ಸೋಮವಾರ, ಏಪ್ರಿಲ್ 12, 2021
32 °C

ಭಾರತೀಸುತರ ನೆನಪಿನಂಗಳದಲ್ಲಿ...

-ಪುಷ್ಪ ಸುರೇಂದ್ರ,ಮೈಸೂರು. Updated:

ಅಕ್ಷರ ಗಾತ್ರ : | |

ಳೆದ ವಾರ ಮಡಿಕೇರಿಯಲ್ಲಿ ಮುಕ್ತಾಯ­ವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ­­ದಲ್ಲಿ ಕೊಡಗಿನ ಲೇಖಕರುಗಳಾದ  ಭಾರತೀ­ಸುತ, ಕೊಡಗಿನ ಗೌರಮ್ಮ ಹಾಗೂ ಐ.ಮಾ. ಮುತ್ತಣ್ಣ ನವರ ಹೆಸರಿನಲ್ಲಿ ವೇದಿಕೆ­ಗಳನ್ನು ನಿರ್ಮಿಸಲಾಗಿತ್ತು. ಆದರೆ ಈ ಲೇಖಕರ ಕುರಿತಾದ ಮಾಹಿತಿ ಇಂದಿನ ಬಹಳಷ್ಟು ಮಂದಿಗೆ ಇಲ್ಲ. ಇವರನ್ನು ಪರಿಚಯಿಸುವ ಕಾರ್ಯ ಸಾಹಿತ್ಯ ಸಮ್ಮೇಳನದಲ್ಲೂ ನಡೆಯಲಿಲ್ಲ.   ಮುಂದಿನ ವರ್ಷಕ್ಕೆ ಭಾರತೀಸುತರು ಜನಿಸಿ ನೂರು ವರ್ಷ ತುಂಬು­ತ್ತದೆ. ಈ ಹಿರಿಯ ಲೇಖಕರನ್ನು ನೆನಪಿಸಿ­ಕೊಳ್ಳುವ ಪ್ರಯತ್ನ ಇಲ್ಲಿದೆ.ಭಾರತೀಸುತರ ಮೂಲ ಹೆಸರು ಎಸ್.ಆರ್. ನಾರಾಯಣ ರಾವ್ (1915–1976 ).  ಕೊಡಗಿ­ನ­ಲ್ಲಿಯೇ ಜನಿಸಿದವರು ಅವರು. ಅವರ ಕುಟುಂಬದವರು ಸ್ವಗ್ರಾಮವಾದ ದಾರೋಟು ಎಂಬ ಗ್ರಾಮ ಬಿಟ್ಟು ಮಡಿಕೇರಿಯ ಹತ್ತಿರದ ಬಿಳಿಗೇರಿಗೆ ಬಂದು ನೆಲಸಿದವರಂತೆ. ಇವರಿಗೆ ಏಳು ವರ್ಷವಾಗಿದ್ದಾಗ ತಂದೆ ತೀರಿಕೊಂಡು  ಅವರ ಕಾಫಿ ತೋಟ ನೋಡಿಕೊಳ್ಳುವವರಿಲ್ಲದೆ, ಬಡತನ ಅನುಭವಿಸಿದವರು. ಭಾರತೀಸುತ ಎಂಬ ಕಾವ್ಯ ನಾಮದಿಂದಲೇ ಇವರು ಪರಿಚಿತ.

ಭಾರತೀ­ಸುತ ಮೊದಲು ವಿರಾಜಪೇಟೆಯಲ್ಲಿ,  ಆಮೇಲೆ ಆಗಿನ ಕಾಲಕ್ಕೆ ಮಾದರಿ ಶಾಲೆ­ಯಾಗಿದ್ದ ಮಡಿಕೇರಿಯ ಸೆಂಟ್ರಲ್ ಹೈಸ್ಕೂಲ್‌­ನಲ್ಲಿ ಕನ್ನಡ ಮಾಸ್ತರರಾಗಿ ದುಡಿದವರು.  ಒಟ್ಟು ಮೂವತ್ತೆರಡು ಕಾದಂಬರಿಗಳು, ಎಂಟು ಕಥಾ ಸಂಕಲನಗಳು, ಹತ್ತೊಂಬತ್ತು ಮಕ್ಕಳ ಕಥೆಗಳನ್ನು ಅವರು ಬರೆದಿದ್ದಾರೆ. ಮೊದಲನೆಯ ಕಾದಂಬರಿ ಬರೆದಾಗ ಅವರಿಗೆ ಕೇವಲ ಹದಿಮೂರು ವರ್ಷ.ಎಲ್ಲರಿಗೂ ಗೊತ್ತಿರುವ ಭಾರತೀಸುತರ ಪುಸ್ತಕ­ಗಳೆಂದರೆ ‘ಹುಲಿಯ ಹಾಲಿನ ಮೇವು’, ‘ಗಿರಿಕನ್ನಿಕೆ’ ‘ಎಡಕಲ್ಲು ಗುಡ್ಡದ ಮೇಲೆ’ ಎಂಬ ಕಾದಂಬರಿ­­ಗಳು ಮಾತ್ರ. ಅದರ­ಲ್ಲಿಯೂ ಕೆಲವು ಕಾದಂಬರಿ­ಗಳು ಸಿನಿಮಾ ಆಗಿರುವುದರಿಂದ ಜನಪ್ರಿಯ­ವಾಗಿವೆ. ‘ಗಿರಿಕನ್ನಿಕೆ’ ಹಾಗೂ  ‘ಹುಲಿಯ ಹಾಲಿನ ಮೇವು’ ಕಾದಂಬರಿಗಳನ್ನು   ಸಿನಿಮಾಗೆ ಬೇಕಾದಂತೆ ಅಳವಡಿಸಿಕೊಂಡಿದ್ದಾರೆ. ಆದರೆ ಭಾರತೀಸುತರು ಅವನ್ನು ಬರೆದಾಗ ಅವರಿಗೆ ಸ್ಥಳೀಯ ಕೊಡವರ ಚರಿತ್ರೆ, ಸಂಸ್ಕೃತಿ­ಯನ್ನು ಬೇರೆ ಕನ್ನಡಿಗರಿಗೆ ಪರಿಚಯಿಸುವ ಆಸೆ ಇತ್ತು.ಕೊಡಗಿನ ಯಾವುದೇ ಕೃಷಿ ಅಥವಾ ಬುಡಕಟ್ಟಿನ ಸಮುದಾಯವನ್ನಾಗಲೀ ಭಾರತೀ­ಸುತರು ತೆರೆದ ಮನಸ್ಸಿನಿಂದ ನೋಡಲು ಪ್ರಯತ್ನಿ­ಸಿದ್ದಾರೆ. ಕೊಡವರ ಪರೆಕಳಿ, ಬೋಳಕ್ಕಾಟ ಇತ್ಯಾದಿ ಸಾಂಸ್ಕೃತಿಕ ಜೀವನವನ್ನು ಬೇರೆ ಯಾರೂ ಇಷ್ಟು ಚೆನ್ನಾಗಿ ಕನ್ನಡಿಗರಿಗೆ ಪರಿಚಯಿಸಿ­­ರುವುದಿಲ್ಲ. ಆದರೆ ಇಂದು ಕೆಲ ಕೊಡವರು ಭಾರತೀಸುತ ಕೊಡಗಿಗೆ ಸೇರಿದವ­ರಲ್ಲದ ಹಾಗೆ ನಡೆದುಕೊಳ್ಳುತ್ತಾರೆ. ಗಿರಿಜನ­ರೊಟ್ಟಿಗಿನ ಸಹವಾಸ ಮಾಡಿ ಕಥೆಗಾರ­ನಾಗಿದ್ದ­ರಿಂದ ಬ್ರಾಹ್ಮಣ ಸಮಾಜವೂ ಅವರನ್ನು ಕೆಲ ಕಾಲ ದೂರ ಇಟ್ಟಿತ್ತಂತೆ.

ಭಾರತೀಸುತರು ಒಂಬತ್ತನೆಯ ತರಗತಿ­ಯ­ಲ್ಲಿರುವಾಗಲೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು, ವೈನಾಡಿ­ನಲ್ಲಿ ಚಳವಳಿ ನಡೆಸುತಿದ್ದ ಸಂದರ್ಭ­ದಲ್ಲಿ ದಸ್ತಗಿರಿ­ಯಾಗಿ ಆರು ತಿಂಗಳ ಕಾಲ ಜೈಲು ಅನುಭವಿಸಿದರಂತೆ. 1932 ರಲ್ಲಿ ಮತ್ತೆ ಬಂಧನಕ್ಕೆ ಒಳಗಾಗಿ ಕಣ್ಣಾನೂರಿನ ಜೈಲಿನಲ್ಲಿ­ದ್ದಾಗ ಎ.ಕೆ.ಗೋಪಾಲನ್, ನಂಬೂದರಿಪಾದ್ ಮತ್ತಿತರ ಎಡ ಪಂಥೀಯ ನಾಯಕರಿಂದ ಪ್ರಭಾವಿ­ತ­ರಾದವರು. ಜೈಲಿನಿಂದ ಬಿಡುಗಡೆ­ಯಾದ ಮೇಲೆ ಕಲ್ಲಿಕೋಟೆಯ ಬಂದರಿನಲ್ಲಿ ಕಾರ್ಮಿಕರಾಗಿ ಸೇರಿ ಅಲ್ಲಿ ಕಾರ್ಮಿಕ­ರನ್ನು ಸಂಘಟಿಸುವ ಕೆಲಸ ಮಾಡಿದ್ದರು ಎಂದು ಅವರ ಮಗಳು ಹಾಗೂ ಬರಹಗಾರ­ರಾದ ಕುಸುಮ ಶಾನಭಾಗ, ತಮ್ಮ ಇತ್ತೀಚಿನ ‘ಪುಟಗಳ ನಡುವಿನ ನವಿಲುಗರಿ’ ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.ಕೇರಳದ ವೈನಾಡಿನ ಗುಡ್ಡ ಕಾಡುಗಳಲ್ಲಿ ಸುತ್ತಿ, ಅಲ್ಲಿ ಕಾಫಿ ಎಸ್ಟೇಟ್ ಮ್ಯಾನೇಜರ್ ಆಗಿದ್ದು, ಗುಡ್ಡಗಾಡಿನ ಜನರಾದ ಪಣಿಯರ ಜೊತೆ ಇದ್ದುಕೊಂಡು ಬರೆದ ಕಾದಂಬರಿ ‘ಹುಲಿಯ ಬೋನು’ ಎಂಬ ಕಾದಂಬರಿ. ಗುಡ್ಡ­ಗಾಡಿನ ಜನರ ಜೀವನ ಪದ್ಧತಿ, ಅವರ ಮುಗ್ಧತೆ ಮತ್ತು ಅದರ ದುರುಪಯೋಗ ಮಾಡಿಕೊಳ್ಳುವ ಜನರ ಚಿತ್ರಣ ಅವರ ಹಲವಾರು ಕಾದಂಬರಿ­ಗಳಲ್ಲಿ ಸಿಕ್ಕುತ್ತದೆ. ಕಾಡಿನ ಮೂಲ ನಿವಾಸಿಗಳನ್ನು ಎಲ್ಲ ಮನುಷ್ಯರ ತರಹವೇ ನೋಡಿ ಅವರ ನೋವು, ನಲಿವು ಕಷ್ಟಗಳನ್ನು ಕನ್ನಡಿಗರಿಗೆ ಪರಿಚಯಿಸಿದವರು ಭಾರತೀಸುತರು.ಯಾರಲ್ಲಿಯೂ ಕೈ ಚಾಚದೆ ಮೇಷ್ಟ್ರುಗಿರಿ ಮಾಡುತ್ತಲೇ ಸರಳ ಬದುಕು ನಡೆಸಿದರೂ, ಅವರ ಚಿಂತನೆ ಕೊಡಗಿನ ಗಡಿ ದಾಟಿ ಬೇರೆಲ್ಲೋ ವಿಹರಿಸುತಿತ್ತು ಎನ್ನುವುದಕ್ಕೆ ಅವರ ‘ಜ್ಞಾನ ಯಾತ್ರಿಕ’ ಎಂಬ ಕಾದಂಬರಿಯೇ ನಿದರ್ಶನ.  ತಮ­ಗಿಂತ ವಿಷಯ ತಿಳಿದ ಚರಿತ್ರಕಾರರು ಚೀನಾದ ಪ್ರವಾಸಿ, ಬೌದ್ಧ ಸಂಶೋಧಕ ಹೂಯಾನ್ ­ತ್ಸಾಂಗ್ ಬಗ್ಗೆ ಬರೆಯುತ್ತಾರೇನೋ ಎಂದುಕೊಂಡು ಈ ಕಾದಂಬರಿಯನ್ನು ಸ್ವಲ್ಪ ಬರೆದು ಬದಿಗಿರಿಸಿ­ಬಿಟ್ಟರಂತೆ. ಸುಮಾರು ವರ್ಷ­ಗಳಾದ ಮೇಲೆ, ಈ ವಿಷಯದ ಬಗ್ಗೆ ಯಾರೂ ಬರೆಯದಿದ್ದ ಮೇಲೆ ಕಾದಂಬರಿ ಬರೆದು ಮುಗಿಸಿದುದಾಗಿ ಮುನ್ನುಡಿಯಲ್ಲಿ ಹೇಳಿಕೊಂಡಿ­ದ್ದಾರೆ.ಹಾಗೆಯೇ, ಹೊಯ್ಸಳ ಕಾಲದ ಜನ ಜೀವನ ಸಂಸ್ಕೃತಿ ಕುರಿತು ‘ವೈದ್ಯನ ಮಗಳು’ ಎಂಬ ಕಾದಂಬರಿ ಬರೆದಿದ್ದಾರೆ. ಅವರ ಇತರ ಕಾದಂಬರಿಗಳ ವಸ್ತುಗಳೂ ಭಿನ್ನವಾಗಿವೆ.­ಉದಾಹರಣೆಗೆ: ಬಾಂಗ್ಲಾದೇಶ ಸ್ವಾತಂತ್ರ್ಯ  ಕುರಿತು ‘ಬಂಗಾರದ ಕುಲುಮೆ’, ಭಾರತ ಸ್ವಾತಂತ್ರ್ಯ ಹೋರಾಟದ ಚಿತ್ರಣ ‘ಸಾಧನ ಕುಟೀರ’, ಕ್ವಿಟ್ ಇಂಡಿಯಾ ಚಳವಳಿ ಆಧಾರಿತ ‘ಪೆಟ್ರೀಷಿಯಾ’ ಇತ್ಯಾದಿ.

ಕೊಡಗು ಯಾವ ಸೌಕರ್ಯವೂ ಇಲ್ಲದ, ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಜಿಲ್ಲೆಯಾಗಿದ್ದಾಗ ಹಾಗೂ ಎಂತಹ ಕಾಫಿ ಬೆಳೆಗಾರರೂ ಬಡತನದಲ್ಲಿದ್ದು, ಯಾವ ಬ್ಯಾಂಕು, ಸಾಲ, ಸೌಲಭ್ಯ ಗಳು ಇಲ್ಲದಿದ್ದ ಕಾಲ­ದಲ್ಲಿ ಕೇವಲ ಒಂದು ಜನಾಂಗದ ಜೀವನವನ್ನು ಮಾತ್ರ ಚಿತ್ರಿಸದೆ, ಗಿರಿಜನರ ಜೀವನಕ್ಕೂ ಬೆಲೆ ಇದೆ, ಅವರ ಬದುಕಿನಲ್ಲೂ ಸೌಂದರ್ಯವಿದೆ  ಎಂದು ತೋರಿಸಿಕೊಟ್ಟವರು ಭಾರತೀಸುತ. ಇವು­ಗಳಲ್ಲಿ ಮೂರು ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಹಾಗೂ ಸಾಕ್ಷರ­ರಿಗಾಗಿ ಬರೆದ ಒಂದು ಪುಸ್ತಕಕ್ಕೆ ಕೇಂದ್ರ ಸರ್ಕಾರದ ಬಹುಮಾನ ದೊರಕಿದೆ.ಭಾರತೀಸುತರು ಕಾಲವಾದ ಮೇಲೆ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆ ಅವರ ಜ್ಞಾಪಕಾರ್ಥವಾಗಿ ‘ಬ್ರಹ್ಮಗಿರಿ’ ಎಂಬ ಸ್ಮರಣ ಸಂಚಿಕೆಯನ್ನು ಹೊರ ತಂದಿತ್ತು. ಅದರಲ್ಲಿ ಭಾರತೀಸುತರ ಎಲ್ಲಾ ಕಾದಂಬರಿಗಳ, ಸಣ್ಣ ಕಥೆಗಳ ವಿಶ್ಲೇಷಣೆ ಸಿಗುತ್ತದೆ. ಈ ವರ್ಷ ಭಾರತೀಸುತರ ಕೆಲವೊಂದು ಕಾದಂಬರಿಗಳು ಪ್ರಕಟಗೊಂಡಿವೆ. ಕೊಡಗಿನ ಜನ ಜೀವನವನ್ನು, ಗಿರಿಜನರ ಬದುಕಿನ ಬವಣೆಗಳನ್ನು ಚಿತ್ರಿಸಿದ ಅವರ ಕಾದಂಬರಿಗಳ ಮರು ವಿಶ್ಲೇಷಣೆ ಈಗ ಆಗಬೇಕಾಗಿರುವ ಕೆಲಸ.

ಕನ್ನಡ ಸಾಹಿತ್ಯ ಪರಿಷತ್ತು ಕೊಡಗಿನಲ್ಲಿ ಇಂತಹ ಕಾರ್ಯಕ್ರಮ­ಗಳನ್ನು ಹಮ್ಮಿಕೊಂಡರೆ ಕೊಡಗಿನ ಕನ್ನಡಿಗರಿಗೆ ತಮ್ಮ ಜಿಲ್ಲೆಯ ಬಗ್ಗೆ ಹೆಮ್ಮೆ ಮೂಡಲು, ಕನ್ನಡದ ಬಗ್ಗೆ ಆಸಕ್ತಿ ಮೂಡಲು ಸಹಕಾರಿ­ಯಾಗುತ್ತದೆ.

-ಪುಷ್ಪ ಸುರೇಂದ್ರ, ಮೈಸೂರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.