ಭಾರತ ತಂಡಕ್ಕೆ ಗೆಲುವಿನ ಸಂಭ್ರಮ

7

ಭಾರತ ತಂಡಕ್ಕೆ ಗೆಲುವಿನ ಸಂಭ್ರಮ

Published:
Updated:

ಅಡಿಲೇಡ್: ಗೌತಮ್ ಗಂಭೀರ್ ಹಾಕಿದ ಗಟ್ಟಿ ಬುನಾದಿಯ ಮೇಲೆ ನಾಯಕ ಮಹೇಂದ್ರ ಸಿಂಗ್ ದೋನಿ ಗೆಲುವೆಂಬ ಚೆಂದದ `ಅರಮನೆ~ ಕಟ್ಟಿದರು. ಟೆಸ್ಟ್ ಸರಣಿಯ ಸೋಲಿನಿಂದ ಕಂಗೆಟ್ಟಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಸಂಭ್ರಮಿಸುವ ಅವಕಾಶವನ್ನು ಕೊನೆಗೂ ಈ ಗೆಲುವು ತಂದುಕೊಟ್ಟಿತು.ಹೌದು; ಭಾರತದ ಈ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಅಡಿಲೇಡ್ ಓವಲ್ ಕ್ರೀಡಾಂಗಣ. ತ್ರಿಕೋನ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಎದುರು ಭಾರತಕ್ಕೆ ದಕ್ಕಿದ ಮೊದಲ ಗೆಲುವು ಇದು. ಇದು ಆಟಗಾರರ ಅತ್ಮ ವಿಶ್ವಾಸವನ್ನೂ ಹೆಚ್ಚಿಸಿತು. ಈ ಸರಣಿಯ ಮೊದಲ ಪಂದ್ಯದ ಸೋಲಿಗೂ ಪ್ರವಾಸಿ ತಂಡ ತಿರುಗೇಟು ನೀಡಿತು.ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅತಿಥೇಯರು 50 ಓವರ್‌ಗಳಲ್ಲಿ 269 ರನ್ ಕಲೆ ಹಾಕಿದರು. ಈ ಮೊತ್ತ ಪೇರಿಸಲು ಕಳೆದುಕೊಂಡಿದ್ದು ಎಂಟು ವಿಕೆಟ್. ಈ ಮೊತ್ತ `ಮಹಿ~ ಪಡೆಗೆ ಸವಾಲೆನಿಸಿದದ್ದು ನಿಜ. 270 ರನ್‌ಗಳ ಗುರಿ ಮುಟ್ಟಲು ಭಾರತ 49.4 ಓವರ್‌ಗಳನ್ನು ತೆಗೆದುಕೊಂಡಿತು. ಆರು ವಿಕೆಟ್ ಕಳೆದುಕೊಂಡಿತು.ಸವಾಲಿನ ಗುರಿ ಇದ್ದರೂ, ಇಷ್ಟವಾಗುವಂತಹ ಆಟವಾಡಿದ ಎಡಗೈ ಬ್ಯಾಟ್ಸ್‌ಮನ್ ಗಂಭೀರ್ (92, 111ಎಸೆತ, 7 ಬೌಂಡರಿ) ಈ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಇದಕ್ಕಾಗಿ `ಪಂದ್ಯ ಶ್ರೇಷ್ಠ~ ಗೌರವ ಸಹ ಪಡೆದರು. ಇದಕ್ಕೆ ಉತ್ತಮ ಸಾಥ್ ನೀಡಿದ ದೋನಿ (ಔಟಾಗದೇ 44, 58ಎಸೆತ, 1ಸಿಕ್ಸರ್) ಕೊನೆಯ ಓವರ್‌ನಲ್ಲಿ ಅಮೋಘ ಸಿಕ್ಸರ್ ಸಿಡಿಸಿ ಭಾರತದ ಗೆಲುವನ್ನು ಸುಲಭಗೊಳಿಸಿದರು.ನಾಯಕನ ಜವಾಬ್ದಾರಿಯುತ ಆಟವಾಡಿದ ದೋನಿ ಕೊನೆಯ ಓವರ್‌ನಲ್ಲಿ ಆಸೀಸ್ ವೇಗಿ ಕ್ಲಿಂಟ್ ಮೆಕೇ ಅವರ ಬೆವರಿಳಿಸಿದರು. ಅಂತಿಮ ಓವರ್‌ನಲ್ಲಿ ಭಾರತದ ಗೆಲುವಿಗೆ 13 ರನ್‌ಗಳು ಬೇಕಾಗಿದ್ದವು. ದೋನಿ ಸಾಹಸದಿಂದ ಭಾರತ ನಾಲ್ಕೇ ಎಸೆತಗಳಲ್ಲಿ ಈ ರನ್‌ಗಳನ್ನು ಕಲೆಹಾಕಿತು. ಈ ಓವರ್‌ನ ಮೂರನೇ ಎಸೆತವನ್ನು ಅವರು ಸಿಕ್ಸರ್‌ಗೆ ಅಟ್ಟಿದರಲ್ಲದೆ, ಆಸೀಸ್ ಗೆಲುವಿನ ಕನಸನ್ನು ಪುಡಿಗಟ್ಟಿದರು.ಸರದಿ ಪ್ರಕಾರ ವಿಶ್ರಾಂತಿ ಎನ್ನುವ ತತ್ವದ ಮೊರೆ ಹೋಗಿರುವ ದೋನಿ ಮೊದಲ ಪ್ರಯತ್ನವಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ವಿಶ್ರಾಂತಿ ನೀಡಿದರು. ಗಂಭೀರ್ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು. ಆದರೆ ವೀರೇಂದ್ರ ಸೆಹ್ವಾಗ್ (20, 21ಎಸೆತ, 3ಬೌಂ) ಹತ್ತನೇ ಓವರ್‌ನಲ್ಲಿ ಕ್ಲಿಂಟ್ ಮೆಕೇಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ (18, 28ಎಸೆತ, 1ಬೌಂ) ಬೇಗನೇ ಔಟ್ ಆದರು.ಇನ್ನೊಂದೆಡೆ ಸೊಗಸಾಗಿ ಆಟವಾಡುತ್ತಿದ್ದ ದೆಹಲಿಯ ಬ್ಯಾಟ್ಸ್‌ಮನ್ ಮೆಲ್ಲಗೆ ತಂಡದ ಮೊತ್ತವನ್ನು ಹೆಚ್ಚಿಸುವ ಕೆಲಸ ಮಾಡಿದರು. ಶತಕದ ಅಂಚಿನಲ್ಲಿದಾಗ ಗಂಭೀರ್ ಅವರನ್ನು ಮೆಕೇ ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಬಲಗೈ ವೇಗಿ ಮೆಕೇ (53ಕ್ಕೆ 3) ಭಾರತದ ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದರು. ಕ್ಸೇವಿಯರ್ ಡೊಹರ್ಟಿ (51ಕ್ಕೆ2) ಇದಕ್ಕೆ ಸಾಥ್ ನೀಡಿದರು.ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಫಾರೆಸ್ಟ್: ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪೀಟರ್ ಫಾರೆಸ್ಟ್ ಚೊಚ್ಚಲ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದರು. ಆಸೀಸ್ ಆರಂಭದಲ್ಲಿ ಮಾಜಿ ನಾಯಕ ರಿಕಿ ಪಾಂಟಿಂಗ್ (6) ಅವರ ವಿಕೆಟ್ ಕಳೆದುಕೊಂಡಿತು. ಡೇವಿಡ್ ವಾರ್ನರ್ (18) ರನ್‌ಔಟ್ ಬಲೆಗೆ ಬಿದ್ದರು. ನಾಯಕ ಮೈಕಲ್ ಕ್ಲಾರ್ಕ್ ( 38) ಅವರನ್ನು ಉಮೇಶ್ ಯಾದವ್ ಬೌಲ್ಡ್ ಮಾಡಿದರು. ಆಗ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗಿದ್ದು ಫಾರೆಸ್ಟ್. 26 ವರ್ಷದ ಈ ಬಲಗೈ ಬ್ಯಾಟ್ಸ್‌ಮನ್‌ಗೆ ಜೊತೆಯಾಗಿದ್ದು ಡೇವಿಡ್ ಹಸ್ಸಿ. 106 ಎಸೆತಗಳಲ್ಲಿ 98 ರನ್‌ಗಳನ್ನು ನಾಲ್ಕನೇ ವಿಕೆಟ್‌ಗೆ ಈ ಜೋಡಿ ಕಲೆ ಹಾಕಿತು. ಇದು ಆಸೀಸ್‌ಗೆ ಭಾರತದ   ಬೌಲರ್‌ಗಳು ನೀಡಿದ್ದ `ಶಾಕ್~ನಿಂದ ಚೇತರಿಸಿಕೊಳ್ಳಲು ನೆರವಾಯಿತು. ಹಸ್ಸಿ (72, 76ಎಸೆತ, 5ಬೌಂ) ಒಂಬತ್ತನೇ ಅರ್ಧಶತಕವನ್ನು ಇಲ್ಲಿ ದಾಖಲಿಸಿದರು. ಇದರಿಂದ ಆಸೀಸ್ ಮೊತ್ತ 250ರ ಗಡಿ ದಾಟಿತು.ಆರಂಭದಲ್ಲಿ ಕರ್ನಾಟಕದ ವೇಗಿ ಅರ್. ವಿನಯ್ ಕುಮಾರ್ (58ಕ್ಕೆ2) ಹಾಗೂ ಉಮೇಶ್ ಯಾದವ್ (49ಕ್ಕೆ2) ದಾಳಿ ಎದುರಿಸುವಲ್ಲಿ ಆಸೀಸ್ ತಿಣುಕಾಡಿತು. ನಂತರ ನಿಧಾನವಾಗಿ ಚೇತರಿಸಿಕೊಂಡಿತು. 36 ಎಸೆತಗಳಲ್ಲಿ 2 ಬೌಂಡರಿ ಒಳಗೊಂಡಂತೆ 39 ರನ್ ಕಲೆ ಹಾಕಿದ ಡೇನಿಯಲ್ ಕ್ರಿಸ್ಟಿಯನ್ ಸಹ ಇದಕ್ಕೆ ನೆರವಾದರು.

ಸ್ಕೋರ್ ವಿವರ :

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 269

ಡೇವಿಡ್ ವಾರ್ನರ್ ರನ್‌ಔಟ್ (ರೋಹಿತ್ ಶರ್ಮ / ವಿನಯ್ ಕುಮಾರ್ )  18

ರಿಕಿ ಪಾಂಟಿಂಗ್ ಸಿ ಕೊಹ್ಲಿ ಬಿ ಆರ್. ವಿನಯ್ ಕುಮಾರ್  06

ಮೈಕಲ್ ಕ್ಲಾರ್ಕ್ ಬಿ ಉಮೇಶ್ ಯಾದವ್  38

ಪೀಟರ್ ಫಾರೆಸ್ಟ್ ಸಿ ವಿನಯ್ ಬಿ ಉಮೇಶ್ ಯಾದವ್  66

ಡೇವಿಡ್ ಹಸ್ಸಿ ಸಿ ವೀರೇಂದ್ರ ಸೆಹ್ವಾಗ್ ಬಿ ಜಹೀರ್ ಖಾನ್  72

ಡೇನಿಯಲ್ ಕ್ರಿಸ್ಟಿಯನ್ ರನ್ ಔಟ್ (ಜಡೇಜಾ/ದೋನಿ)  39

ಮ್ಯಾಥ್ಯೂ ವೇಡ್ ಬಿ ಆರ್. ವಿನಯ್ ಕುಮಾರ್  16

ರ‌್ಯಾನ್ ಹ್ಯಾರಿಸ್ ಔಟಾಗದೇ  02

ಕ್ಲಿಂಟ್ ಮೆಕೇ ರನ್ ಔಟ್ (ದೋನಿ/ವಿನಯ್ ಕುಮಾರ್)  03

ಇತರೆ: (ಲೆಗ್ ಬೈ-4, ವೈಡ್-4, ನೋ ಬಾಲ್-1) 09

ವಿಕೆಟ್ ಪತನ: 1-14 (ಪಾಟಿಂಗ್ 3.1), 2-53 (ವಾರ್ನರ್ 9.3), 3-81(ಕ್ಲಾರ್ಕ್ 17.5), 4-178 (ಫಾರೆಸ್ಟ್ 35.3), 5-235 (ಹಸ್ಸಿ 44.2), 6-254 (ಕ್ರಿಸ್ಟಿಯನ್ 47.4), 7-265 (ವೇಡ್ 49.2), 8-269 (ಮೆಕೇ 49.6).

ಬೌಲಿಂಗ್ ವಿವರ: ಜಹೀರ್ ಖಾನ್ 10-0-46-1, ಆರ್. ವಿನಯ್ ಕುಮಾರ್ 10-1-58-2, ರವೀಂದ್ರ ಜಡೇಜಾ 10-0-50-0, ಉಮೇಶ್ ಯಾದವ್ 10-1-49-2, ರವಿಚಂದ್ರನ್ ಅಶ್ವಿನ್ 8-0-47-0, ರೋಹಿತ್ ಶರ್ಮ 2-0-15-0.

ಭಾರತ: 49.4 ಓವರ್‌ಗಳಲ್ಲಿ 6 ವಿಕೆಟ್‌ಗೆ 270

ಗೌತಮ್ ಗಂಭೀರ್ ಎಲ್‌ಬಿಡಬ್ಲ್ಯು ಬಿ ಕ್ಲಿಂಟ್ ಮೆಕೇ   92

ವೀರೇಂದ್ರ ಸೆಹ್ವಾಗ್ ಸಿ ಡೇವಿಡ್ ಹಸ್ಸಿ ಬಿ ಕ್ಲಿಂಟ್ ಮೆಕೇ  20

ವಿರಾಟ್ ಕೊಹ್ಲಿ ಸಿ ಪೀಟರ್ ಫಾರೆಸ್ಟ್ ಬಿ ಕ್ಲಿಂಟ್ ಮೆಕೇ  18

ರೋಹಿತ್ ಶರ್ಮ ಸಿ ಸ್ಟಾರ್ಕ್ ಬಿ ರ‌್ಯಾನ್ ಹ್ಯಾರಿಸ್  33

ಸುರೇಶ್ ರೈನಾ ಬಿ ಕ್ಸೇವಿಯರ್ ಡೊಹರ್ಟಿ  38

ಮಹೇಂದ್ರ ಸಿಂಗ್ ದೋನಿ ಔಟಾಗದೇ  44

ರವೀಂದ್ರ ಜಡೇಜಾ ಸಿ ಪಾಂಟಿಂಗ್ ಬಿ  ಡೊಹರ್ಟಿ  12

ರವಿಚಂದ್ರನ್ ಅಶ್ವಿನ್ ಔಟಾಗದೇ  01

ಇತರೆ: (ಲೆಗ್ ಬೈ-2, ವೈಡ್-9, ನೋ ಬಾಲ್-1)      12

ವಿಕೆಟ್ ಪತನ: 1-52 (ಸೆಹ್ವಾಗ್; 9.1), 2-90 (ಕೊಹ್ಲಿ 18.1), 3-166 (ಶರ್ಮ 32.2), 4-178 (ಗಂಭೀರ್ 34.1), 5-239 (ರೈನಾ 46.1), 6-257 (ಜಡೇಜಾ 48.4).

ಬೌಲಿಂಗ್ ವಿವರ: ರ‌್ಯಾನ್ ಹ್ಯಾರಿಸ್ 10-0-57-1, ಮಿಷೆಲ್ ಸ್ಟಾರ್ಕ್ 8-0-49-0, ಕ್ಲಿಂಟ್ ಮೆಕೇ 9.4-1-53-3, ಡೇನಿಯಲ್ ಕ್ರಿಸ್ಟಿಯನ್ 10-0-45-0, ಡೇವಿಡ್ ಹಸ್ಸಿ 3-0-13-0, ಕ್ಸೇವಿಯರ್ ಡೊಹರ್ಟಿ 9-0-51-2.

ಫಲಿತಾಂಶ: ಭಾರತಕ್ಕೆ 4 ವಿಕೆಟ್ ಗೆಲುವು

ಪಂದ್ಯ ಶ್ರೇಷ್ಠ: ಗೌತಮ್ ಗಂಭೀರ್

ಮುಂದಿನ ಪಂದ್ಯ: ಭಾರತ -ಶ್ರೀಲಂಕಾ (ಫೆ.14, ಅಡಿಲೇಡ್).

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry