ಮಂಗಳವಾರ, ಡಿಸೆಂಬರ್ 10, 2019
26 °C

`ಭಾರತ-ಚೀನಾ ಗಡಿ ವಿವಾದ ದುಸ್ತರವೇನಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಭಾರತ-ಚೀನಾ ಗಡಿ ವಿವಾದ ದುಸ್ತರವೇನಲ್ಲ'

ನವದೆಹಲಿ (ಪಿಟಿಐ): ಭಾರತ ಹಾಗೂ ಚೀನಾ ನಡುವಣ ಗಡಿ ವಿವಾದ `ದುಸ್ತರ ಸಮಸ್ಯೆಯಲ್ಲ' ಎಂದು ಸೋಮವಾರ ಅಭಿಪ್ರಾಯ ಪಟ್ಟಿರುವ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್,  ಅಂತಹ `ಉಪದ್ರವ್ಯಗಳನ್ನು' ತಮ್ಮ ಸಂಬಂಧದಿಂದ `ಕಿತ್ತೊಗೆಯಲು' ಉಭಯ ರಾಷ್ಟ್ರಗಳು ಬದ್ಧವಾಗಿವೆ ಎಂದಿದ್ದಾರೆ.

`ಉಭಯ ರಾಷ್ಟ್ರಗಳ ನಡುವೆ ಅಸ್ಪಷ್ಟ ಗಡಿಗಳು ಇರುವುದು ನಿಜ. ಅದರಿಂದ ಗ್ರಹಿಕೆಯಲ್ಲಿ ಆಗುತ್ತಿರುವ  ವ್ಯತ್ಯಾಸಗಳು ದುಸ್ತರ ಸಮಸ್ಯೆಗಳಾಗಿ ಗೋಚರಿಸುತ್ತಿವೆ. ಆದರೆ ಇದು ದುಸ್ತರ ಸಮಸ್ಯೆಯಲ್ಲ ಎಂಬುದು ನಮ್ಮ  ಹೃದಯಗಳಿಗೆ ತಿಳಿದಿದೆ. ಜೊತೆಗೆ ನಮ್ಮ ಸಂಬಂಧಗಳ ನಡುವಣ ಇಂತಹ ಉಪದ್ರವ್ಯಗಳನ್ನು ತೊಲಗಿಸಲು ಉಭಯ ರಾಷ್ಟ್ರಗಳು ಬದ್ಧವಾಗಿವೆ' ಎಂದು ಕಾರ್ಯಕ್ರಮವೊಂದರಲ್ಲಿ ಖುರ್ಷಿದ್ ನುಡಿದಿದ್ದಾರೆ.

ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಚೀನಾ ಸೇನೆ ನಡೆಸುತ್ತಿರುವ ಅತಿಕ್ರಮಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸರ್ಕಾರ ಈಗಾಗಲೇ ಸಂಸತ್ತಿನ ಒಳಗೆ ಹಾಗೂ ಹೊರಗೆ ತನ್ನ ನಿಲುವಿನ ಬಗ್ಗೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚೀನಾದ ವಾರ್ತಾ ಸಚಿವ ಕೇಯ್ ಮಿಂಗ್ಜಾವೊ ಮಾತನಾಡಿ, `ತಮ್ಮ ನಡುವಣ ಸಕಾರಾತ್ಮಕ ಸಂಗತಿಗಳ ಬಗ್ಗೆ ಉಭಯ ರಾಷ್ಟ್ರಗಳು ಹೆಚ್ಚಾಗಿ ಗಮನಹರಿಸಬೇಕು' ಎಂದರು.

ಭಾರತ -ಚೀನಾ ಮಾಧ್ಯಮ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಖುರ್ಷಿದ್, `21ನೇ ಶತಮಾನ ಏಷ್ಯಾದ ಶತಮಾನ ಎಂದೇ ಹೇಳಲಾಗುತ್ತಿದೆ. ಆದರೆ ಜಾಗತಿಕ ಸಮಸ್ಯೆಗಳಿಗೆ ಭಾರತ ಹಾಗೂ ಚೀನಾ ಸಮಾನ ಉತ್ತರ ಕಂಡುಕೊಳ್ಳುವಲ್ಲಿ ವಿಫಲವಾದಲ್ಲಿ ಆ ಕನಸು ಅಪೂರ್ಣ ಎಂಬುದು ನಮ್ಮ ಬಲವಾದ ನಂಬಿಕೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ

ಪ್ರತಿಕ್ರಿಯಿಸಿ (+)