ಸೋಮವಾರ, ಮೇ 10, 2021
22 °C
ಚಾಂಪಿಯನ್ಸ್ ಟ್ರೋಫಿ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ದೋನಿ ಬಳಗ

ಭಾರತ- ಪಾಕ್ ಇಂದು ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ- ಪಾಕ್ ಇಂದು ಮುಖಾಮುಖಿ

ಬರ್ಮಿಂಗ್‌ಹ್ಯಾಂ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಚಾಂಪಿಯನ್ಸ್ ಟ್ರೋಫಿ  ಕ್ರಿಕೆಟ್ ಟೂರ್ನಿಯ `ಬಿ' ಗುಂಪಿನ ಪಂದ್ಯದಲ್ಲಿ ಶನಿವಾರ ಮುಖಾಮುಖಿಯಾಗಲಿದ್ದು, ಈ ಪಂದ್ಯ ಕ್ರಿಕೆಟ್ ಪ್ರಿಯರ ನಡುವೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ಮುಂದಿನ ಹಂತ ಪ್ರವೇಶಿಸುವ ನಿಟ್ಟಿನಿಂದ ಈ ಪಂದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲ. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಆದರೆ, ಮಿಸ್ಬಾ ಉಲ್ ಹಕ್ ನೇತೃತ್ವದ ಪಾಕ್ ಟೂರ್ನಿಯಿಂದ ಹೊರ ಬಿದ್ದಿದೆ.ಭಾರತ ಹಾಗೂ ಪಾಕ್ ನಡುವಿನ ಈ ಪಂದ್ಯಕ್ಕೆ ಎಪ್ರಿಲ್‌ನಲ್ಲಿಯೇ ಟಿಕೆಟ್ ಮಾರಾಟ ನಡೆದಿತ್ತು. ಆನ್‌ಲೈನ್‌ನಲ್ಲಿ ಕೇವಲ 30 ನಿಮಿಷದಲ್ಲಿ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿದ್ದವು. ಬದ್ಧ ವೈರಿಗಳ ನಡುವಿನ ಕಾದಾಟ ಎಷ್ಟೊಂದು ಕಾವು ಪಡೆದುಕೊಂಡಿದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಸಾಕ್ಷಿ ಬೇಕಿಲ್ಲ. ಹೆಚ್ಚು ಜನಸಂಖ್ಯೆ ಹೊಂದಿರುವ ಲಂಡನ್‌ನ ಎರಡನೇ ನಗರ ಎನ್ನುವ ಖ್ಯಾತಿ ಹೊಂದಿರುವ ಬರ್ಮಿಂಗ್ ಹ್ಯಾಂನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಸುಮಾರು 21,000 ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಬಹುದು. ಅದರಲ್ಲಿ  ಭಾರತ ಮತ್ತು ಪಾಕ್ ಕ್ರೀಡಾಭಿಮಾನಿಗಳೇ ಹೆಚ್ಚು ಟಿಕೆಟ್‌ಗಳನ್ನು ಖರೀದಿಸಿದ್ದಾರೆ ಎನ್ನುವುದು ಪಂದ್ಯದ ರೋಚಕತೆಗೆ ಸಾಕ್ಷಿ.ಪಾಕ್ ತಂಡ ತನ್ನ ಹಿಂದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿತ್ತು. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿರುವ ಮಿಸ್ಬಾ ಪಡೆ ಯಾವುದೇ ಸಂದರ್ಭದಲ್ಲಿ ತಿರುಗೇಟು ನೀಡುವ ಸಾಮರ್ಥ್ಯ ಹೊಂದಿದೆ. ಐಸಿಸಿ ಏಕದಿನ ಕ್ರಿಕೆಟ್‌ನ ಚಾಂಪಿಯನ್ ಮತ್ತು ರರ್‍ಯಾಂಕಿಂಗ್ ನಲ್ಲಿ ಅಗ್ರಸ್ಥಾನದಲ್ಲಿರುವ ದೋನಿ ಪಡೆ ಕೂಡಾ ಉತ್ತಮ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ. ಆದರೆ, ಚಾಂಪಿಯನ್ಸ್ ಟ್ರೋಫಿಯ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಪಾಕ್ ತಂಡಕ್ಕೆ ಮೇಲುಗೈ.ಒಟ್ಟು ಆರು ಸಲ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದು, ಎರಡೂ ಪಂದ್ಯಗಳಲ್ಲಿಯೂ ಭಾರತ ಮುಗ್ಗರಿಸಿದೆ. 2004ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಾಕ್ ಮೂರು ವಿಕೆಟ್‌ಗಳ ಗೆಲುವು ಪಡೆದಿತ್ತು. ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಸೂಪರ್ ಪಾರ್ಕ್ ಕ್ರೀಡಾಂಗಣದಲ್ಲಿ ಕೊನೆಯ ಸಲ ಎದುರಾದಾಗ ಪಾಕ್ 54  ರನ್‌ಗಳಿಂದ ಗೆಲುವು ಸಾಧಿಸಿತ್ತು. ಆದರೆ, ದೋನಿ ಪಡೆ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು, ಪಾಕ್ ಎದುರಿನ ಹಿಂದಿನ ಪಂದ್ಯಗಳಲ್ಲಿನ ಸೋಲಿಗೆ ತಿರುಗೇಟು ನೀಡುವುದರ ಜೊತೆಗೆ ಈ ಸಲದ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯುವ ಗುರಿ ಹೊಂದಿದೆ.ಎರಡು ಪಂದ್ಯಗಳಲ್ಲಿ ಗೆಲುವು ಪಡೆದು ನಾಲ್ಕು ಅಂಕಗಳನ್ನು ಹೊಂದಿರುವ ದೋನಿ ಪಡೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಯೇ ಉಳಿಯಬೇಕೆನ್ನುವ ಲೆಕ್ಕಾಚಾರದಲ್ಲಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಶತಕ ಸಿಡಿಸಿರುವ ಶಿಖರ್ ಧವನ್ ಭಾರತದ ಪ್ರಮುಖ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ.ಅರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ವಿಂಡೀಸ್ ಎದುರು ಅಜೇಯ ಅರ್ಧಶತಕ ಗಳಿಸಿದ್ದ ದಿನೇಶ್ ಕಾರ್ತಿಕ್ ಪಾಕ್ ಬೌಲರ್‌ಗಳಿಗೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಪಾಕ್ ಪ್ರಬಲ ಬೌಲರ್‌ಗಳನ್ನು ಹೊಂದಿದೆ. ಆದ್ದರಿಂದ ಈ ಪಂದ್ಯದಲ್ಲಿ ಜಯದ ಮಾಲೆ ಯಾರ ಕೊರಳಿಗೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.ತಂಡಗಳು ಇಂತಿವೆ:

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ಅರ್. ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ್, ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ಸುರೇಶ್ ರೈನಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ಮುರಳಿ ವಿಜಯ್, ಆರ್. ವಿನಯ್ ಕುಮಾರ್ ಮತ್ತು ಉಮೇಶ್ ಯಾದವ್.ಪಾಕಿಸ್ತಾನ: ಮಿಸ್ಬಾಉಲ್ ಹಕ್ (ನಾಯಕ), ನಾಸೀರ್ ಜೆಮ್‌ಷದ್, ಮಹಮ್ಮದ್ ಹಫೀಜ್, ಇಮ್ರಾನ್ ಫರ‌್ಹಾತ್, ಕಮ್ರಾನ್ ಅಕ್ಮಲ್, ಶೋಯಬ್ ಮಲಿಕ್, ಅಸಾದ್ ಶಫೀಕ್, ಸಯೀದ್ ಅಜ್ಮಲ್, ಜುನೈದ್ ಖಾನ್, ಮಹಮ್ಮದ್ ಇರ್ಫಾನ್, ಅಸಾದ್ ಅಲಿ, ವಹಾಬ್ ರಿಯಾಜ್, ಉಮರ್ ಅಮಿನ್, ಅಬ್ದುಲ್ ರೆಹಮಾನ್ ಹಾಗೂ ಈಶನ್ ಆದ್ಲಿ.ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ.

(ಭಾರತೀಯ ಕಾಲಮಾನ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.