ಭಾರತ- ರಷ್ಯ ಒಪ್ಪಂದ: ಸರಳ ವೀಸಾ ಸೌಲಭ್ಯ

7

ಭಾರತ- ರಷ್ಯ ಒಪ್ಪಂದ: ಸರಳ ವೀಸಾ ಸೌಲಭ್ಯ

Published:
Updated:

ಮಾಸ್ಕೊ (ಪಿಟಿಐ): ಭಾರತೀಯ ಪ್ರಜೆಗಳಿಗೆ ಅನುಕೂಲವಾಗುವಂಥ ವೀಸಾ ನೀತಿಗೆ ರಷ್ಯ ಸಂಸತ್ ಅನುಮೋದನೆ ನೀಡಿದೆ.ಪ್ರವಾಸ ಅಥವಾ ವಾಣಿಜ್ಯ ಉದ್ದೇಶಕ್ಕಾಗಿ ರಷ್ಯಗೆ ಭೇಟಿ ನೀಡುವ ಭಾರತೀಯರಿಗೆ ಸರಳ ವೀಸಾ ಸೌಲಭ್ಯ ಒದಗಿಸುವ ಒಪ್ಪಂದ ಇದಾಗಿದೆ.ಶುಕ್ರವಾರ ನಡೆದ ಸಂಸತ್‌ನ ಅಧಿವೇಶನದಲ್ಲಿ 428 ಮತಗಳ ಮೂಲಕ ಈ ಒಪ್ಪಂದಕ್ಕೆ ಅನುಮೋದನೆ ನೀಡಲಾಯಿತು. ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತ ಹಾಗೂ ರಷ್ಯ ಈ ಒಪ್ಪಂದಕ್ಕೆ ನವದೆಹಲಿಯಲ್ಲಿ ಸಹಿ ಹಾಕಿದ್ದವು.ಎರಡೂ ದೇಶಗಳ ಪ್ರಜೆಗಳ ಪರಸ್ಪರ ಪ್ರವಾಸದ ಆಧಾರದಲ್ಲಿ ದ್ವಿಪಕ್ಷೀಯ ಸಂಬಂಧವನ್ನು ಕಾನೂನು ಚೌಕಟ್ಟಿನಲ್ಲಿ ಬಲಪಡಿಸುವುದು, ಉಭಯ ದೇಶಗಳ ಪ್ರಜೆಗಳಿಗೆ ಕೆಲವೊಂದು ವಿಭಾಗದಲ್ಲಿ ಅನುಕೂಲಕರ ವಾತಾವರಣ ರೂಪಿಸುವುದು ಈ ಒಪ್ಪಂದದ ಉದ್ದೇಶವಾಗಿದೆ.`ಉಭಯ ದೇಶಗಳ ಔದ್ಯಮಿಕ ಪ್ರತಿನಿಧಿಗಳು, ವಿಜ್ಞಾನಿಗಳು, ಸಾಂಸ್ಕೃತಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವುದು ಪ್ರಮುಖ ಉದ್ದೇಶವಾಗಿದೆ~ ಎಂದು ರಷ್ಯದ ಉಪ ವಿದೇಶಾಂಗ ಸಚಿವ ಅಲೆಕ್ಸಿ ಬೊರೊಡವ್‌ಕಿನ್ ಹೇಳಿದ್ದಾರೆ.

 

ಸಂಸತ್‌ನ ಮೇಲ್ಮನೆಯಲ್ಲಿ (ಫೆಡರಲ್ ಕೌನ್ಸಿಲ್) ಈ ಒಪ್ಪಂದಕ್ಕೆ ಅನುಮೋದನೆ ಸಿಕ್ಕಿದೆ. ಕಾಯ್ದೆಯನ್ನಾಗಿ ಇದನ್ನು ಅನುಷ್ಠಾನಕ್ಕೆ ತರಲು ಈಗಾಗಲೇ ರಷ್ಯ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ ಸಹಿ ಹಾಕಿದ್ದಾರೆ. ಹಾಗಾಗಿ ಇನ್ನು ಮುಂದೆ ಎರಡೂ ದೇಶಗಳ ಪ್ರಜೆಗಳು ಅಥವಾ ಸಂಸ್ಥೆಗಳು ಆಯಾಯ ದೇಶಕ್ಕೆ ಪ್ರವಾಸ ಕೈಗೊಳ್ಳಲು ನೇರವಾಗಿ ವೀಸಾಗೆ ಅರ್ಜಿ ಸಲ್ಲಿಸಬಹುದಾಗಿದೆ.ಈ ಒಪ್ಪಂದದ ಪ್ರಕಾರ, ಅರ್ಹ ರಾಷ್ಟ್ರೀಯ ಪಾಸ್‌ಪೋರ್ಟ್ ಹೊಂದಿರುವ ಎರಡೂ ದೇಶಗಳ ಪ್ರಜೆಗಳು ಇನ್ನೊಂದು ದೇಶದಲ್ಲಿ 90 ದಿನಗಳವರೆಗೆ ವಾಸ್ತವ್ಯ ಹೂಡಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry