ಭಾರತ ತಂಡದ ಸಾಹಸದ ಮಹಿಮೆ!

7

ಭಾರತ ತಂಡದ ಸಾಹಸದ ಮಹಿಮೆ!

Published:
Updated:
ಭಾರತ ತಂಡದ ಸಾಹಸದ ಮಹಿಮೆ!

ಮಹೇಂದ್ರಸಿಂಗ್ ದೋನಿಯ ‘ಹೆಲಿಕಾಪ್ಟರ್ ಶಾಟ್’ ನೋಡಲು ತಿಂಗಳಿಡೀ ಕಾಯ್ದು ಕುಳಿತ ಅಭಿಮಾನಿಗಳಿಗೆ ಅದರ ಬದಲಿಗೆ ‘ವಿಶ್ವಕಪ್ ವಿನ್ನಿಂಗ್ ಶಾಟ್’ ನೋಡುವ ಅವಕಾಶ ಸಿಕ್ಕಿತು. ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ದೋನಿಯ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದ ಆರಂಭದಲ್ಲಿ ಅವರು ಹೊಡೆಯುತ್ತಿದ್ದ ‘ಹೆಲಿಕಾಪ್ಟರ್ ಶಾಟ್’ ಮತ್ತು ಅದರೊಂದಿಗೆ ಗಾಳಿಯಲ್ಲಿ ಹಾರಾಡಿ ಮತ್ತೆ ಭುಜದ ಮೇಲೆ ಇಳಿ ಬೀಳುತ್ತಿದ್ದ ಕೂದಲಿಗೆ ಮನಸೋತ ಬೆಡಗಿಯರಿಗೆ ಲೆಕ್ಕವಿಲ್ಲ.ಅಂದು ಅಂಗಳಕ್ಕೆ ಕಾಲಿಟ್ಟ  ಆ ನೀಳಕೇಶದ ಹುಡುಗನಿಗೂ, ವಿಶ್ವಕಪ್ ಗೆದ್ದು ತಲೆಗೂದಲು ಬೋಳಿಸಿಕೊಂಡ ಇಂದಿನ ದೋನಿಗೂ ಭೂಮಿ, ಆಕಾಶದ ವ್ಯತ್ಯಾಸವಿದೆ. ಹುಡುಗಾಟದ ಹುಡುಗ ಈಗ ಪ್ರಬುದ್ಧ ನಾಯಕ. ಟ್ವೆಂಟಿ-20 ಮತ್ತು ಫಿಫ್ಟಿ-50 ಕ್ರಿಕೆಟ್‌ಗಳಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಮತ್ತು ಟೆಸ್ಟ್‌ನಲ್ಲಿ ನಂಬರ್ ಒನ್ ಸ್ಥಾನಕ್ಕೇರಿಸಿದ ಶಾಂತಚಿತ್ತದ ಕಠಿಣ ಹೃದಯಿ.ಒಂದು ಕಾಲದಲ್ಲಿ ಬಿಹಾರದಲ್ಲಿದ್ದ ರಾಂಚಿಯ (ಈಗ ಜಾರ್ಖಂಡ್‌ನಲ್ಲಿದೆ) ಮಧ್ಯಮವರ್ಗದಲ್ಲಿ ಜನಿಸಿದ ದೋನಿ ಭಾರತ ಕಂಡ ಅತ್ಯಂತ ಯಶಸ್ವಿ ನಾಯಕ. ಪಾನ್‌ಸಿಂಗ್ ಮತ್ತು ದೇವಕಿ ದಂಪತಿಗಳ ಮಗ ಮಹಿ ಶಾಲೆಯ ದಿನಗಳಲ್ಲೇ ಬ್ಯಾಟ್ ಹಿಡಿದವರು.ವಿಕೆಟ್‌ಕೀಪಿಂಗ್‌ಗೆ ಇಳಿದದ್ದು ಆಕಸ್ಮಿಕ. ಆದರೆ ಅವರ ದೈಹಿಕ ಸಾಮರ್ಥ್ಯ ಅವರನ್ನು ವಿಕೆಟ್ ಕೀಪರ್ ಆಗಿ ರೂಪಿಸಿತು. ಮೆಕಾನ್ ಸಂಸ್ಥೆಯಲ್ಲಿ ಕಿರಿಯ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಂದೆ ಪಾನ್ ಸಿಂಗ್ ಕ್ರಿಕೆಟ್ ಪ್ರೇಮಿಯಾಗಿದ್ದವರು. ಮಹಿ ತಮ್ಮ ಸಹೋದರ ನರೇಂದ್ರ ಮತ್ತು ಸಹೋದರಿ ಜಯಂತಿ ಯೊಂದಿಗೆ ಕಳೆದ ಬಾಲ್ಯದ ದಿನಗಳನ್ನೂ ಇಂದಿಗೂ ನೆನಪಿಸಿಕೊಳ್ಳುತ್ತಾರೆ.ಚಿಕ್ಕಂದಿನಿಂದಲೂ ಆಸ್ಟ್ರೇಲಿಯದ ವಿಕೆಟ್ ಕೀಪರ್ ಗಿಲ್ ಕ್ರಿಸ್ಟ್ ಅವರ ವಿಕೆಟ್ ಕೀಪಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಬ್ಯಾಟಿಂಗ್ ಅನ್ನು ಆರಾಧಿಸುತ್ತಲೇ ಬೆಳೆದವರು. 2007ರಲ್ಲಿ ಅಹಮದಾಬಾದಿನ ಮೊಟೇರಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ (ಕೇವಲ 73 ರನ್ನುಗಳಿಗೆ ಭಾರತ ಆಲೌಟ್ ಆಗಿತ್ತು) ಸಂದರ್ಭದಲ್ಲಿ  ಮೊದಲ ಬಾರಿಗೆ ದೋನಿಯನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಕುಂಬ್ಳೆ ನಾಯಕತ್ವದ ತಂಡದಲ್ಲಿ ದೋನಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಆಗಿದ್ದರು. ನೆಟ್ಸ್‌ನಲ್ಲಿ ಅಭ್ಯಾಸ  ಮುಗಿಸಿ ಬರುವ ಹೊತ್ತಿನಲ್ಲಿ ಮಾತನಾಡುವ ಅವಕಾಶ ಸಿಕ್ಕಿತ್ತು.‘ಒಂದು ತಂಡವಾಗಿ  ಆಡಿದರೆ ಎಂತಹ ಬಲಿಷ್ಠ ಎದುರಾಳಿಯನ್ನೂ ಸೋಲಿಸಲು ಸಾಧ್ಯವಿದೆ. ಅನಿಲ ಕುಂಬ್ಳೆ ಉತ್ತಮ ನಾಯಕ ಮತ್ತು ವಿಶ್ವದರ್ಜೆಯ ಅತ್ಯುತ್ತಮ ಸ್ಪಿನ್ನರ್. ಅವರಿಂದ ಕಲಿಯಬೇಕಾದ್ದು ಸಾಕಷ್ಟಿದೆ. ಅವರ ನಾಯಕತ್ವ ಗುಣ ನನಗಿಷ್ಟ’ ಎಂದಿದ್ದರು. ಮುಂದೆ ಒಂದೇ ವರ್ಷದಲ್ಲಿ ಅವರು ಭಾರತ ಟೆಸ್ಟ್ ತಂಡದ ನಾಯಕರಾಗಿದ್ದರು.2004ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ‘ಮಹಿ’ ಕೇವಲ ಆರು ವರ್ಷಗಳಲ್ಲಿ ವಿಶ್ವಕಪ್ ವಿಜೇತ ನಾಯಕನಾಗಿದ್ದು ದಾಖಲೆಯೇ ಸರಿ. ಯಾವುದೇ ಹಂತದಲ್ಲಿಯೂ ಸ್ಥಿಮಿತ ಕಳೆದುಕೊಳ್ಳದ ಮತ್ತು ಗೆದ್ದಾಗ ಅತಿಯಾಗಿ ಸಂಭ್ರಮದ ಪರಿಪಕ್ವ ಮನಸ್ಥಿತಿ ದೋನಿಯದ್ದು. ಒಬ್ಬ ನಾಯಕನಾಗಿ, ತಂಡದ ಆಟಗಾರನಾಗಿ ಸಹ ಆಟಗಾರರ ಅವಶ್ಯಕತೆಗೆ ಸ್ಪಂದಿಸುವ ವಿಶೇಷ ಗುಣ ಅವರಲ್ಲಿದೆ. ಇದಕ್ಕೆ ಹಲವು ಉದಾಹರಣೆಗಳನ್ನು ನಾವು ನೋಡಬಹುದು.ಕಳೆದ ವರ್ಷ ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಸಾಧನೆ ಸಂದರ್ಭವನ್ನೇ ನೋಡಿ. ಇನ್ನೊಂದು ತುದಿಯಲ್ಲಿ ದೋನಿ ಇರದೇ ಹೋಗಿದ್ದರೆ ಸಚಿನ್‌ಗೆ ದ್ವಿಶತಕ ಮತ್ತು ಭಾರತಕ್ಕೆ 401 ರನ್ನುಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ.ಸಚಿನ್ 200 ರನ್ ಮುಟ್ಟಲು ಇನ್ನೂ ಕೆಲವು ರನ್ನುಗಳು ಬೇಕಾದಾಗಲೇ ಕ್ರೀಸ್‌ಗೆ ಬಂದಿದ್ದ ದೋನಿ ಸಿಕ್ಸರ್, ಬೌಂಡರಿ ಹೊಡೆಯಲು ಆರಂಭಿಸಿದ್ದರು. ಇದರಿಂದಾಗಿ ಪ್ರೇಕ್ಷಕ ವರ್ಗದಲ್ಲಿ ದೋನಿಯ ಮೇಲೆ ಸಂಶಯ ಶುರುವಾಗಿತ್ತು. ಆದರೆ, ಅದರ ನಡುವೆಯೇ ಒಂದೊಂದೇ ರನ್ ಸೇರಿಸಲು ಸಚಿನ್‌ಗೆ ಅವಕಾಶ ಕೊಟ್ಟರು. 200 ರನ್ನಿನ ಸಾಧನೆ ಮಾಡಿದ ಸಚಿನ್ ಅಜೇಯರಾಗುಳಿದರು, ತಂಡವೂ 400ರ ಗಡಿ ದಾಟಿತು.ದಕ್ಷಿಣ ಆಫ್ರಿಕದಂತಹ ಬಲಿಷ್ಠ ತಂಡಕ್ಕೆ 300-325 ರನ್ನುಗಳ ಗುರಿ ದೊಡ್ಡದಲ್ಲ ಎನ್ನುವುದು ದೋನಿಗೆ ಗೊತ್ತಿತ್ತು. ಅಂದು ಸಚಿನ್ ದ್ವಿಶತಕ ಬಾರಿಸಿಯೂ ಭಾರತ ಸೋತಿದ್ದರೆ ಅದು ಮಹತ್ವ ಪಡೆಯುತ್ತಿರಲಿಲ್ಲ. ಅದಕ್ಕಾಗಿಯೇ ದೊಡ್ಡ ಮೊತ್ತ ಪೇರಿಸಲು ಮಹಿ ಬಿರುಸಿನ ಆಟಕ್ಕೆ ಇಳಿದಿದ್ದರು. ಇದನ್ನು ಸ್ವತಃ ಸಚಿನ್ ಅವರೇ ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪಡಿಸಿದ್ದರು.ತಮ್ಮ ಜತೆಗಾರ ಬ್ಯಾಟ್ಸ್‌ಮನ್ ಅರ್ಧಶತಕ, ಶತಕ ಅಥವಾ ಮತ್ತ್ಯಾವುದೇ ದಾಖಲೆಯ ಸಮೀಪವಿದ್ದಾಗ ಅವರಿಗೆ ತಕ್ಕ ಸ್ಟ್ಯಾಂಡ್ ಕೊಡುವಲ್ಲಿ ದೋನಿ ಎಂದೂ ಹಿಂದೆ ಬಿದ್ದಿಲ್ಲ. ಇನ್ನೇನು ತಂಡ ಸೋತೆ ಬಿಟ್ಟಿತು ಎನ್ನುವಂತಹ ಭಾವನೆ ಬಂದ ಪಂದ್ಯಗಳನ್ನೆಲ್ಲ ಗೆಲುವಾಗಿ ಪರಿವರ್ತಿಸಿದ ಶ್ರೇಯ ದೋನಿಗೆ ಸಲ್ಲುತ್ತದೆ.  ಅದರಲ್ಲೂ ಅಪಾಯಕಾರಿ ಎನ್ನುವಂತಹ ಅವರ ನಿರ್ಧಾರಗಳು ಅವರಿಗೆ ಹಲವು ಬಾರಿ ಸಾಥ್ ಕೊಟ್ಟಿವೆ.2007ರ ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಎಲ್ಲ ಅನುಭವಿ ಬೌಲರ್‌ಗಳನ್ನು ಬಿಟ್ಟು ಜೋಗಿಂದರ್ ಸಿಂಗ್‌ಗೆ ಚೆಂಡು ನೀಡಿದ್ದು, ಹಲವರ ಹುಬ್ಬೇರಿಸಿತ್ತು. ಆದರೆ ಜೋಗಿಂದರ್ ಹೀರೊ ಆಗಿಬಿಟ್ಟರು. ಭಾರತ ಆ ವಿಶ್ವಕಪ್ ಗೆದ್ದು ವಿಜೃಂಭಿಸಿತ್ತು. ಮೊನ್ನೆ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ಆಸೀಸ್ ವಿರುದ್ಧ ಹೊಸ ಹುಡುಗ ಸ್ಪಿನ್ನರ್ ಅಶ್ವಿನ್ ಕೈಗೆ ಹೊಸ ಚೆಂಡು ಕೊಟ್ಟು ಮೊದಲ ಓವರ್ ಹಾಕಿಸಿದ್ದರು. ಸೆಮಿಫೈನಲ್‌ನಲ್ಲಿ ಎಲ್ಲರ ನಿರೀಕ್ಷೆ ಮೀರಿ ಆಶಿಶ್ ನೆಹ್ರಾ ಅವರನ್ನು ಆಯ್ಕೆ ಮಾಡಿದ್ದು, ವಿಶ್ವಕಪ್ ತಂಡಕ್ಕೆ ಯುವರಾಜ ಸಿಂಗ್‌ನನ್ನು ಉಳಿಸಿಕೊಂಡಿದ್ದು ಎಲ್ಲವೂ ಅವರ ನಾಯಕತ್ವಕ್ಕೆ ಸವಾಲೆನೆಸುವ ವಿಷಯಗಳು. ಆದರೆ ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿಬಿಟ್ಟರು.ಆದರೆ ವಿಶ್ವಕಪ್‌ನ ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದ ದೋನಿ, ಫೈನಲ್‌ನ ಪಂದ್ಯ ಶ್ರೇಷ್ಠರಾಗಿಬಿಟ್ಟರು. ಅವರ ಆಟದ ಮುಂದೆ ಶ್ರೀಲಂಕೆಯ ಸಂಗಕ್ಕಾರ ಪಡೆ ತಲೆಬಾಗಿತು. ಇಡೀ ಜಗತ್ತೇ ತಲೆ ದೂಗಿತು. ಇಂತಹ ಅಪರೂಪದ ಸಾಧನೆಗಳೊಂದಿಗೆ ಬೆಳೆದದ್ದೇ ದೋನಿ ಸಾಧನೆ.ನಯನ್ ಮೋಂಗಿಯಾ ನಂತರ ವಿಕೆಟ್‌ಗಳ ಹಿಂದೆ ಗ್ಲೌಸ್ ಧರಿಸುವವರಿಗಾಗಿ ತಡಕಾಡುತ್ತಿದ್ದ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗೆ ಪೈಪೋಟಿ ನಡೆಸಿ ಸ್ಥಾನ ಗಿಟ್ಟಿಸಿದ್ದ ದೋನಿಗೆ ಗಾಡ್‌ಫಾದರ್‌ಗಳು ಇರಲಿಲ್ಲ. ಆದರೆ, ಈಗ ‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರಿಂದಲೇ ಅತ್ಯುತ್ತಮ ನಾಯಕ ಎಂದು ಹೊಗಳಿಸಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ.ಮಹೇಂದ್ರಸಿಂಗ್ ದೋನಿ ಸಾಧನೆ

ಟೆಸ್ಟ್ ಕ್ರಿಕೆಟ್: ಪಂದ್ಯಗಳು-54, ರನ್ನುಗಳು -2925, ಶತಕಗಳು -4, ಅರ್ಧಶತಕಗಳು -20 ಅತ್ಯುತ್ತಮ -148,

ಏಕದಿನ ಕ್ರಿಕೆಟ್ ಪಂದ್ಯಗಳು -186, ರನ್ನುಗಳು  -6049, ಶತಕ -7, ಅರ್ಧಶತಕಗಳು -38, ಅತ್ಯುತ್ತಮ 183 ಅಜೇಯ

ಟಿ-20 ಪಂದ್ಯಗಳು -26, ರನ್ನುಗಳು 451, ಅತ್ಯುತ್ತಮ -46,

ಟಿಂ. ಇಂಡಿಯಾದ ಟೆಸ್ಟ್, ಏಕದಿನ ಮತ್ತು ಟ್ವೆಂಟಿ 20 ತಂಡಗಳ ನಾಯಕ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಕ್ಯಾಪ್ಟನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry