`ಭಾರತ, ಪಾಕಿಸ್ತಾನದಲ್ಲಿ ಆಡಿದರೆ ಹೆಚ್ಚು ಖುಷಿ'

7
ಮಾಜಿ ಆಟಗಾರ ಇಂತಿಕಾಬ್ ಆಲಂ ಮನದಾಳದ ಮಾತು

`ಭಾರತ, ಪಾಕಿಸ್ತಾನದಲ್ಲಿ ಆಡಿದರೆ ಹೆಚ್ಚು ಖುಷಿ'

Published:
Updated:
`ಭಾರತ, ಪಾಕಿಸ್ತಾನದಲ್ಲಿ ಆಡಿದರೆ ಹೆಚ್ಚು ಖುಷಿ'

ಕೋಲ್ಕತ್ತ: `ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಏಳು ವರ್ಷಗಳ ನಂತರ ಕ್ರಿಕೆಟ್ ಸರಣಿ ಪುನರಾರಂಭಗೊಂಡಿರುವುದು ಸಂತಸ ಉಂಟುಮಾಡಿದೆ. ಭಾರತವೂ ಪಾಕಿಸ್ತಾನಕ್ಕೆ ಬಂದು ಕೆಲವು ಒಂದು ದಿನದ ಪಂದ್ಯ ಮತ್ತು 20-20 ಪಂದ್ಯಗಳನ್ನು ಆಡಿದರೆ ಇನ್ನೂ ಸಂತಸವಾಗುತ್ತದೆ' ಎಂದು ಖುಷಿಯಿಂದ ಹೇಳಿದವರು ಪಾಕಿಸ್ತಾನ ಮಾಜಿ ನಾಯಕ, ತರಬೇತುದಾರರೂ ಆದ ಇಂತಿಕಾಬ್ ಆಲಂ ಅವರು.ಗುರುವಾರ ಸಂಜೆ ಈಡನ್ ಗಾರ್ಡನ್‌ನಲ್ಲಿ ಭಾರತ- ಪಾಕಿಸ್ತಾನ ನಡುವಣ ಎರಡನೇ ಒಂದು ದಿನದ ಕ್ರಿಕೆಟ್ ಪಂದ್ಯದ ವೇಳೆ ಅವರು ಪತ್ರಕರ್ತರಿದ್ದ ಕೊಠಡಿಗೆ ಬಂದು ತಮ್ಮ ಹಳೆಯ ನೆನಪುಗಳನ್ನು ಹಂಚಿಕೊಂಡರು. ಪ್ರಸಕ್ತ ವಿಷಯಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.`ಏಳು ವರ್ಷಗಳ ನಂತರ ಈ ಎರಡು ಎದುರಾಳಿಗಳ ನಡುವೆ ಕ್ರಿಕೆಟ್ ಸಂಬಂಧ ಮತ್ತೆ ಕುದುರಿರುವುದು ಖುಷಿಯ ವಿಚಾರ. ಇಲ್ಲಿಗೆ ಬಂದು ಪಂದ್ಯ ನೋಡಲು ಸಾಧ್ಯವಾಗುತ್ತಿರುವುದು ಸಂಭ್ರಮ ಮೂಡಿಸಿದೆ. ಆದರೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದರೆ ಇನ್ನೂ ಖುಷಿಯಾಗುತ್ತದೆ' ಎಂದರು ಇಂತಿಕಾಬ್.ಗುರುವಾರ ಭಾರತ- ಪಾಕ್‌ನ ಹಿರಿಯ ಕ್ರಿಕೆಟಿಗರಲ್ಲಿ ಇಂತಿಕಾಬ್ ಕೂಡ ಸನ್ಮಾನಿತರಾಗಿದ್ದರು. `ಇದೊಂದು ಚಾರಿತ್ರಿಕ ದಿನ. ಹಿರಿಯ ಆಟಗಾರರನ್ನು ಭೇಟಿ ಮಾಡುವ ಸಂದರ್ಭ ಸಿಕ್ಕಿತು. ಬೇಡಿ, ಅಜಿತ್ ವಾಡೇಕರ್, ಕಪಿಲ್ ದೇವ್ ಅವರನ್ನು ಮಾತನಾಡಿಸಿದೆ. ಬೇಡಿ ನನಗೆ ಒಳ್ಳೆಯ ಗೆಳೆಯ. ಗಾವಸ್ಕರ್ ಅವರನ್ನೂ ಭೇಟಿ ಮಾಡಿದೆ. ಅವರ ಜತೆ ವಿಶ್ವ ಇತರೆ ತಂಡಕ್ಕೆ ಆಡಿದ್ದೆ.  ಅವರ ವಿರುದ್ಧ 1970-71ರ ಸರಣಿಯಲ್ಲಿ ಆಡಿದ್ದೆ. ಆ ಪಂದ್ಯದಲ್ಲಿ ಫರೂಕ್ ಎಂಜಿನಿಯರ್, ನಮ್ಮ ತಂಡದಲ್ಲಿ ಜಹೀರ್ ಅಬ್ಬಾಸ್ ಇದ್ದರು. ಸುಮಾರು ಸಮಯದ ನಂತರ ಗೆಳೆಯರನ್ನೆಲ್ಲ ಭೇಟಿಯಾಗುತ್ತಿದ್ದೇನೆ' ಎಂದು ಸ್ಮರಿಸಿಕೊಂಡರು.ಅದ್ಭುತ ಆಟಗಾರ: `ಸಚಿನ್ ತೆಂಡೂಲ್ಕರ್ ಅದ್ಭುತವಾದುದನ್ನು ಸಾಧಿಸಿದ್ದಾರೆ. ಆತ 16 ವರ್ಷದವನಾಗಿದ್ದಾಗ, ಪಾಕಿಸ್ತಾನಕ್ಕೆ ಆಡಲು ಬಂದಿದ್ದು ನೆನಪಿದೆ. ಪೆಶಾವರದ ಮೊದಲ ಪಂದ್ಯದಲ್ಲಿ ಅಬ್ದುಲ್ ಖಾದಿರ್ ಬೌಲಿಂಗ್‌ನಲ್ಲಿ ಕೆಲವು ಸಿಕ್ಸರ್‌ಗಳನ್ನು ಎತ್ತಿದ್ದ. ಆಗಲೇ ಆತನ ಪ್ರತಿಭೆ ಗಮನಿಸಬಹುದಾಗಿತ್ತು. ನಂತರ ಆಡಿದ ರೀತಿಯಿಂದ ಆತ ಭಾರತದ ಮಹಾನ್ ಕ್ರಿಕೆಟ್ ರಾಯಬಾರಿಯಾದ' ಎಂದು ಹೊಗಳಿದರು.`ಪ್ರತಿ ತಂಡಕ್ಕೂ ಪರಿವರ್ತನೆ ಎಂಬುದಿರುತ್ತದೆ. ಭಾರತ ತಂಡ ಈಗ ಆ ಹಂತದಲ್ಲಿದೆ. ಕೆಲವು ಶ್ರೇಷ್ಠ, ಪಂದ್ಯ ಗೆಲ್ಲಿಸುವ ಆಟಗಾರರನ್ನು ಕಳೆದುಕೊಂಡರೆ, ತಂಡವನ್ನು ಮತ್ತೆ ಪ್ರಬಲವಾಗಿ ರೂಪಿಸಲು ಸಾಕಷ್ಟು ಸಮಯ ಬೇಕಾಗುತ್ತದೆ. ಎಲ್ಲ ತಂಡಗಳು ಇಂಥ ಸಂದರ್ಭಗಳನ್ನು ಎದುರಿಸಿವೆ. ಇದಕ್ಕೆ ದೂರದೃಷ್ಟಿ, ಪ್ರತಿಭೆಯನ್ನು ಶೋಧಿಸುವ ಸಮರ್ಥ ಆಯ್ಕೆಗಾರರು ಇರಬೇಕು. ಆಗ ಒಳ್ಳೆಯ ಆಟಗಾರರು ಸಿಕ್ಕೇ ಸಿಗುತ್ತಾರೆ.ಪ್ರಸಕ್ತ ಪಾಕಿಸ್ತಾನ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಪಾಕ್ ಕ್ರಿಕೆಟ್ ಮಂಡಳಿಗೆ ಇದರ ಶ್ರೇಯಸ್ಸು ನೀಡಬೇಕು' ಎಂದು ಇಂತಿಕಾಬ್ ಆಲಂ ಹೇಳಿದರು.`ಸರ್ವಾಧಿಕಾರಿಯಲ್ಲ': `ಪಾಕ್ ತಂಡದ ನಾಯಕನಾಗಿದ್ದ ಇಮ್ರಾನ್ ಖಾನ್ ಅವರನ್ನು 16 ವರ್ಷದಿಂದ ಕಂಡಿದ್ದೇನೆ. ಆತ ಸರ್ವಾಧಿಕಾರಿಯಂತೆ ವರ್ತಿಸಿಲ್ಲ. ಹಾಗೆ ಚಿತ್ರಿಸಲಾಗಿದೆ. ಇತರ ಆಟಗಾರರ ಜತೆ ಚರ್ಚಿಸುತ್ತಿದ್ದ. ಆತನಿಗೆ ಸರಿಯಾದ ಕಾರಣ ನೀಡಿ ಮನವರಿಕೆ ಮಾಡಿಕೊಡಬೇಕಿತ್ತು ಅಷ್ಟೇ. ಆತ ಆಯ್ಕೆಗಾರರ ಜತೆ ಕುಳಿತು ಚರ್ಚಿಸುತ್ತಿದ್ದ. ಏಕಪಕ್ಷೀಯವಾಗಿ ವರ್ತಿಸಲಿಲ್ಲ' ಎಂದು ಅವರು ಅಭಿಪ್ರಾಯಪಟ್ಟರು.`ಭಾರತದಲ್ಲಿ ಪಂಜಾಬ್ ತಂಡದ ಜತೆ ತರಬೇತುದಾರನಾಗಿ ಕೆಲಸ ಮಾಡಿದ್ದು ಖುಷಿಯ ಅವಧಿ. ಅಲ್ಲಿ ಯುವರಾಜ್, ಹರಭಜನ್ ಸಿಂಗ್, ದಿನೇಶ್ ಮೊಂಗಿಯಾ ಸೇರಿದಂತೆ ಕೆಲವು ಉತ್ತಮ ಆಟಗಾರರಿದ್ದರು. ಅದೊಂದು ಉತ್ತಮ ತಂಡ. ನಾನು ಕೋಚ್ ಆಗಿದ್ದ ಅವಧಿಯಲ್ಲಿ ಪಂಜಾಬ್ ರಣಜಿ ಟ್ರೋಫಿ ಫೈನಲ್ ತಲುಪಿತ್ತು' ಎಂದು ನೆನಪಿಸಿಕೊಂಡರು.`ನನ್ನ ಕಾಲದಲ್ಲಿ ವೆಸ್ಟ್ ಇಂಡೀಸ್ ತಂಡ ಉತ್ತಮ ವೇಗದ ದಾಳಿಯನ್ನು ಹೊಂದಿತ್ತು. ಅವರ ವಿರುದ್ಧ ಆಡುವುದು ಸುಲಭವಾಗಿರಲಿಲ್ಲ. `ವೇಗದ ಬ್ಯಾಟರಿ' ಇದ್ದ ಕಾರಣ ನಾಯಕನಿಗೂ ಹೆಚ್ಚು ಚಿಂತೆ ಇರುತ್ತಿರಲಿಲ್ಲ.ಆದರೆ ಅವರ ತಂಡದ ಸ್ಪಿನ್ ವಿಭಾಗ ದುರ್ಬಲವಾಗಿತ್ತು. ನಾನು ಎರಡು ವರ್ಷ ಆಂಟಿಗಾ ಮತ್ತು ಜಮೈಕಾದ ಸ್ಪಿನ್ ಅಕಾಡೆಮಿಯಲ್ಲಿ ಕೋಚ್ ಆಗಿದ್ದೆ. ನನ್ನ ಅವಧಿಯಲ್ಲಿ ಲೆಗ್ ಸ್ಪಿನ್ನರುಗಳಾದ- ಜಮೈಕದ ಲೂಯಿಸ್, ಟ್ರಿನಿಡಾಡಿನ ದೀನನಾಥ ರಾಮನಾರಾಯಣ್, ಗಯಾನಾದ ಮಹೇಂದ್ರ ನಾಗಮಟ್ಟು ರಾಷ್ಟ್ರೀಯ ತಂಡಕ್ಕೆ ಆಡಿದ್ದರು' ಎಂದರು ಇಂತಿಕಾಬ್.

`ಅಬ್ದುಲ್ ಖಾದಿರ್ ಪಾಕ್ ಕಂಡ ಮಹಾನ್ ಲೆಗ್ ಸ್ಪಿನ್ನರ್. ಈಗ ಪಾಕ್ ತಂಡದಲ್ಲಿ ಲೆಗ್ ಸ್ಪಿನ್ನರ್ ಇಲ್ಲ. ಖಾದಿರ್ ಪುತ್ರ ಉಸ್ಮಾನ್ 19 ವರ್ಷದೊಳಗಿನವರ ರಾಷ್ಟ್ರೀಯ ತಂಡದಲ್ಲಿದ್ದಾನೆ. 2-3 ವರ್ಷಗಳಲ್ಲಿ ಅತ್ಯುತ್ತಮ ಲೆಗ್ ಸ್ಪಿನ್ನರ್ ಆಗಿ ಮೂಡಿಬರುವ ವಿಶ್ವಾಸವಿದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry