ಭಾರತ ಮೂಲದ ವೈದ್ಯ ‘ಡಾ. ಡೆತ್’ ಬಂಧನ

ವಾಷಿಂಗ್ಟನ್ (ಪಿಟಿಐ): ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಿ ನೀಡಿ (ಓವರ್ ಡೋಸ್) 36 ರೋಗಿಗಳ ಸಾವಿಗೆ ಕಾರಣನಾದ ‘ಡಾಕ್ಟರ್ ಡೆತ್’ ಕುಖ್ಯಾತಿಯ ಭಾರತ ಮೂಲದ ಮನೋವೈದ್ಯ ಡಾ.ನರೇಂದ್ರ ನಾಗಾರೆಡ್ಡಿಯನ್ನು ಅಮೆರಿಕದ ಪೊಲೀಸರು ಬಂಧಿಸಿದ್ದಾರೆ.
ನಾಗಾರೆಡ್ಡಿ ಜಾರ್ಜಿಯಾದ ಕ್ಲೇಟನ್ ಕೌಂಟಿಯಲ್ಲಿ ವಾಸಿಸುತ್ತಿದ್ದ. ಆತನ ಕಚೇರಿಗಳ ಮೇಲೆ ದಾಳಿ ನಡೆಸಿದ 40 ಪೊಲೀಸರು ಬಳಿಕ ಮನೆಯಲ್ಲಿದ್ದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಮಿತಿಮೀರಿದ ಪ್ರಮಾಣದಲ್ಲಿ ಔಷಧ ನೀಡಿದ ಕಾರಣಕ್ಕೆ ರೋಗಿಗಳು ಮೃತಪಟ್ಟಿದ್ದರು ಎಂದು ನಾಗಾರೆಡ್ಡಿ ವಿರುದ್ಧ ದೂರು ನೀಡಲಾಗಿತ್ತು. ಅಲ್ಲದೆ ಗುಳಿಗೆಗಳ ಕಾರ್ಖಾನೆಯೊಂದನ್ನು ಸಹ ನಡೆಸುತ್ತಿದ್ದಾನೆ ಎಂಬ ಆರೋಪವೂ ಇತ್ತು.
‘ಜೋನ್ಸ್ ಬೊರೊದಲ್ಲಿ ಮನೋವೈದ್ಯನಾಗಿ ಕೆಲಸ ಮಾಡುತ್ತಿದ್ದ ರೆಡ್ಡಿ, ತನ್ನ ರೋಗಿಗಳಿಗೆ ಕಳೆದ ಕೆಲ ವರ್ಷಗಳಿಂದ ಆಫೀಮು ಮತ್ತು ಬೆಂಜೊಡೈಜಪೈನ್ನಿಂದ ಕೂಡಿದ ಔಷಧಿ ನೀಡುತ್ತಿದ್ದ. ಕೆಲವು ವರ್ಷಗಳಿಂದ ಇವುಗಳ ಪ್ರಮಾಣ ಹೆಚ್ಚಳದಿಂದಾಗಿ ಅನೇಕ ಸಾವುಗಳು ಸಂಭವಿಸಿದ್ದವು’ ಎಂದು ಕ್ಲೇಟನ್ನ ಪೊಲೀಸ್ ಮುಖ್ಯಸ್ಥ ಮೈಕ್ ರಿಜಿಸ್ಟರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಾಗಾರೆಡ್ಡಿ ಬಳಿ ಚಿಕಿತ್ಸೆ ಪಡೆದ 36 ರೋಗಿಗಳು ಮೃತಪಟ್ಟಿದ್ದಾರೆ. ಅದರಲ್ಲಿ 12 ರೋಗಿಗಳು ಮಾದಕ ಪದಾರ್ಥಗಳ ಸೇವನೆಯಿಂದ ಮೃತಪಟ್ಟಿರುವುದು ಶವಪರೀಕ್ಷೆಯಿಂದ ದೃಢಪಟ್ಟಿದೆ.
‘ಮನೋವೈದ್ಯನಾಗಿದ್ದ ರೆಡ್ಡಿ ತನ್ನ ವೃತ್ತಿಯ ಮಿತಿಯಾಚೆ ಆತ ಅಕ್ರಮವಾಗಿ ಔಷಧಗಳನ್ನು ನೀಡುತ್ತಿದ್ದ’ ಎಂದು ಕ್ಲೇಟನ್ ಕೌಂಟಿಯ ಅಟಾರ್ನಿ ಟ್ರೇಸಿ ಗ್ರಹಾಂ ಲಾಸನ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.