ಮಂಗಳವಾರ, ಏಪ್ರಿಲ್ 13, 2021
24 °C

ಭಾರತ ತಂಡಕ್ಕಾಗಿ ಲತಾ ಉಪವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮೊಹಾಲಿಯಲ್ಲಿ ಬುಧವಾರ ಪಾಕಿಸ್ತಾನ ವಿರುದ್ಧ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿ ಎಂದು ಹಾರೈಸಿ ಉಪವಾಸ ಕೈಗೊಂಡಿದ್ದ ಗಾನ ಕೋಗಿಲೆ ಲತಾ ಮಂಗೇಶ್ಕರ್, ತಮ್ಮ ನೆಚ್ಚಿನ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಶನಿವಾರದ ಫೈನಲ್‌ನಲ್ಲಿ 100ನೇ ಶತಕ ಗಳಿಸಲಿ ಮತ್ತು ಭಾರತ ವಿಶ್ವಕಪ್ ಗೆಲ್ಲಲಿ ಎಂದು ಹಾರೈಸಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.‘ಸಚಿನ್ ನನ್ನ ಮಗ ಇದ್ದ ಹಾಗೆ, ಬುಧವಾರದ 9 ಗಂಟೆಯ ಪಂದ್ಯದುದ್ದಕ್ಕೂ ನಾನು ಏನನ್ನೂ ತಿನ್ನಲಿಲ್ಲ, ಕುಡಿಯಲಿಲ್ಲ. ನಾನು ಇಡೀ ಪಂದ್ಯವನ್ನು ವೀಕ್ಷಿಸಿದೆ. ನಾನು ಉದ್ವೇಗಕ್ಕೂ ಒಳಗಾಗಿದ್ದೆ. ಭಾರತ ಆಡುವಾಗಲೆಲ್ಲಾ ನಮ್ಮ ಕುಟುಂಬದಲ್ಲಿ ಕೆಲವೊಂದು ಮೂಢನಂಬಿಕೆಗಳನ್ನು ಪಾಲಿಸುತ್ತೇವೆ. ನಾನು, ಮೀನಾ, ಉಷಾ ಯಾರೂ ಪಂದ್ಯದುದ್ದಕ್ಕೂ ಏನನ್ನೂ ತಿಂದೂ ಇಲ್ಲ, ಕುಡಿದೂ ಇಲ್ಲ. ಭಾರತ ಗೆಲ್ಲಲಿ ಎಂದು ನಾನು ನಿರಂತರ ಪ್ರಾರ್ಥಿಸುತ್ತಿದ್ದೆ. ಭಾರತ ಗೆದ್ದ ನಂತರಷ್ಟೇ ನಾವು ಊಟ ಮಾಡಿದೆವು’ ಎಂದು ಲತಾ ಅವರು ದೂರವಾಣಿ ಮೂಲಕ ವಾರ್ತಾಸಂಸ್ಥೆಗೆ ತಿಳಿಸಿದರು.‘ಫೈನಲ್‌ನಲ್ಲಿ ಭಾರತ ಗೆದ್ದು ವಿಶ್ವಕಪ್ ಗೆಲ್ಲುವುದನ್ನು ಮತ್ತು ಸಚಿನ್ ತೆಂಡೂಲ್ಕರ್ ತಮ್ಮ 100ನೇ ಶತಕ ಬಾರಿಸುವುದನ್ನು ನೋಡಲು ನಾನು ಕಾತರದಿಂದಿದ್ದೇನೆ’ ಎಂದು ಹೇಳಿರುವ ಲತಾ, 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಲಾರ್ಡ್ಸ್ ಮೈದಾನದಲ್ಲಿ ಖುದ್ದು ಸಾಕ್ಷಿಯಾಗಿದ್ದನ್ನು ಸ್ಮರಿಸಿದ್ದಾರೆ. ಆದರೆ ಈ ಬಾರಿ ತಾವು ಮನೆಯಲ್ಲೇ ಕುಳಿತು ಟಿವಿಯಲ್ಲಿ ಕ್ರಿಕೆಟ್ ನೋಡುವುದಾಗಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.