ಭಾನುವಾರ, ಮೇ 9, 2021
18 °C

ಭಾರತ-ಪಾಕಿಸ್ತಾನ ಫೈನಲ್ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ-ಪಾಕಿಸ್ತಾನ ಫೈನಲ್ ಇಂದು

ಓರ್ಡೊಸ್, ಚೀನಾ (ಪಿಟಿಐ): ಒಂದೂ ಪಂದ್ಯದಲ್ಲಿ ಸೋಲು ಕಾಣದ ಭಾರತ ಹಾಗೂ ಉತ್ತಮ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ತಂಡಗಳು ಭಾನುವಾರ ನಡೆಯಲಿರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.ಸೋಲಿನ ನಿರಾಸೆಯೇ ಇಲ್ಲದ ರಾಜ್ಪಾಲ್ ಸಿಂಗ್ ಪಡೆ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಭಾರತ ಹಾಗೂ ಪಾಕಿಸ್ತಾನ ಸಾಂಪ್ರಾದಾಯಿಕ ಎದುರಾಳಿಗಳು ಎನ್ನುವುದು ಈ ಪಂದ್ಯದ ಮಹತ್ವ ಹೆಚ್ಚಿಸಿದೆ. ಅಭಿಮಾನಿಗಳು ಉಭಯ ತಂಡಗಳ ನಡುವಿನ ಹೋರಾಟವನ್ನು ನೋಡಲು ಕಾತರದಲ್ಲಿದ್ದಾರೆ.ವಿಶ್ವಾಸದಿಂದ ಬೀಗುತ್ತಿರುವ ಭಾರತ ತಂಡಕ್ಕೆ ಶುಕ್ರವಾರ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದು ಇನ್ನೂ ಹೆಚ್ಚಿನ ಬಲ ತುಂಬಿದೆ. ಏಕೆಂದರೆ ಆ ಪಂದ್ಯದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಭಾರತದ ಆಟಗಾರರು ಅದಕ್ಕೆ ಅವಕಾಶ ನೀಡಲಿಲ್ಲ.ಸಾಕಷ್ಟು ವಿವಾದಗಳ ನಡುವೆ ಪುಟಿದೆದ್ದ ಭಾರತ ಹಾಕಿ ತಂಡ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇಲ್ಲಿಯೂ ಉತ್ತಮ ಪ್ರದರ್ಶನ ನೀಡಿದರೆ, ವಿವಾದದ ಕೊಳೆ ತೊಳೆಯಲು ಸಾಧ್ಯವಾಗಬಹುದು.`ಇಂದಿನ ಪಂದ್ಯದ ಕಾರ್ಯಾಚರಣೆಯನ್ನು ಭಾರತ ಯಶಸ್ವಿಯಾಗಿ ನಿಭಾಯಿಸಲಿದೆ. ತಂಡದಲ್ಲಿ ಯುವ ಆಟಗಾರರೇ ಹೆಚ್ಚಾಗಿದ್ದರೂ, ಒತ್ತಡವನ್ನು ಮೆಟ್ಟಿ ನಿಲ್ಲ ಬಲ್ಲ ಸಾಮರ್ಥ್ಯವಿದೆ~ ಎಂದು  ಕೋಚ್ ಮೈಕಲ್ ನಾಬ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡಿರುವ ಪಂದ್ಯಗಳ ಲೆಕ್ಕಾಚಾರ ಹಾಕಿದರೆ, ಪಾಕ್ ತಂಡದ್ದೇ ಮೇಲುಗೈ. 148 ಪಂದ್ಯಗಳಲ್ಲಿ ಕೇವಲ 48 ಪಂದ್ಯಗಳಲ್ಲಿ ಮಾತ್ರ ಭಾರತಕ್ಕೆ ಗೆಲುವು ಪಡೆಯಲು ಸಾಧ್ಯವಾಗಿದೆ. 25 ಪಂದ್ಯಗಳು ಡ್ರಾದಲ್ಲಿ ಅಂತ್ಯ ಕಂಡರೆ, 75 ಪಂದ್ಯಗಳಲ್ಲಿ ಪಾಕ್ ತಂಡ ಜಯಭೇರಿ ಗಳಿಸಿದೆ. ಭಾರತ 280 ಗೋಲುಗಳನ್ನು ಗಳಿಸಿದ್ದರೆ, ಪಾಕಿಸ್ತಾನ 349 ಗೋಲು ಕಲೆ ಹಾಕಿದೆ.ಆದರೆ, ಭಾರತದ ಆಟಗಾರರು ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಲು ಪದೇ ಪದೇ ವಿಫಲರಾಗುತ್ತಿದ್ದಾರೆ. ಇದು ಕೋಚ್ ನಾಬ್ಸ್ ಆತಂಕಕ್ಕೆ ಕಾರಣ. ಈ ಟೂರ್ನಿಯಲ್ಲಿ 23 ಬಾರಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಕೇವಲ ಮೂರು ಗೋಲು ಗಳಿಸಿದ್ದು ಅದಕ್ಕೆ ಸಾಕ್ಷಿ. ಈ ಕೊರತೆಯನ್ನೆಲ್ಲಾ ಮೀರಿ ಗೋಲು ಗಳಿಸಬೇಕು. ರಕ್ಷಣಾತ್ಮಕ ಆಟಕ್ಕಿಂತ ಗೆಲುವಿನ ಹಾದಿಯಲ್ಲಿ ಸಾಗುವ ಆಟವಾಡಬೇಕು ಎಂದು ಅವರು ಹೇಳಿದರು.ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಅದು ಸಹಜವಾಗಿಯೇ ಒತ್ತಡಕ್ಕೆ ಒಳಗಾಗುವಂತೆ ಮಾಡುತ್ತದೆ. ಎರಡೂ ದೇಶಗಳ ಅಭಿಮಾನಿಗಳು ತಮ್ಮ ದೇಶದ ತಂಡವೇ ಗೆಲ್ಲಲಿ ಎಂದು ಹುರಿದುಂಬಿಸುತ್ತಾರೆ. ಆದರೆ ಒಂದು ತಂಡ ಮಾತ್ರ ಗೆಲ್ಲಲು ಸಾಧ್ಯ~ ಎನ್ನುತ್ತಾರೆ ಪಾಕ್ ತಂಡದ ನಾಯಕ ಮೊಹಮ್ಮದ್ ಇಮ್ರಾನ್.

 

ಭಾರತದ ಆಟಗಾರರಿಗೆ ಶೂ ಕೊರತೆ!

ಭಾರತದ ಕೆಲ ಆಟಗಾರರು ಈ ಟೂರ್ನಿಯಲ್ಲಿ ಧರಿಸಲು ಸೂಕ್ತ ಶೂ ಇಲ್ಲದೆ ತೊಂದರೆ ಎದುರಿಸಿದ್ದಾರೆ. ಕೆಲವರು ಅಭ್ಯಾಸದ ವೇಳೆ ಕೇವಲ ಒಂದು ಜೊತೆ ಶೂ ಮಾತ್ರ ಹೊಂದಿದ್ದರು. ಅದೇ ಶೂ ಅನ್ನು ಪಂದ್ಯಗಳಿಗೂ ಬಳಕೆ ಮಾಡಬೇಕಿದೆ.ಮಂಜಿತ್ ಕುಲ್ಲು ಬಳಿ ಒಂದು ಜೊತೆ ಮಾತ್ರ ಟರ್ಫ್ ಶೂ ಇವೆ. ಅಭ್ಯಾಸಕ್ಕೆ ಹಾಗೂ ಪಂದ್ಯಕ್ಕೆ ಅವರು ಇದೇ ಶೂ ಬಳಸುತ್ತಿದ್ದಾರೆ. ಹರ್‌ಪ್ರೀತ್ ಸಿಂಗ್‌ಗೆ ಟರ್ಫ್ ಶೂಗಳ ಕೊರತೆ ಎದುರಾಗಿದೆ ಎಂದು ತಂಡದ ಮೂಲಗಳು ಹೇಳಿವೆ.ಉತ್ತಮ ಬೆಲೆ ಬಾಳುವ ಶೂ ಗಳನ್ನು ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ನೀಡಿಲ್ಲ. ಕಳಪೆ ಮಟ್ಟದ ಶೂ ನೀಡಿದೆ. ಇವು ದೀರ್ಘಕಾಲ ಬಾಳಿಕೆ ಬರುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.