ಭಾರತ- ಜಪಾನ್ ಪಂದ್ಯ ಡ್ರಾ

ಬುಧವಾರ, ಮೇ 22, 2019
24 °C

ಭಾರತ- ಜಪಾನ್ ಪಂದ್ಯ ಡ್ರಾ

Published:
Updated:

ಓರ್ಡೊಸ್, ಚೀನಾ (ಪಿಟಿಐ): ಪಂದ್ಯ ಕೊನೆಗೊಳ್ಳಲು ಒಂದು ನಿಮಿಷವಿದ್ದಾಗ ಎದುರಾಳಿ ತಂಡಕ್ಕೆ ಗೋಲು ಗಳಿಸಲು ಅವಕಾಶ ನೀಡಿದ ಭಾರತ ಇಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಪಂದ್ಯದಲ್ಲಿ ಪೂರ್ಣ ಪಾಯಿಂಟ್ ಗಿಟ್ಟಿಸುವ ಅವಕಾಶ ಕಳೆದುಕೊಂಡಿತು.ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಮತ್ತು ಜಪಾನ್ 1-1 ಗೋಲಿನ ಡ್ರಾ ಸಾಧಿಸಿ ಪಾಯಿಂಟ್ ಹಂಚಿಕೊಂಡವು. ಭಾರತ ತನ್ನ ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 5-0 ಗೋಲುಗಳ ಭರ್ಜರಿ ಗೆಲುವು ಪಡೆದಿತ್ತು. ಆದರೆ ಎರಡನೇ ಪಂದ್ಯದಲ್ಲಿ ಜಯ ಸಾಧಿಸುವ ಉತ್ತಮ ಅವಕಾಶ ಹಾಳುಮಾಡಿಕೊಂಡಿತು.ಗುರ‌್ವಿಂದರ್ ಸಿಂಗ್ ಚಾಂಡಿ 22ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮೇಲುಗೈ ತಂದಿತ್ತರು. ಇದೇ ಮುನ್ನಡೆಯನ್ನು ಕೊನೆಯವರೆಗೂ ಕಾಪಾಡಿಕೊಂಡ ತಂಡ ಗೆಲುವಿನ ಕನಸು ಕಂಡಿತ್ತು. ಆದರೆ 69ನೇ ನಿಮಿಷದಲ್ಲಿ ನವೊಟೊ ಶಿಯೊಕಾವ ಜಪಾನ್‌ಗೆ ಸಮಬಲದ ಗೋಲು ತಂದಿತ್ತು ಭಾರತದ ಗೆಲುವಿನ ಕನಸನ್ನು ಭಗ್ನಗೊಳಿಸಿದರು.ಇದೀಗ ಭಾರತ ಎರಡು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿದೆ. ಮೊದಲ ಪಂದ್ಯದಲ್ಲಿ 2-3 ರಲ್ಲಿ ದಕ್ಷಿಣ ಕೊರಿಯ ಕೈಯಲ್ಲಿ ಸೋಲು ಅನುಭವಿಸಿದ್ದ ಜಪಾನ್ ಒಂದು ಪಾಯಿಂಟ್ ಕಲೆಹಾಕಿದೆ. ರಾಜ್ಪಾಲ್ ಸಿಂಗ್ ನೇತೃತ್ವದ ತಂಡ ಮುಂದಿನ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಕೊರಿಯದ ಸವಾಲನ್ನು ಎದುರಿಸಲಿದೆ.ಜಪಾನ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಅಂತರದ ಗೆಲುವು ಪಡೆಯುವ ಅವಕಾಶವಿತ್ತು. ಆದರೆ ಮುನ್ನಡೆ ಆಟಗಾರರಲ್ಲಿನ ಹೊಂದಾಣಿಕೆಯ ಕೊರತೆ ಮತ್ತು ಫಿನಿಶಿಂಗ್‌ನಲ್ಲಿ ಕಂಡುಬಂದ ಲೋಪಗಳು ಮುಳುವಾಗಿ ಪರಿಣಮಿಸಿದವು.ಮೊದಲ 15 ನಿಮಿಷಗಳ ಕಾಲ ಚೆಂಡು ಮೈದಾನದ ಮಧ್ಯಭಾಗದಲ್ಲೇ ಅತ್ತಿತ್ತ ಓಡಾಟ ನಡೆಸಿತು. 16ನೇ ನಿಮಿಷದಲ್ಲಿ ಗುರ‌್ವಿಂದರ್ ಗೋಲು ಗಳಿಸುವ ಅವಕಾಶ ಕಳೆದುಕೊಂಡರೂ, ಆರು ನಿಮಿಷಗಳ ಬಳಿಕ ಯಶ ಸಾಧಿಸಿದರು. ರೋಶನ್ ಮಿಂಜ್ ಹೊಡೆತ ಚೆಂಡನ್ನು ಜಪಾನ್ ಗೋಲ್‌ಕೀಪರ್ ಕತ್ಸುಯ ತಕಾಸೆ ತಡೆದರು. ಆದರೆ ರಿಬೌಂಡ್‌ನಲ್ಲಿ ದೊರೆತ ಚೆಂಡನ್ನು ಗುರ‌್ವಿಂದರ್ ಗುರಿ ಸೇರಿಸಿದರು.ವಿರಾಮಕ್ಕೆ ಮುನ್ನ ಭಾರತಕ್ಕೆ ಎರಡು ಪೆನಾಲ್ಟಿ ಅವಕಾಶಗಳು ಲಭಿಸಿದರೂ ಅದರಲ್ಲಿ ಗೋಲು ಗಳಿಸಲು ವಿಫಲವಾಯಿತು. ಎರಡನೇ ಅವಧಿಯಲ್ಲಿ ಜಪಾನ್ ಆಟಗಾರರು ಚೇತರಿಕೆಯ ಪ್ರದರ್ಶನ ನೀಡಿದರು. ವಿರಾಮದ ಬಳಿಕದ 20 ನಿಮಿಷಗಳ ಆಟದ ನಂತರ ಭಾರತ ರಕ್ಷಣೆಗೆ ಹೆಚ್ಚು ಒತ್ತು ನೀಡಿತು.ಇದರಿಂದ ಜಪಾನ್ ಆಟಗಾರರು ಮೇಲಿಂದ ಮೇಲೆ ಆಕ್ರಮಣ ನಡೆಸಿದರು. ಮಾತ್ರವಲ್ಲ ಪಂದ್ಯ ಕೊನೆಗೊಳ್ಳಲು ಒಂದು ನಿಮಿಷ ಇದ್ದಾಗ ಶಿಯೊಕಾವ ಸಮಬಲದ ಗೋಲು ತಂದಿತ್ತರು.ಭಾರತದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಕೆಲವೊಂದು ಅತ್ಯುತ್ತಮ ಸೇವ್‌ಗಳ ಮೂಲಕ ತಂಡದ ರಕ್ಷಣೆಗೆ ನಿಂತರು. ಮತ್ತೊಂದೆಡೆ ಜಪಾನ್ ಗೋಲಿ ತಕಾಸೆ ಕೂಡಾ ಉತ್ತಮ ಪ್ರದರ್ಶನ ನೀಡಿದರು.ವನಿತೆಯರಿಗೆ ನಿರಾಸೆ: ಭಾರತ ಮಹಿಳಾ ತಂಡದವರು ಇದೇ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಆಘಾತ ಅನುಭವಿಸಿದರು. ಭಾನುವಾರ ನಡೆದ ಪಂದ್ಯದಲ್ಲಿ ಭಾರತ 1-4 ರಲ್ಲಿ ಕೊರಿಯಾ ಕೈಯಲ್ಲಿ ಪರಾಭವಗೊಂಡಿತು.ಜೊಂಗ್ ಯೂನ್ ಕಿಮ್ (19ನೇ ನಿಮಿಷ), ಮಿ ಹ್ಯೂನ್ ಪಾರ್ಕ್ (37) ಹಾಗೂ ಸಿಯೋಲ್ ಕಿ ಚೊನ್ (55 ಮತ್ತು 69) ಗೋಲು ಗಳಿಸಿ ಕೊರಿಯಾ ತಂಡದ ಗೆಲುವಿಗೆ ಕಾರಣರಾದರು. ಭಾರತದ ಏಕೈಕ ಗೋಲನ್ನು ಜಯ್‌ದೀಪ್ ಕೌರ್ ತಂದಿತ್ತರು. ಮೊದಲ 15 ನಿಮಿಷಗಳ ಕಾಲ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಭಾರತದ ಆಟಗಾರ್ತಿಯರು ಬಳಿಕ ತಮ್ಮ ಲಯ ಕಳೆದುಕೊಂಡರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry