅವರ ಜ್ಞಾನ ಹೆಚ್ಚಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಒಳ್ಳೆಯ ಬುನಾದಿ ಹಾಕಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.ಪ್ರಧಾನ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಜಿ.ಎಂ. ಅನಂತಮೂರ್ತಿ ಮಾತನಾಡಿ, ಶಿಕ್ಷಕರು ನಿರಂತರ ವಿದ್ಯಾರ್ಥಿಯಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಮಕ್ಕಳಲ್ಲಿ ಸೇವಾ ಮನೋಭಾಗ ಹಾಗೂ ನೈತಿಕ ಮೌಲ್ಯವನ್ನು ಬೆಳೆಸಬೇಕು ಎಂದರು.ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗ ತೋರಿಸಬೇಕು. ಸಮಾಜದಲ್ಲಿ ಶಿಕ್ಷಕರಿಗೆ ಇರುವ ಗೌರವವನ್ನು ಉಳಸಿಕೊಳ್ಳಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಲತಾ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯ ವಿಜಯಾನಂದ, ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ, ಸಿಇಒ ಪಿ.ಸಿ. ಜಯಣ್ಣ, ಜಿಲ್ಲಾ ಪೊಲೀಸ್ ವರಿಷ್ಠ ಭೂಷಣ ಬೊರಸೆ, ಡಿಡಿಪಿಐ ಎಂ.ಡಿ. ಶಿವಕುಮಾರ್, ಕಾಂಗ್ರೆಸ್ ಮುಖಂಡರಾದ ಅಮರಾವತಿ ಚಂದ್ರಶೇಖರ್, ಹೊಸಹಳ್ಳಿ ಬೋರೇಗೌಡ, ರವಿಶಂಕರೇಗೌಡ ಮತ್ತಿತರರು ಪಾಲ್ಗೊಂಡಿದ್ದರು.ವೀರಯೋಧರ ಕುಟುಂಬಕ್ಕೆ ಪರಿಹಾರ: ಇತ್ತೀಚಿನ ದಿನಗಳಲ್ಲಿ ಮಡಿದ ವೀರಯೋಧರಾದ ಆಲಂಬಾಡಿ ಸತೀಶ್ ಹಾಗೂ ಜಯರಾಮೇಗೌಡ ಅವರ ಕುಟುಂಬ ಸದಸ್ಯರಿಗೆ 10 ಲಕ್ಷ ರೂಪಾಯಿ ಪರಿಹಾರ ಧನ ವಿತರಿಸಲಾಯಿತು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ರಾಹುಲ್ ಅವರಿಗೆ ಡಾ. ಮಮತಾ ಬಸವರಾಜ ಅವರು 10 ಸಾವಿರ ರೂಪಾಯಿ ನೀಡಿ ಗೌರವಿಸಿದರು.`ಶಿಕ್ಷಣ- ಸಮಾಜ ಪೂರಕವಾಗಿರಲಿ'

ಮಂಡ್ಯ: `ದೇಶದ ಅಭ್ಯುದಯಕ್ಕೆ ಶಿಕ್ಷಣ, ಶಿಕ್ಷಕ ಮತ್ತು ಸಮಾಜ ಪೂರಕವಾಗಿ ಕೆಲಸ ನಿರ್ವಹಿಸಬೇಕಿದೆ' ಎಂದು ಸಾಹಿತಿ ಡಾ. ಹಂ.ಪ.ನಾಗರಾಜಯ್ಯ ಹೇಳಿದರು.ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಗುರುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ತಾಲ್ಲೂಕು ಘಟಕ ವತಿಯಿಂದ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ದೇಶದ ಕೀರ್ತಿಯನ್ನು ಹೆಚ್ಚಿಸಿ, ಉನ್ನತ ಸ್ಥಾನಕ್ಕೆ ಒಯ್ಯಲು ಅರ್ಪಣಾ ಮನೋಭಾವದಿಂದ ದುಡಿಯುವ ದೀಕ್ಷೆಯನ್ನು ಪ್ರತಿಯೊಬ್ಬರೂ ತೊಡಬೇಕಿದೆ ಎಂದು ತಿಳಿಸಿದರು.ಮಿಮ್ಸ ನಿರ್ದೇಶಕಿ ಡಾ. ಪುಷ್ಪಾ ಸರ್ಕಾರ್ ಮಾತನಾಡಿದರು. ಡಾ. ಎಂ.ಎಸ್. ತ್ರಿನೇಶ್‌ಗೌಡ, ಡಾ. ಬಿ.ರಾಮಚಂದ್ರ, ಕೆ.ಬಿ.ನಾರಾಯಣ್, ಕೆ.ನಾಗಾನಂದ, ಪಿ.ಎಸ್.ಚಂದ್ರಮ್ಮ, ಎಂ.ಆರ್.ಮಂಜು, ಎ.ಆರ್.ರಾಮಯ್ಯ, ಕೆ.ಶಿವಣ್ಣ, ಎಚ್. ಶೌಕತ್ ಅಲಿ, ಚಲುವರಾಜು, ರತ್ನಮ್ಮ, ಎ.ಪಿ. ಕಮಲಾ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಕಸಾಪ ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ, ಕಸಾಪ ಮಂಡ್ಯ ತಾಲ್ಲೂಕು ಘಟಕ ಅಧ್ಯಕ್ಷ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.`ಶಿಕ್ಷಕನಲ್ಲಿ ತಾಯ್ತನ ತುಂಬಿರಬೇಕು'

ಶ್ರೀರಂಗಪಟ್ಟಣ: ಶಿಕ್ಷಕ ಪಾಠ ಬೋಧನೆ ಮಾಡಿದರೆ ಅಧ್ಯಾಪಕನ ಸೇವೆ ಸಾರ್ಥಕವಾಗುವುದಿಲ್ಲ; ವಿದ್ಯಾರ್ಥಿಗಳಿಗೆ ತಾಯ್ತನದ ಪ್ರೀತಿ, ವಾತ್ಸಲ್ಯ ತೋರಬೇಕು ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.ಇಲ್ಲಿನ ಟಿಎಪಿಸಿಎಂಎಸ್ ಭವನದಲ್ಲಿ ತಾಲ್ಲೂಕು ಶಿಕ್ಷಕರ ದಿನಾಚರಣಾ ಸಮಿತಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮತನಾಡಿದರು.ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಕಾಲೇಜು ಶಿಕ್ಷಣಕ್ಕಿಂತ ಹೆಚ್ಚು ಮುಖ್ಯ. ಅದು ಶಿಕ್ಷಣಾರ್ಥಿಯಲ್ಲಿ ಬೌದ್ಧಿಕ ವ್ಯಕ್ತಿತ್ವವನ್ನು ಕಟ್ಟಿಕೊಡುವ ಕಾಲಘಟ್ಟ. ಶ್ರದ್ಧೆ, ಶಿಸ್ತಿನಿಂದ ವಿದ್ಯಾರ್ಥಿಗಳ ಬೌದ್ಧಿಕ ವಿಕಾಸಕ್ಕೆ ತಳಹದಿ ಹಾಕುವುದು ಶಿಕ್ಷಕನ ಕರ್ತವ್ಯ. ಬುದ್ದಿವಂತರು ಶಿಕ್ಷಕ ವೃತ್ತಿಗೆ ಬರುತ್ತಿಲ್ಲ. ಎಲ್ಲೂ ಸಲ್ಲದವರು ಶಿಕ್ಷಕ ತರಬೇತಿಗೆ ಸೇರುತ್ತಾರೆ ಎಂಬ ಅಪವಾದ ಇದೆ. ತನ್ನ ಮಾದರಿ ಸೇವೆ ಮೂಲಕ ಶಿಕ್ಷಕ ಈ ಅಪವಾದವನ್ನು ತೊಡೆದು ಹಾಕಬೇಕು. ವಿದ್ಯಾರ್ಥಿಗಳಿಗೆ ರಾಜಕಾರಣಿ, ಸಿನಿಮಾ ನಟರು ಮಾದರಿಯಾದರೆ ಸಮಾಜ ಸ್ವಾಸ್ಥ್ಯ ಹದಗೆಡುತ್ತದೆ ಎಂದರು.ತನ್ನದೇ ವಿದ್ಯಾರ್ಥಿನಿಯ ಮೇಲೆ ಶಿಕ್ಷಕ ನಡೆಸುವ ಲೈಂಗಿಕ ಕಿರುಕುಳದ ವರದಿಗಳು ಇಡೀ ಗುರುಕುಲಕ್ಕೆ ಕಳಂಕ ತರುತ್ತಿವೆ. ಇದು ನೈತಿಕ ಅಧಃಪತನದ ಸೂಚಕವಲ್ಲದೆ ಬೇರೆಯಲ್ಲ. ಇಂತಹ ದುರಾಚಾರ, ಅಪಸವ್ಯಗಳಿಗೆ ಎಡೆಮಾಡಿಕೊಡಬಾರದು. ನೈತಿಕ ಜೀವನ ನಡೆಸದವರು ಈ ಪವಿತ್ರವಾದ ವೃತ್ತಿಗೆ ಬರಬಾರದು. ಸಮಾಜದಿಂದ ಗೌರವ ಬಯಸುವ ಶಿಕ್ಷಕ ಮೊದಲು ತಾನು ಗೌರವ ತರುವಂತೆ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಪ್ರೊ. ಕರಿಮುದ್ದೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಚಲಿತ ಸ್ಥಿತಿಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಕೂಡ ಬದಲಾಗಬೇಕು. ಶಿಕ್ಷಕ ಕಬ್ಬಿಣವನ್ನು ಸುವರ್ಣವನ್ನಾಗಿ ಮಾಡಬಲ್ಲ ಶಕ್ತಿಯಾಗಬೇಕು ಎಂದ ಅವರು, ಪ್ರೊಫೆಸರ್ ಶಬ್ದ ಬಳಕೆ ಸಮಂಜಸ ಅಲ್ಲ. ಅಕ್ಷರದಾತನಿಗೆ ಉಪಾಧ್ಯಾಯ ಎಂಬ ಪದ ಬಳಕೆಯೇ ಸೂಕ್ತ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಇತರ ವೃತ್ತಿಗಳಂತೆ ಶಿಕ್ಷಕ ವೃತ್ತಿ ವ್ಯಾವಹಾರಿಕ ಕಸುಬಾದರೆ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಎಂದು ಹೇಳಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ಹೊನ್ನರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಲಿಂಗು, ರಾಜ್ಯ ಸಹ ಕಾರ್ಯದರ್ಶಿ ಜಿ.ಬಿ.ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಶ್ರೀನಿವಾಸ್, ಕಾರ್ಯದರ್ಶಿ ಎಚ್.ಸಿ. ಚಂದ್ರು, ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಶಿಕ್ಷಕರ ದಿನಾಚರಣೆ ಸಮಿತಿ ಅಧ್ಯಕ್ಷ ಕೆ.ವಿ. ಅಮರನಾಥ್, ಸಂಚಾಲಕ ಆರ್.ಪಿ. ಮಹೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ಇತರರು ಇದ್ದರು.`ಗುರುಪರಂಪರೆಗೆ ಬುನಾದಿ ಹಾಕಿದ್ದು ಭಾರತ'

ನಾಗಮಂಗಲ: ಗುರುಪರಂಪರೆಗೆ ಭದ್ರ ಬುನಾದಿ ಹಾಕಿದ ದೇಶ ಭಾರತ ಎಂದು ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಎನ್. ರಾಮು ಹೇಳಿದರು.ಶ್ರೀ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾ ಭವನದಲ್ಲಿ ಬಿಬಿಎಂ ಪದವಿ ವಿದ್ಯಾರ್ಥಿಗಳು ಗುರುವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಕೆ.ಎಂ. ಸ್ವಾಮಿಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಕ್ಷರಸ್ಥರಾದರೆ ಸಾಲದು ಸುಶಿಕ್ಷಿತರಾಗಬೇಕು. ಸರ್ವಪಲ್ಲಿ ರಾಧಾಕೃಷ್ಣನ್ ದೇಶದ ಆಸ್ತಿ. ಅವರ ಆದರ್ಶ ಶಿಕ್ಷಕರಿಗೆ ಮಾದರಿ ಎಂದು ಅಭಿಪ್ರಾಯ ಪಟ್ಟರು.ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ 1 ಬೆಂಕಿಕಡ್ಡಿಯಲ್ಲಿ ಅತೀ ಹೆಚ್ಚು ಕ್ಯಾಂಡಲ್ ಹಚ್ಚುವ ಹಾಗೂ ಮ್ಯೂಸಿಕಲ್ ಬಾಲ್ ಪಂದ್ಯಗಳನ್ನು ಆಡಿಸಿದರು. ವಾಣಿಜ್ಯಶಾಸ್ತ್ರ ವಿಷಯದ ಪ್ರಾಧ್ಯಾಪಕ ರಾಜೇಂದ್ರ, ಅತಿಥಿ ಉಪನ್ಯಾಸಕರಾದ ರಾಘವೇಂದ್ರ ಹಾಗೂ ನಿರ್ಮಲಾ ಪಂದ್ಯಗಳಲ್ಲಿ ವಿಜೇತರಾದರು.ಬಿಬಿಎಂ ವಿದ್ಯಾರ್ಥಿಗಳಾದ ರಕ್ಷಿತಾ ಪ್ರಾರ್ಥಿಸಿದರು. ಚಿರಂಜೀವಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸವಿತಾ ವಂದಿಸಿದರು. ಕಾಲೇಜಿನ ಉಪನ್ಯಾಸಕರು ಬೋಧಕೇತರ ಸಿಬ್ಬಂದಿ ಮುಂತಾದವರು ಕಾಯಕ್ರಮದಲ್ಲಿ ಇದ್ದರು.`ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಸಜ್ಜುಗೊಳಿಸಿ'

ಮದ್ದೂರು: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಗುರುವಾರ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.  

ಕೆ.ಹೊನ್ನಲಗೆರೆ: ಇಲ್ಲಿನ ಆರ್.ಕೆ. ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆ ಅಧ್ಯಕ್ಷ ಬಿ.ರಾಮಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿಗೆ ಅನುಗುಣವಾಗಿ ಮಕ್ಕಳನ್ನು ಸಜ್ಜುಗೊಳಿಸುವ ಜವಾಬ್ದಾರಿ ಶಿಕ್ಷಕರ ಹೆಗಲ ಮೇಲಿದೆ ಎಂದರು.ಶಾಲಾ ಮುಖ್ಯಮಂತ್ರಿ ನಿಹಾರಿಕಾ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಶಿಕ್ಷಣ ಮಂತ್ರಿ ಹರ್ಷಿತಾ ಮಾತನಾಡಿದರು. ಶಿಕ್ಷಕರಾದ ಚಂದ್ರಶೇಖರ್ ಹಾಗೂ ಪ್ರಸಾದ್ ಅವರನ್ನು ಕಾರ್ಯಾಧ್ಯಕ್ಷ ಪ್ರಸನ್ನ ಸನ್ಮಾನಿಸಿದರು.  ಆಡಳಿತಾಧಿಕಾರಿ ಶಿವಣ್ಣೇಗೌಡ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಿದರು.ಸಂಯೋಜನಾಧಿಕಾರಿ ಕೆ.ಎಸ್. ಮಹದೇವೇಗೌಡ, ನಿರ್ದೇಶಕರಾದ ಕೆಂಪಣ್ಣ, ಆರ್.ಸಿ. ಶಿವಲಿಂಗೇಗೌಡ, ಪ್ರಾಂಶುಪಾಲ ಲೋಕಪ್ರಕಾಶನಾರಾಯಣ್, ಮುಖ್ಯಶಿಕ್ಷಕರಾದ ರಮೇಶ್, ಕಲ್ಯಾಣಿ ಸೇರಿದಂತೆ ಪೋಷಕರು, ಮಕ್ಕಳು ಪಾಲ್ಗೊಂಡಿದರು.

ಶಿವಪುರ: ಇಲ್ಲಿನ ಲಯನ್ಸ್ ಸಂಸ್ಥೆ ವತಿಯಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು. ಶಿಕ್ಷಕ ದಂಪತಿಗಳಾದ ಐಸಾಕ್ ವಿಜಯಶೇಖರ್ ಹಾಗೂ ಯೂನಸ್ ಶಾಂತಿ ಅವರನ್ನು ಸಂಸ್ಥೆ ಅಧ್ಯಕ್ಷ ನಾಗರಾಜು ಸನ್ಮಾನಿಸಿದರು. ಕಾರ್ಯದರ್ಶಿ ಆದರ್ಶ, ವಲಯಾಧ್ಯಕ್ಷ ಚಿಕ್ಕಸ್ವಾಮಿ, ಜಿಲ್ಲಾ ಸಂಪುಟ ಖಜಾಂಚಿ ವಿ.ಕೆ. ಜಗದೀಶ್, ಎಚ್. ಮಾದೇಗೌಡ, ಖಜಾಂಚಿ ನಾಗೇಶ್, ಉಪಾಧ್ಯಕ್ಷ ಅಭಿಲಾಷ್ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು ಹಾಜರಿದ್ದರು.ಕೆಸ್ತೂರು: ಇಲ್ಲಿನ ಸಿದ್ದಗಂಗಾ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯನ್ನು ಮುಖ್ಯಶಿಕ್ಷಕ ವೃಷಭೇಂದ್ರಪ್ರಸಾದ್ ಗಿಡ ನೆಡುವ ಮೂಲಕ ಉದ್ಘಾಟಿಸಿದರು.ಎಸ್‌ಡಿಎಂಸಿ ಸದಸ್ಯೆ ಲಕ್ಷ್ಮಿಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಕೆ.ಟಿ. ಶಿವಕುಮಾರ್, ಪುಷ್ಪ, ಕೆ. ಬಸವರಾಜು,  ಕಾಂತನಾಯಕ್, ಎ.ಎಲ್. ಶಿವರಾಜು, ಮನೋಹರ್, ಸ್ವಾಮಿ, ಗ್ರಂಥಪಾಲಕ ಯತೀಶ್ ಸೇರಿದಂತೆ ಶಾಲಾಮಂತ್ರಿಮಂಡಲದ ಮಧುರಾ, ನಯನ, ಶ್ವೇತ, ಟೀನಾ, ಮಂದಾರ, ವಿದ್ಯಾ, ಚೈತ್ರ, ರಂಜಿತಾ ಪಾಲ್ಗೊಂಡಿದ್ದರು.ನಗರಕೆರೆ: ಇಲ್ಲಿನ ಪೂರ್ಣಿಮ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಸಮಾಜ ಸೇವಕ ಎನ್.ಆರ್. ವರುಣ್ ಉದ್ಘಾಟಿಸಿದರು.ಮುಖ್ಯಶಿಕ್ಷಕ ಜಿ.ಸಿ. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಶಿವಲಿಂಗಯ್ಯ ಮಾತನಾಡಿದರು. ಶಿಕ್ಷಕರಾದ ಜಿ.ಜೆ. ಕೃಷ್ಣ, ಜಗದೀಶ್, ಶಂಭೂಗೌಡ, ದಿಲೀಪ್, ಪಂಕಜ, ರಮ್ಯ, ಶಕುಂತಲ, ಅಭಿಲಾಷ, ಪ್ರತಿಭಾ, ಎನ್.ಟಿ. ಶ್ರುತಿ, ಸುಶೀಲಮ್ಮ ಸೇರಿದಂತೆ ಮಕ್ಕಳು ಪಾಲ್ಗೊಂಡಿದ್ದರು.`ಕಲಿಕೆ ಜತೆ ಶಿಸ್ತು ರೂಢಿಸಿಕೊಳ್ಳಿ'

ಹಲಗೂರು: ಗುರಿ ಸಾಧನೆಗೆ ಶಿಸ್ತು ಅಗತ್ಯ. ಆದ್ದರಿಂದ ವಿದ್ಯಾರ್ಥಿಗಳು ಕಲಿಕೆಯ ದಿನಗಳಲ್ಲಿಯೇ ಶಿಸ್ತು ಅಳವಡಿಸಿಕೊಂಡರೆ ಯಶಸ್ಸು ಸುಲಭವಾಗುತ್ತದೆ ಎಂದು ಜನಪದ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಸಂಚಾಲಕ ಬಾಲಾಜಿ ಹೇಳಿದರು.ಹಲಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ಸಾಂಸ್ಕೃತಿಕ, ಕ್ರೀಡಾ ಮತ್ತು ಎನ್.ಎಸ್.ಎಸ್ ಕಾರ್ಯ ಚಟುವಟಿಕೆಗಳ ಉದ್ಘಾಟನೆ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಕರ ದಿನಾಚರಣೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಪ್ರತಿ ಸಾಧನೆಯ ಹಿಂದೆ ಗುರುವಿನ ಪಾತ್ರ ಮಹತ್ವವಾದುದ್ದಾಗಿದೆ. ಗುರುವಿನ ಶಿಸ್ತು ಸಾಧನೆಯ ಮೆಟ್ಟಿಲು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಿಸ್ತಿನ ಜೀವನಕ್ಕೆ ಒಡ್ಡಿಕೊಳ್ಳಬೇಕು ಎಂದರು.ಶಿಕ್ಷಕರ ದಿನಾಚರಣೆ ಅಂಗವಾಗಿ ಉಪನ್ಯಾಸಕರಿಗೆ ನಡೆಸಿದ ಮ್ಯೂಜಿಕಲ್ ಚೇರ್ ಸ್ಪರ್ಧೆಯಲ್ಲಿ ವಿಜೇತರಾದ ಸೀಮಾಕೌಶರ್ (ಪ್ರಥಮ), ಮಹದೇವಸ್ವಾಮಿ (ದ್ವಿತೀಯ), ಎಂ.ಎಚ್. ಮೂರ್ತಿ (ತೃತೀಯ), ಕಾರ್ಡ್ ಬಾಕ್ಸ್ ಸ್ಪರ್ಧೆಯಲ್ಲಿ ವಿಜೇತರಾದ ಪಿ.ಭಾಸ್ಕರ್ (ಪ್ರಥಮ), ರಶ್ಮಿ(ದ್ವಿತೀಯ), ಎಂ.ಎಚ್. ಮೂರ್ತಿ (ತೃತೀಯ), ಕೆರೆ-ದಡ ಸ್ಪರ್ಧೆಯಲ್ಲಿ ವಿಜೇತರಾದ ರಶ್ಮಿ (ಪ್ರಥಮ), ವಿಶ್ವರಾಧ್ಯ. ನಾ.ಕೋಟೆ (ದ್ವಿತೀಯ), ಭವ್ಯ( ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ನಡೆಸಿದ ನಿಧಾನಗತಿ ಸೈಕಲ್ ಚಲನೆ ಸ್ಪರ್ಧೆಯಲ್ಲಿ ವಿಜೇತರಾದ ಸತೀಶ (ಪ್ರಥಮ), ತಬ್ರೀಜ್ (ದ್ವಿತೀಯ), ಆಸಿಫ್ (ತೃತೀಯ). ಬಲೂನ್ ನೇಮ್ಸ ಸ್ಪರ್ಧೆಯಲ್ಲಿ ವಿಜೇತರಾದ ಎನ್. ಸುಮಾ (ಪ್ರಥಮ), ಎಲ್.ಆರ್. ಸುಮಾ (ದ್ವಿತೀಯ), ರಶ್ಮಿ (ತೃತೀಯ) ಗೋಣಿಚೀಲ ಓಟದ ಸ್ಪರ್ಧೆ ವಿಜೇತರಾದ ರಘು (ಪ್ರಥಮ), ಹರೀಶ್ (ದ್ವಿತೀಯ) ಲೆಮನ್ ಇನ್ ಸ್ಟಿಕ್ ಬ್ಯಾಲೆನ್ಸ್ ಸ್ಪರ್ಧೆ ವಿಜೇತರಾದ ಮಂಜುಳ (ಪ್ರಥಮ), ಮಾನಸ (ದ್ವಿತೀಯ), ನಿಷ್ಕಳ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು.ಪ್ರಾಂಶುಪಾಲರಾದ ಪ್ರೊ.ಕೆ. ಸಿದ್ಧರಾಜು ಅಧ್ಯಕ್ಷತೆ ವಹಿಸಿದ್ದರು. ಚಲನಚಿತ್ರ ನಿರ್ದೇಶಕ ಸಿಂಪಲ್‌ಸುನಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ವಿಶ್ವರಾಧ್ಯ.ನಾ.ಕೋಟೆ, ಸಹಾಯಕ ಪ್ರಾಧ್ಯಾಪಕರಾದ ಮಹದೇವಸ್ವಾಮಿ, ಚಿನ್ನಸ್ವಾಮಿ, ರಶ್ಮಿ, ಶೀರೀನ್‌ತಾಜ್, ಸೀಮಾಕೌಶರ್, ಉಮೇಶ್, ದೈಹಿಕ ಶಿಕ್ಷಣ ನಿರ್ದೇಶಕ ಪಿ. ಭಾಸ್ಕರ್, ಅಧೀಕ್ಷಕ ಚಿಕ್ಕನಾಗೇಗೌಡ, ನಾಗರಾಜೇಗೌಡ, ವೆಂಕಟೇಶ್, ಶಿವಣ್ಣ ಇದ್ದರು.`ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ'

ಕೃಷ್ಣರಾಜಪೇಟೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಪ್ರತಿಭಾವಂತರಾಗಿದ್ದು, ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಶಿಕ್ಷಕರಿಂದ ಮಾತ್ರ ಸಾಧ್ಯವಾಗುತ್ತದೆ ಎಂದು ಪಟ್ಟಣದ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಎಂ. ದೇವರಾಜು ತಿಳಿಸಿದರು.ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದ ಗುರಿಗಳನ್ನು ಇಟ್ಟುಕೊಳ್ಳಬೇಕು. ಇದರೊಂದಿಗೆ ತಮ್ಮ ಗುರಿಯನ್ನು ತಪ್ಪದೇ ತಲುಪುವಂತಹ ಇಚ್ಛಾಶಕ್ತಿಯನ್ನು ಸಹ ಹೊಂದಿರಬೇಕು. ಈ ನಿಟ್ಟಿನಲ್ಲಿ ಉತ್ತಮ ಶಿಕ್ಷಕರೆನಿಸಿರುವ ಸರ್ವಪಳ್ಳಿ ರಾಧಾಕೃಷ್ಣನ್‌ರಂತಹ ಮಹಾತ್ಮರು ಆದರ್ಶವಾಗಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಹಿರಿಯ ಉಪನ್ಯಾಸಕ ಪ್ರೊ.ಸಿ. ರಮೇಶ್ ಮಾತನಾಡಿ, ಸಮಾಜದಲ್ಲಿ ಶಿಕ್ಷಕರಿಗೆ ಉನ್ನತವಾದ ಸ್ಥಾನಮಾನವಿದ್ದು, ಎಷ್ಟೇ ಹಣ, ಅಂತಸ್ತು ಹೊಂದಿದ ವ್ಯಕ್ತಿಗಿಂತಲೂ ಹೆಚ್ಚಿನ ಗೌರವ ದೊರೆಯುತ್ತದೆ. ಒಬ್ಬ ಒಳ್ಳೆಯ ಶಿಕ್ಷಕನಾದವನು ತಮ್ಮ ಮುಂದಿನ ಎಲ್ಲ ಜನ್ಮದಲ್ಲಿಯೂ ಶಿಕ್ಷಕನಾಗಿಯೇ ಹುಟ್ಟಲು ಬಯಸುತ್ತಾನೆ ಎಂದರು.ಕಾಲೇಜಿನ ಅಧೀಕ್ಷಕ ಬಿ.ಎ. ಮಂಜುನಾಥ್, ಉಪನ್ಯಾಸಕರಾದ ನಂಜುಂಡಯ್ಯ, ಗಾಯಿತ್ರಮ್ಮ, ಪ್ರಕಾಶ್ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. `ಖಾಸಗಿ ಶಾಲೆ ವ್ಯಾಮೋಹ ಬಿಡಿ'

ಮಳವಳ್ಳಿ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕಾಗಿ ಸರ್ಕಾರ ಅಕ್ಷರ ದಾಸೋಹ, ಕ್ಷೀರಭಾಗ್ಯ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುತ್ತಿದ್ದು ಪೋಷಕರು ಖಾಸಗಿ ಶಾಲೆ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಮುಂದಾಗಬೇಕೆಂದು ಮುಖ್ಯಶಿಕ್ಷಕ ಎಂ. ಮಲ್ಲಿಕಾರ್ಜುನಸ್ವಾಮಿ ತಿಳಿಸಿದರು.ಪಟ್ಟಣದ ಮದ್ದೂರು ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾತಮಿಕ ಬಾಲಕಿಯರ ಪಾಠಶಾಲೆ (ಕೇಂದ್ರ)ಯಲ್ಲಿ ಗುರುವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಟಿ.ರಾಮೇಗೌಡ ಅವರು ವಹಿಸಿದ್ದರು.ಲಯನ್ಸ್ ಸಂಸ್ಥೆ ಅಧ್ಯಕ್ಷ ಅಣ್ಣೇಗೌಡ, ಕಾರ್ಯದರ್ಶಿ ಸೋಮೇಗೌಡ ಹಾಗೂ ಪದಾಧಿಕಾರಿಗಳು ಸೇರಿ ಶಾಲಾ ಮುಖ್ಯಶಿಕ್ಷಕ ಎಂ. ಮಲ್ಲಿಕಾರ್ಜುನಸ್ವಾಮಿ, ಸಹಶಿಕ್ಷಕರಾದ ಗಂಗರಾಜು, ಎ.ಬಿ. ನಾಗರಾಜು, ಎಂ.ಎನ್. ಸುಜಯ, ಜ್ಯೋತಿಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಒಲಂಪಿಯಾಡ್ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry