ಭಾರತ ನೇಪಾಳ ಗಡಿ ರಕ್ಷಣೆಗಿರುವುದು ಕಲ್ಲುಕಂಬ ಮಾತ್ರ!

7
ಫಿನ್ಸ್ ಅಧೀನ ಸಂಸ್ಥೆಯ ಅಧ್ಯಯನ ತಂಡದಿಂದ ಮಾಹಿತಿ

ಭಾರತ ನೇಪಾಳ ಗಡಿ ರಕ್ಷಣೆಗಿರುವುದು ಕಲ್ಲುಕಂಬ ಮಾತ್ರ!

Published:
Updated:

ಮೂಡುಬಿದಿರೆ: `ಭಾರತ ಮತ್ತು ನೇಪಾಳ ಗಡಿಭಾಗದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇಲ್ಲ. ಗಡಿಯನ್ನು ಗುರುತಿಸಲು ಒಂದು ದೊಡ್ಡ ಕಲ್ಲಿನ ಕಂಬ ಮಾತ್ರ ಇದೆ. ಹೀಗಾಗಿ ನುಸುಳುಕೋರರು ಸುಲಭದಲ್ಲಿ ನಮ್ಮ ದೇಶ  ಪ್ರವೇಶಿಸಲು ಸಾಧ್ಯವಿದೆ' ಎಂದು ಫಿನ್ಸ್ ಅಧೀನದ ಅಧ್ಯಯನ ತಂಡದ ಮಂಗಳೂರು ಗ್ರಾಮಾಂತರದ ಪ್ರಮುಖ ಸುದರ್ಶನ್ ಎಂ. ಹೇಳಿದರು.ಪ್ರೆಸ್‌ಕ್ಲಬ್‌ನಲ್ಲಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ನಿವೃತ್ತ ಸೈನಿಕರು, ನಿವೃತ್ತ ನ್ಯಾಯಾಧೀಶರು, ನಿವೃತ್ತ ಗುಪ್ತಚರ ಇಲಾಖೆ ಅಧಿಕಾರಿಗಳನ್ನು ಒಳಗೊಂಡ `ಫಿನ್ಸ್' ಸಂಸ್ಥೆ ತನ್ನ  ದಶಮಾನೋತ್ಸವದ ಪ್ರಯುಕ್ತ `ರಾಷ್ಟ್ರಗಡಿಗೆ ನಮನ' ಕಾರ್ಯಕ್ರಮದಡಿ ನೇಪಾಲ, ಟಿಬೆಟ್, ಬಾಂಗ್ಲಾದೇಶ, ಚೀನಾ, ಭೂತಾನ್, ಮ್ಯಾನ್‌ಮಾರ್ ಮತ್ತು ಪಾಕಿಸ್ತಾನ ಗಡಿಭಾಗಗಳ ಸಮಸ್ಯೆಯ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ದೇಶದ ವಿವಿಧ ಕಡೆಯಿಂದ ಸ್ವಯಂಸೇವಕರ ತಂಡಗಳನ್ನು ನೇಮಿಸಿತ್ತು.ಈ ಪೈಕಿ ನೇಪಾಳ ಗಡಿಭಾಗದ ಅಧ್ಯಯನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಐವರು ಸದಸ್ಯರನ್ನು ಒಳಗೊಂಡ ಮಂಗಳೂರು ಗ್ರಾಮಾಂತರ ತಂಡ ನವೆಂಬರ್ 21ರಿಂದ 23ರವರೆಗೆ ಭೇಟಿ ನೀಡಿ ನೇಪಾಳ ಗಡಿಯ ಅಧ್ಯಯನ ನಡೆಸಿದೆ ಎಂದರು.ಅಧ್ಯಯನದ ಬಗ್ಗೆ ವಿವರ ನೀಡಿದ ಸುದರ್ಶನ್ ಭಾರತ- ನೇಪಾಳ ಗಡಿಯನ್ನು ಗುರುತಿಸಲು ಬೃಹದಾಕಾರದ ಕಲ್ಲು ಬಿಟ್ಟರೆ ಬೇರೆ ರಕ್ಷಣೆ ವ್ಯವಸ್ಥೆ ಇಲ್ಲ. ಹೀಗಾಗಿ ಭಾರತಕ್ಕಾಗಮಿಸುವ ಬಾಂಗ್ಲಾ, ಪಾಕ್ ನುಸುಳುಕೋರರಿಗೆ ಮುಕ್ತ ದಾರಿ ದೊರಕಿದಂತಾಗಿದೆ.ನೇಪಾಳದಿಂದ ಭಾರತಕ್ಕೆ ವಾಹನಗಳು ಸುಲಭದಲ್ಲಿ ಬರುತ್ತವೆ. ಆದರೆ ಭಾರತದಿಂದ ನೇಪಾಳ ಗಡಿ ಪ್ರವೇಶಿಸುವ ವಾಹನಗಳಿಗೆ ವಿಪರೀತ ತನಿಖೆ ಇದೆ. ಇದು ನಮ್ಮ ಗಡಿಭಾಗದ ದೌರ್ಬಲ್ಯ ಎಂದರು.ಪ್ರತಿ ಸಂಜೆ ಎರಡು ತಾಸು ವಿದ್ಯುತ್ ಇರುವುದಿಲ್ಲ. ಈ ಹೊತ್ತಿಗೆ ನುಸುಳುಕೋರರು ರಸ್ತೆಯ ಮೂಲಕ ಭಾರತವನ್ನು ಸುಲಭದಲ್ಲಿ ಪ್ರವೇಶಿಸುತ್ತಾರೆ. ಗಾಂಜಾ, ಅಫೀಮು ಮಾರಾಟಗಾರರು, ಅಕ್ರಮ ದಂಧೆಕೋರರು ಈ ಸಮಯವನ್ನೇ ಬಳಸಿಕೊಳ್ಳುತ್ತಾರೆ. ಗಡಿಭಾಗದಲ್ಲಿ ಹೆಣ್ಣು ಮಕ್ಕಳ ಅಪಹರಣ ಕೂಡ ನಡೆಯುತ್ತಿದ್ದು ಸಂಜೆ ನಂತರ ಒಂಟಿ ಹೆಣ್ಣು ತಿರುಗಾಡುವಂತಿಲ್ಲ ಎಂದರು.ಮೂಲಸೌಕರ್ಯದ ಕೊರತೆ:

ಗಡಿಭಾಗದ ಜನರು ರಸ್ತೆ, ನೀರು, ಆಸ್ಪತ್ರೆ, ಶಿಕ್ಷಣ ಇನ್ನಿತರ ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹುಲ್ಲಿನ ಮನೆಗಳಿವೆ. ಬಹುತೇಕ ಕುಟುಂಬಗಳು ಶೌಚಾಲಯವಿಲ್ಲದೆ ಹೊಲಗದ್ದೆಗಳನ್ನು ಆಶ್ರಯಿಸಿಕೊಂಡಿದ್ದಾರೆ. ಜೀವನೋಪಾಯಕ್ಕೆ ಕೃಷಿಯನ್ನು ಅವಲಂಬಿಸಿದ್ದರೂ ಕೂಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದೆ. ಕಾರ್ಮಿಕರ ದಿನದ ಕೂಲಿ 20 ರೂಪಾಯಿಗಿಂತ ಹೆಚ್ಚಿಲ್ಲ.ಸೈನಿಕರಿಗೂ ಸ್ವಾತಂತ್ರ್ಯವಿಲ್ಲ:ಇಲ್ಲಿ ಗಡಿಕಾಯುವ ಭಾರತದ ಯೋಧರಿಗೆ ಆಧುನಿಕ ಶಸ್ತ್ರಾಸ್ತಗಳಿಲ್ಲ. ದೇಶ ಪ್ರವೇಶಿಸುವ ವೈರಿಗಳು ಗುಂಡು ಹೊಡೆದ ನಂತರವಷ್ಟೆ ಭಾರತೀಯ ಸೈನಿಕರು ಅವರಿಗೆ ಗುಂಡಿನ ಉತ್ತರ ನೀಡಬೇಕು. ಮೇಲಾಧಿಕಾರಿಗಳಿಂದ ಮೊದಲೆ ಸೂಚನೆ ಬಂದಿರಬೇಕು. ಸೈನಿಕರಿಗೂ ಇಲ್ಲಿ ಸ್ವಾತಂತ್ರ್ಯವಿಲ್ಲ ಎಂದರು.ಅಧ್ಯಯನದಲ್ಲಿ ಪ್ರಮುಖವಾಗಿ ಗಡಿಭಾಗದ ಭೌಗೋಳಿಕ ಪರಿಸ್ಥಿತಿ, ಗ್ರಾಮಸ್ಥರೊಂದಿಗೆ ಚರ್ಚೆ, ಸೈನಿಕರ ಭೇಟಿ, ಕಾರ್ಯಕ್ರಮ ಒಳಗೊಂಡಿದೆ. ತಂಡ ಮೂರು ದಿನಗಳಲ್ಲಿ 36 ಗ್ರಾಮಗಳ ಅಧ್ಯಯನ ನಡೆಸಿದೆ.ಅಧ್ಯಯನದಲ್ಲಿ ಭಾಗವಹಿಸಿದ್ದ ಗೋಪಿನಾಥ,  ಹರೀಶ ಕುಮಾರ್, ರಾಮ್‌ಮೋಹನ್ ಉಳ್ಳಾಲ ಮತ್ತು ರೋಹನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry