ಭಾರತ ಇಂದು ಸೋಲುವುದಿಲ್ಲ

7

ಭಾರತ ಇಂದು ಸೋಲುವುದಿಲ್ಲ

Published:
Updated:

ಢಾಕಾ: ಭಾರತ ತಂಡ 2007 ರ ವಿಶ್ವ ಕಪ್‌ನ ಮೊದಲ ಸುತ್ತಿನಲ್ಲೇ ಬಾಂಗ್ಲಾದೇಶ ಕೈಲಿ ಅನುಭವಿಸಿದ ಸೋಲಿನ ಪುನರಾವರ್ತನೆ ಆಗುವುದಿಲ್ಲ ಎಂದು ನಾಯಕ ಮಹೇಂದ್ರಸಿಂಗ್ ದೋನಿ ಖಚಿತವಾಗಿ ಹೇಳಿದರು.ಶುಕ್ರವಾರ ಶೇರ್-ಎ-ಬಾಂಗ್ಲಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಾಂಗ್ಲಾದೇಶ ತಂಡ ಉತ್ತಮ ತಂಡವಾದರೂ ಈ ಸಲ ಭಾರತ ಸೋಲುವುದಿಲ್ಲ. ಗೆಲುವಿನೊಂದಿಗೇ ಟೂರ್ನಿ ಆರಂಭಿಸುವ ಛಲ ನಮ್ಮದು. ಕಳೆದ ಎರಡು ವರ್ಷಗಳಲ್ಲಿ ನಮ್ಮ ತಂಡ ಅತ್ಯುತ್ತಮವಾಗಿ ಆಡುತ್ತಿರುವುದರಿಂದಲೇ ನಾವು ವಿಶ್ವ ಕಪ್ ಗೆಲ್ಲುವ ಫೇವರಿಟ್ ಆಗಿದ್ದೇವೆ. ಆದರೆ ನಾವು ಯಾರು ಏನು ನಿರೀಕ್ಷಿಸುತ್ತಿದ್ದಾರೆ ಎಂಬ ಬಗ್ಗೆ ಯೋಚಿಸದೇ ಈ ವಿಶ್ವ ಕಪ್‌ನಲ್ಲಿ ಸಕಾರಾತ್ಮಕ ಮನೋಭಾವದಿಂದ ಉತ್ತಮ ಕ್ರಿಕೆಟ್ ಆಡುವ ಗುರಿ ಹೊಂದಿದ್ದೇವೆ’ ಎಂದು ಹೇಳಿದರು.ದೋನಿ ಅವರಲ್ಲಿದ್ದ ಈ ವಿಶ್ವಾಸ ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರಲ್ಲಿ ಕಂಡುಬರಲಿಲ್ಲ. ಬೆಳಿಗ್ಗೆ ಅಭ್ಯಾಸ ಮುಗಿಸಿ ಪತ್ರಿಕಾ ಗೋಷ್ಠಿಗೆ ಬಂದ ಅವರು, ‘ಭಾರತ ವೊಂದೇ ನಮ್ಮ ಎದುರಾಳಿಯಲ್ಲ. ಲೀಗ್‌ನಲ್ಲಿ ಆರು ಪಂದ್ಯಗಳನ್ನಾಡಬೇಕು. ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುವುದೇ ನಮ್ಮ ಮೊದಲ ಗುರಿ. ನಾಲ್ಕು ವರ್ಷಗಳ ಹಿಂದೆ ನಾವು ಭಾರತ ವಿರುದ್ಧ ಗೆದ್ದೆವಾದರೂ ಅದು ದೊಡ್ಡ ತಂಡ.  ನಾವು ನಮ್ಮ ಆಟ ಆಡುತ್ತೇವೆ’ ಎಂದು ಹೇಳಿದರು.2007ರಲ್ಲಿ ನೀಡಿದ ಅಚ್ಚರಿ ಪ್ರದರ್ಶನದ ಪುನರಾವರ್ತನೆ ನಿರೀಕ್ಷೆಯಲ್ಲಿ ಎಲ್ಲರೂ ಇದ್ದಾರೆ. ಹಾಗೇ, ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಭರವಸೆ ನಮ್ಮಲ್ಲಿದೆ. ನಮ್ಮ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ ಎಂದು ಅವರು ನುಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry