ಭಾನುವಾರ, ಆಗಸ್ಟ್ 1, 2021
26 °C

ಭಾರತ ತಂಡ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ತಂಡ ಬಾಂಗ್ಲಾದೇಶದಲ್ಲಿ ಗುರುವಾರ ಕೊನೆಗೊಂಡ ಚೊಚ್ಚಲ ಎಸ್‌ಎಎಫ್‌ಎಫ್ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕಿರೀಟ ಮುಡಿಗೇರಿಸಿಕೊಂಡಿತು.ಚಿತ್ತಗಾಂಗ್‌ನ ಕಾಕ್ಸ್ ಬಜಾರ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ 1-0 ಗೋಲಿನಿಂದ ನೇಪಾಳ ತಂಡವನ್ನು ಮಣಿಸಿತು. ಸಸ್ಮಿತಾ ಮಲ್ಲಿಕ್ ಅವರು 65ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತದ ಗೆಲುವಿನ ರೂವಾರಿ ಎನಿಸಿದರು.ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ ಮೊದಲ ಅವಧಿ ಗೋಲುರಹಿತವಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಸಸ್ಮಿತಾ ಭಾರತಕ್ಕೆ ಗೋಲು ತಂದಿತ್ತರಲ್ಲದೆ, ನೇಪಾಳ ತಂಡದ ಕನಸನ್ನು ನುಚ್ಚುನೂರು ಮಾಡಿದರು.ಭಾರತ ಈ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಒಟ್ಟು 40 ಗೋಲುಗಳನ್ನು ಗಳಿಸಿತು. ಅದೇ ವೇಳೆ ಎದುರಾಳಿಗಳಿಗೆ ಒಂದೂ ಗೋಲನ್ನು ಬಿಟ್ಟುಕೊಡದೆ ಚಾಂಪಿಯನ್ ಆಗಿದೆ. ಪಾಕಿಸ್ತಾನದ ವಿರುದ್ಧದ ಸೆಮಿಫೈನಲ್‌ನಲ್ಲಿ ಹ್ಯಾಟ್ರಿಲ್ ಗೋಲು ಗಳಿಸಿದ್ದ ಬಾಲಾ ದೇವಿ ಅವರು ‘ಟೂರ್ನಿಯ ಶ್ರೇಷ್ಠ ಆಟಗಾರ್ತಿ’ ಗೌರವ ತಮ್ಮದಾಗಿಸಿಕೊಂಡರು.ಈ ಹಿಂದಿನ ಪಂದ್ಯಗಳಲ್ಲಿ ಗೋಲಿನ ಮಳೆಯನ್ನೇ ಸುರಿಸಿದ್ದ ಭಾರತ ಫೈನಲ್‌ನಲ್ಲಿ ಗೆಲುವಿಗಾಗಿ ಸಾಕಷ್ಟು ಹೋರಾಟ ನಡೆಸಿತು. ಬಾಲಾ ದೇವಿ ಮತ್ತು ತಬಬಿ ದೇವಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.ಲೀಗ್ ಹಂತದಲ್ಲಿ ಭಾರತ ತಂಡ ಭೂತಾನ್ ವಿರುದ್ಧ 18-0 ಗೋಲುಗಳ ಅಂತರದಲ್ಲೂ, ಶ್ರೀಲಂಕಾ ಎದುರು 7-0 ಅಂತರದಲ್ಲೂ ಜಯ ಪಡೆದಿತ್ತು. ಸೆಮಿಫೈನಲ್‌ನಲ್ಲಿ 8-0 ರಲ್ಲಿ ಪಾಕಿಸ್ತಾನ ತಂಡವನ್ನು ಮಣಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.