ಭಾರತ ತಂಡದ ಅಭ್ಯಾಸ

7
ಕ್ರಿಕೆಟ್‌: ನಾಳೆಯಿಂದ ವಿಂಡೀಸ್ ‘ಎ’ ವಿರುದ್ಧದ ಪಂದ್ಯ

ಭಾರತ ತಂಡದ ಅಭ್ಯಾಸ

Published:
Updated:
ಭಾರತ ತಂಡದ ಅಭ್ಯಾಸ

ಶಿವಮೊಗ್ಗ:  ವೆಸ್ಟ್‌ ಇಂಡೀಸ್‌ ‘ಎ’ ತಂಡದವರು ನಗರದ ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಅಭ್ಯಾಸ ನಡೆಸುವ ಸಂದರ್ಭ ಕೆಲಕಾಲ ಮಳೆ ಅಡ್ಡಿ  ಉಂಟು ಮಾಡಿತು. ಆದರೆ, ಮಧ್ಯಾಹ್ನ ಭಾರತ ‘ಎ’ ತಂಡದವರ ಅಭ್ಯಾಸದ ವೇಳೆ ವರುಣ ಕೃಪೆದೋರಿದ.ಬುಧವಾರ ಆರಂಭವಾಗುವ ನಾಲ್ಕು ದಿನಗಳ ಅನಧಿಕೃತ ‘ಟೆಸ್ಟ್‌’ ಪಂದ್ಯ ಆಡಲು ಇವೆರಡೂ ತಂಡಗಳು ಸೋಮವಾರ ಬೇರೆ ಬೇರೆ ಅವಧಿಯಲ್ಲಿ ಅಭ್ಯಾಸ ನಡೆಸಿದವು. ಮೈಸೂರಿನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಕರ್ಕ್ ಎಡ್ವರ್ಡ್ಸ್‌ ನೇತೃತ್ವದ ವೆಸ್ಟ್‌ಇಂಡಿಸ್‌ ‘ಎ’ ತಂಡದ ಆಟಗಾರರು ಬೆಳಿಗ್ಗೆ11 ಗಂಟೆಗೆ ಜೆಎನ್‌ಎನ್‌ಸಿಇ ಕ್ರೀಡಾಂಗಣಕ್ಕೆ ಬಂದು ಸುಮಾರು ಎರಡು ಗಂಟೆ ಬೆವರಿಳಿಸಿದರು.ಮೋಡ ಮುಸುಕಿದ ವಾತಾವರಣ ನೆಲೆಸಿದ್ದ ಕಾರಣ ಆಟಗಾರರು ಹುರುಪಿನಿಂದ ತಾಲೀಮು ನಡೆಸಿದರು. ಆದರೆ, 12.30ರಿಂದ ಕೆಲ ಹೊತ್ತು ಮಳೆಯಾಯಿತು.ಮಧ್ಯಾಹ್ನ 2.30ಕ್ಕೆ ಕ್ರೀಡಾಂಗಣಕ್ಕೆ ಬಂದ ಭಾರತ ‘ಎ’ ತಂಡದ ಆಟಗಾ­ರರೂ ಅಭ್ಯಾಸಕ್ಕಾಗಿ ಸಜ್ಜುಗೊಳಿಸಿದ ಮೈದಾನಕ್ಕಿಳಿದು ಬೆವರು ಹರಿಸಿದರು. ನಾಯಕ ಚೇತೇಶ್ವರ ಪೂಜಾರ, ಅನುಭವಿ ಆಟಗಾರ ಮಹಮದ್‌ ಕೈಫ್‌ ಜತೆ ಈಶ್ವರ್‌ ಪಾಂಡೆ, ಶಮಿ ಅಹಮದ್‌, ಪರ್ವೇಜ್‌ ರಸೂಲ್‌, ಭಾರ್ಗವ ಭಟ್‌, ಧವಲ್‌ ಕುಲಕರ್ಣಿ ಪ್ರಮುಖವಾಗಿ ಗಮನ ಸೆಳೆದರು.ಆಸ್ಟ್ರೇಲಿಯ ವಿರುದ್ಧ ಸರಣಿಗೆ ಅವಕಾಶ ವಂಚಿತರಾದ ವೀರೇಂದ್ರ ಸೆಹ್ವಾಗ್‌, ಗೌತಮ್‌ ಗಂಭೀರ್‌, ಜಹೀರ್‌ ಖಾನ್‌ ಮಂಗಳವಾರ ಶಿವಮೊಗ್ಗಕ್ಕೆ ಆಗಮಿಸಿ, ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆ ಇದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.ಕಾದುಕುಳಿತ ಅಭಿಮಾನಿಗಳು: ನೆಚ್ಚಿನ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಬಂದು ಯಾವಾಗ ಅಭ್ಯಾಸ ನಡೆಸುತ್ತಾರೊ ಎಂದು ಬೆಳ್ಳಿಗಿನಿಂದಲೇ ಕಾದು ಕುಳಿತ ಕ್ರಿಕೆಟ್ ಅಭಿಮಾನಿಗಳು, ಆಟಗಾರರ ಅಭ್ಯಾಸವನ್ನು ಕಣ್ತುಂಬಿಕೊಂಡರು. ಅವರು ಅಭ್ಯಾಸ ಮುಗಿಸಿ ಹೊಟೇಲ್‌ಗೆ ತೆರಳುವವರೆಗೂ ಅಭಿಮಾನಿಗಳು ಕ್ರೀ­ಡಾಂ­ಗಣದಲ್ಲೇ ಠಿಕಾಣಿ  ಹೂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry