ಭಾರತ-ಪಾಕ್ ಕ್ರಿಕೆಟ್ ನಡೆಯಲು ಬಿಡಲ್ಲ: ಮುತಾಲಿಕ್

7

ಭಾರತ-ಪಾಕ್ ಕ್ರಿಕೆಟ್ ನಡೆಯಲು ಬಿಡಲ್ಲ: ಮುತಾಲಿಕ್

Published:
Updated:

ಮೈಸೂರು: ಬೆಂಗಳೂರು ಸೇರಿದಂತೆ ಭಾರತದಲ್ಲಿ ಎಲ್ಲಿಯೇ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದನ್ನು ನಿಲ್ಲಿಸಲು ಉಗ್ರ ಸ್ವರೂಪದ ಹೋರಾಟ ನಡೆಸುತ್ತೇವೆ. ಇದಕ್ಕಾಗಿ  ಬಲಿದಾನಕ್ಕೂ ಸಿದ್ಧ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಡಿಸೆಂಬರ್ 25ರಂದು ಭಾರತ-ಪಾಕ್ ಪಂದ್ಯ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇದನ್ನು ನಾವು ಖಂಡಿಸುತ್ತೇವೆ. ಕಳೆದ 50 ವರ್ಷಗಳಿಂದ ಭಾರತದಲ್ಲಿ ಹಿಂಸಾಚಾರ, ಮಾದಕ ದ್ರವ್ಯ ಸಾಗಣೆ, ಭಯೋತ್ಪಾದನೆ, ಖೋಟಾನೋಟು ಚಲಾವಣೆಯಂತಹ ಕುಕೃತ್ಯಗಳನ್ನು ಪಾಕಿಸ್ತಾನ ಮಾಡುತ್ತಿರುವುದು ಜಗತ್ತಿಗೆ ತಿಳಿದಿದೆ. ದಾವೂದ್ ಇಬ್ರಾಹಿಂನಂತಹ ಪಾತಕಿಯು ನಡೆಸುವ ಕ್ರಿಕೆಟ್ ಬೆಟ್ಟಿಂಗ್ ಜಾಲಕ್ಕೆ ಈ ಟೂರ್ನಿಯ ಮೂಲಕ ಲಾಭ ಮಾಡಿಕೊಡುವ ದುರುದ್ದೇಶ ಇದೆ. ಈ ಕುರಿತು ಈಗಾಗಲೇ ರಾಜ್ಯ ಗೃಹ ಸಚಿವರು ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳಿಗೆ ತಿಳಿಸಿದ್ದೇವೆ. ಅಲ್ಲದೇ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಿ ಪಂದ್ಯ ನಡೆಯಬಾರದು ಎಂದು ಮನವಿ ಮಾಡಿದ್ದೇವೆ' ಎಂದರು.`ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗಷ್ಟೇ ಬಾಂಬ್ ಸ್ಫೋಟ ನಡೆದ ಪ್ರಕರಣದ ವಿಚಾರಣೆ ನಡಯುತ್ತಿದೆ. ಅದರಲ್ಲಿಯೂ ಭಯೋತ್ಪಾದಕರ ಕೈವಾಡವಿದೆ. ಇಷ್ಟಾಗಿಯೂ ಅಲ್ಲಿಯೇ ಪಾಕಿಸ್ತಾನದೊಂದಿಗೆ ಪಂದ್ಯ ಆಡುವುದು ಏಕೆ. ಭಾರತದ ಆಟಗಾರರಿಗೆ ನಿಜವಾದ ದೇಶಭಕ್ತಿ, ಆತ್ಮಾಭಿಮಾನ, ಗೌರವಗಳು ಇದ್ದರೆ ಈ ಟೂರ್ನಿಯನ್ನು ಬಹಿಷ್ಕರಿಸಬೇಕಿತ್ತು' ಎಂದು ಹೇಳಿದರು.`ಬೆಂಗಳೂರಿನಿಂದ ಬೇರೆಡೆ ಪಂದ್ಯವನ್ನು ಸ್ಥಳಾಂತರಿಸಿದರೂ ಅಲ್ಲಿಯೇ ಹೋಗಿ ಪ್ರತಿಭಟನೆ ನಡೆಸುತ್ತೇವೆ. ಬಹಳಷ್ಟು ಸಂಘಟನೆಗಳ ಬೆಂಬಲ ನಮಗಿದೆ. ದೇಶದಲ್ಲಿ ಇಲ್ಲಿಯವರೆಗೆ ನಡೆದ ಭಯೋತ್ಪಾದಕ ದಾಳಿಗಳಲ್ಲಿ ಪ್ರಾಣತ್ಯಾಗ ಮಾಡಿರುವ ಹುತ್ಮಾತರ ಬಗ್ಗೆ ಕಿಂಚಿತ್ತೂ ಗೌರವವಿಲ್ಲದಂತೆ ಕೇಂದ್ರ ಸರ್ಕಾರ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗಳು ನಡೆದುಕೊಳ್ಳುತ್ತಿವೆ. ನಾವು ಕ್ರಿಕೆಟ್ ವಿರೋಧಿಗಳಲ್ಲ. ಆದರೆ, ಪಾಕಿಸ್ತಾನದೊಂದಿಗೆ ಮಾತ್ರ ಟೂರ್ನಿ ಆಡಲು ಬಿಡುವುದಿಲ್ಲ ಎಂದರು.ಭಾರತವು ಪ್ರತಿಬಾರಿ ಸೌಹಾರ್ದಕ್ಕಾಗಿ ಕೈಚಾಚುತ್ತದೆ. ಆದರೆ ಪಾಕಿಸ್ತಾನ ಪ್ರತಿ ಬಾರಿ ದ್ರೋಹ ಬಗೆಯುತ್ತಿದೆ. ಇಂತಹ ಪ್ರಯತ್ನಗಳಿಂದ ನಮ್ಮ ದೇಶ ಕಾಯುವ ಸೈನಿಕರು ಮತ್ತು ಪೊಲೀಸರ ನೈತಿಕತೆಗೆ ಪೆಟ್ಟಾಗುತ್ತದೆ. ಆದ್ದರಿಂದ ಟೂರ್ನಿಯನ್ನು ರದ್ದುಗೊಳಿಸಬೇಕು' ಎಂದು ಒತ್ತಾಯಿಸಿದರು.`ವಾಜಪೇಯಿಯವರು ಸೌಹಾರ್ದ ಎಕ್ಸ್‌ಪ್ರೆಸ್ ಬಿಟ್ಟಾಗ, ಅಸ್ಸಾಂ ಗಲಭೆ, ಡರ್ಟಿ ಪಿಕ್ಚರ್‌ನಲ್ಲಿ ಪಾಕ್ ನಟಿ ನಟಿಸುವುದರ ವಿರುದ್ಧವೂ ನಮ್ಮ ಸಂಘಟನೆ ಹೋರಾಟ ಮಾಡಿದೆ. ಕ್ರಿಕೆಟ್ ಶ್ರೀಮಂತ ಕ್ರೀಡೆ ಎನ್ನುವುದಕ್ಕೆ ಮಾತ್ರ ಹೋರಾಡುತ್ತೇವೆ ಎಂದು ಹೇಳುವುದು ತಪ್ಪು. ಈ ಪಂದ್ಯಗಳ ಮೂಲಕ ದೇಶದ ಯುವಕರು, ವಿದ್ಯಾರ್ಥಿಗಳನ್ನು ದಾರಿ ತಪ್ಪಿಸಲಾಗುತ್ತಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry