ಭಾರತ ಕೋರಿದರೆ ಪರಿಶೀಲನೆ

ಗುರುವಾರ , ಜೂಲೈ 18, 2019
27 °C

ಭಾರತ ಕೋರಿದರೆ ಪರಿಶೀಲನೆ

Published:
Updated:

ವಾಷಿಂಗ್ಟನ್ (ಪಿಟಿಐ):  ಮುಂಬೈ ದಾಳಿ ಸಂಚುಕೋರ ಡೇವಿಡ್ ಹೆಡ್ಲಿಯನ್ನು ಇನ್ನಷ್ಟು ತನಿಖೆಗೊಳಪಡಿಸಲು ಭಾರತ ಕೋರಿದರೆ ಆ ಬಗ್ಗೆ ಪರಿಶೀಲಿಸಲು ತಾನು ಸಿದ್ಧ ಎಂದು ಅಮೆರಿಕ ಸ್ಪಷ್ಟಪಡಿಸಿದೆ.`ಮುಂಬೈ ದಾಳಿಯ ಮತ್ತೊಬ್ಬ ಆರೋಪಿ ತಹಾವುರ್ ರಾಣಾ ವಿಚಾರಣೆಯಲ್ಲಿ ಹೆಡ್ಲಿ ಕೂಡ ಸಾಕ್ಷಿಯಾಗಿದ್ದ. ಈಗ ಆ ವಿಚಾರಣೆ ಮುಗಿದಿದೆ.ಹೀಗಾಗಿ, ಭಾರತದ ಭದ್ರತಾ ಸಂಸ್ಥೆಗಳು ಹೆಡ್ಲಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಲು ಈಗ ಅವಕಾಶ ಕೋರಿದರೆ ಅದನ್ನು ಪರಿಶೀಲಿಸಲು ಯಾವ ತೊಡಕೂ ಇಲ್ಲ~ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮಾರ್ಕ್ ಟೋನರ್ ಪ್ರತಿದಿನದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.ಷಿಕಾಗೊ ನ್ಯಾಯಾಲಯದಲ್ಲಿ ನಡೆದ  ರಾಣಾ ವಿಚಾರಣೆಯು ಉಗ್ರರಿಗೆ ನೆರವು ನೀಡುವವರನ್ನು ಕಟಕಟೆಗೆ ತರದೇ ಬಿಡುವುದಿಲ್ಲ ಎಂಬ ಸಂದೇಶವನ್ನು ಎಲ್ಲೆಡೆಗೆ ಸಾರಿದೆ. ರಾಣಾನಂತೆ ವಿದೇಶಗಳ ಮೇಲೆ  ದಾಳಿ ಸಂಚು ರೂಪಿಸಲು ಬೆಂಬಲವಾಗಿ ನಿಲ್ಲುವವರನ್ನು ಕೂಡ ಕಾನೂನು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನು ಇದು ರವಾನಿಸಿದೆ ಎಂದು ಟೋನರ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.ಮುಂಬೈ ದಾಳಿ ಸಂಚಿನ ಆರೋಪದಲ್ಲಿ ಆತ ಖುಲಾಸೆಗೊಂಡ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಮತ್ತೆರಡು ಗಂಭೀರ ಪ್ರಕರಣಗಳಲ್ಲಿ ಆತ ಅಪರಾಧಿ ಎಂಬುದು ಸಾಬೀತಾಗಿರುವುದಕ್ಕೆ ಸಮಾಧಾನ ವ್ಯಕ್ತಪಡಿಸಿದರು.ಇದಕ್ಕೆ ಮುನ್ನ ಭಾರತದ ಅಧಿಕಾರಿಗಳು ಹೆಡ್ಲಿಯನ್ನು ಕಳೆದ ವರ್ಷ ಷಿಕಾಗೊದಲ್ಲಿ ತನಿಖೆಗೆ ಒಳಪಡಿಸಿದ್ದರು.

ರಾಣಾ ಖುಲಾಸೆ: ಕಾಡುವ ಪ್ರಶ್ನೆಗಳು

ಷಿಕಾಗೊ (ಪಿಟಿಐ):ಮುಂಬೈ ಮೇಲಿನ ಅಮಾನುಷ ದಾಳಿ ಸಂಚಿನ ಆರೋಪದಿಂದ ತಹಾವುರ್‌ನನ್ನು ಯಾವ ಆಧಾರದ ಮೇಲೆ ಖುಲಾಸೆಗೊಳಿಸಲಾಯಿತು ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಎಂದೆಂದಿಗೂ ಉತ್ತರ ಸಿಗದ ಪ್ರಶ್ನೆಗಳಾಗಿಯೇ ಉಳಿಯಲಿವೆ.ಈ 12 ನ್ಯಾಯಾಧೀಶರ ತಂಡದಲ್ಲಿ ಇದ್ದವರು ಯಾರ‌್ಯಾರು? ಈ ತಂಡದಲ್ಲಿ ಯಾವ ನ್ಯಾಯಾಧೀಶರು ಏನು ಅಭಿಪ್ರಾಯಪಟ್ಟಿದ್ದರು? ಈ `ಒಡಕು ತೀರ್ಪಿ~ನಲ್ಲಿ ರಾಣಾ ತಪ್ಪಿತಸ್ಥನಲ್ಲ ಎಂದ ನ್ಯಾಯಾಧೀಶರು ಯಾರ‌್ಯಾರು? ಆತ ತಪ್ಪಿತಸ್ಥ ಎಂದವರು ಯಾರ‌್ಯಾರು ಮಂದಿ?- ಇವೆಲ್ಲಕ್ಕೂ ಉತ್ತರ ಸಿಗುವ ಸಾಧ್ಯತೆಯೇ ಇಲ್ಲ.ಹೀಗಾಗಿ ಈ ಬಗ್ಗೆ ಇನ್ನು ಏನಿದ್ದರೂ ಮಾಧ್ಯಮಗಳು ಊಹೆ, ವಿಶ್ಲೇಷಣೆ ಗಳನ್ನು ಮಾಡಬಹುದು. ಆದರೆ ಅದು ಖಚಿತಗೊಳ್ಳುವ ಸಂಭವ ಇಲ್ಲ. ಈ ನ್ಯಾಯಾಧೀಶರ ತಂಡದಲ್ಲಿದ್ದವರು ಎಂದೆಂದಿಗೂ ತಮ್ಮ ಗುರುತು ಬಹಿರಂಗ ಮಾಡಿಕೊಳ್ಳದಿರಲು ನಿರ್ಧರಿಸಿದ್ದೇ ಇದಕ್ಕೆ ಕಾರಣ.ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಲಿನೆನ್ ವೆಬರ್ ಅವರು ಯಾವ ಆಧಾರದಲ್ಲಿ ತೀರ್ಪು ನೀಡಲಾಯಿತು ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸಲು ನ್ಯಾಯಾಧೀಶರ ತಂಡಕ್ಕೆ ಅವಕಾಶ ನೀಡಿದ್ದರು. ಮಾಧ್ಯಮದವರೊಂದಿಗೆ ಕೂಡ ಮುಕ್ತವಾಗಿ ಮಾತನಾಡಲು ಅನುಮತಿ ಪ್ರಕಟಿಸಿದ್ದರು.

ಆದರೂ ಈ ತಂಡದವರು ತಮ್ಮ ಗುರುತನ್ನು ಎಂದೆಂದಿಗೂ ಬಹಿರಂಗ ಮಾಡಿಕೊಳ್ಳದೇ ಇರಲು ನಿರ್ಧರಿಸಿದರು.ವಿವಿಧ ಸಾಂಸ್ಕೃತಿಕ ಹಿನ್ನೆಲೆಯ ಮಹಿಳಾ ಹಾಗೂ ಪುರುಷ ನ್ಯಾಯಾಧೀಶರುಗಳಿಬ್ಬರೂ  ಈ ತಂಡದಲ್ಲಿ ಇದ್ದರು. ಹಲವು ಸುತ್ತುಗಳ ಕಠಿಣ ಪರೀಕ್ಷೆಗಳ ನಂತರ ಈ ತಂಡವನ್ನು ಅಮೆರಿಕ ಸರ್ಕಾರ ರಚಿಸಿತ್ತು.

ರಾಣಾ ಅಂತಿಮ ವಿಚಾರಣೆಯ ನಂತರ ನಗರದ ಹೃದಯಭಾಗದಲ್ಲಿರುವ ಫೆಡರಲ್ ಕೋರ್ಟ್‌ನ 19ನೇ ಮಹಡಿಯ ಮುಚ್ಚಿದ ಕೊಠಡಿಯಲ್ಲಿ ಎರಡು ದಿನಗಳ ಕಾಲ ಇವರೆಲ್ಲಾ ಸುದೀರ್ಘವಾಗಿ ಚರ್ಚಿಸಿದ್ದರು. ಆ ಸಂದರ್ಭದಲ್ಲಿ ಯಾರೊಬ್ಬರಿಗೂ ಕೊಠಡಿಯೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿರಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry