ಶುಕ್ರವಾರ, ನವೆಂಬರ್ 15, 2019
22 °C
ಟೆನಿಸ್: ಮಾಜಿ ಆಟಗಾರ ಆನಂದ್ ಅಮೃತ್‌ರಾಜ್ ವಿಶ್ವಾಸ

`ಭಾರತ ವಿಶ್ವ ಗುಂಪಿಗೆ ಪ್ರವೇಶ ಪಡೆಯಲಿದೆ'

Published:
Updated:

ಬೆಂಗಳೂರು: ಭಾರತ ತಂಡವು ಮುಂದಿನ ವರ್ಷ ಡೇವಿಸ್ ಕಪ್‌ನಲ್ಲಿ ವಿಶ್ವ ಗುಂಪಿಗೆ ಪ್ರವೇಶ ಪಡೆಯಲಿದೆ ಎಂಬ ವಿಶ್ವಾಸವನ್ನು ಮಾಜಿ ಟೆನಿಸ್ ಆಟಗಾರ ಆನಂದ್ ಅಮೃತ್‌ರಾಜ್ ವ್ಯಕ್ತಪಡಿಸಿದ್ದಾರೆ.`ವಿಶ್ವಗುಂಪಿಗೆ ಪ್ರವೇಶ ಪಡೆಯಲು 2014ರ ಋತು ಭಾರತಕ್ಕೆ ಉತ್ತಮ ಅವಕಾಶ ಎನಿಸಿದೆ. ಆಟಗಾರರು ಎಲ್ಲ ವಿವಾದಗಳನ್ನು ಬದಿಗಿಟ್ಟು ಉತ್ತಮ ಪ್ರದರ್ಶನ ನೀಡಿದರೆ ಇದು ಸಾಧ್ಯ' ಎಂದು ಅವರು ನುಡಿದರು.ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ `ಡೇವಿಸ್ ಕಪ್ ಕಮಿಟ್‌ಮೆಂಟ್' ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು. ಕೇಂದ್ರದ ಮಾಜಿ ಸಚಿವ ಮತ್ತು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಆಜೀವ ಅಧ್ಯಕ್ಷರಾಗಿರುವ ಯಶವಂತ್ ಸಿನ್ಹಾ ಪ್ರಶಸ್ತಿ ನೀಡಿದರು.ಸಮಾರಂಭದಲ್ಲಿ ಅಮೃತ್‌ರಾಜ್ ಅಲ್ಲದೆ ರಮಾನಾಥನ್ ಕೃಷ್ಣನ್, ರಮೇಶ್ ಕೃಷ್ಣನ್ ಮತ್ತು ಮಹೇಶ್ ಭೂಪತಿ ಅವರಿಗೂ `ಡೇವಿಸ್ ಕಪ್ ಕಮಿಟ್‌ಮೆಂಟ್' ಪ್ರಶಸ್ತಿ ನೀಡಲಾಯಿತು. ಕನಿಷ್ಠ 20 ಡೇವಿಸ್ ಕಪ್ ಪಂದ್ಯಗಳಲ್ಲಿ ಆಡಿದವರು ಈ ಪ್ರಶಸ್ತಿಗೆ ಅರ್ಹರಾಗುವರು.ಇದೇ ವೇಳೆ ಭಾರತ ಡೇವಿಸ್ ಕಪ್ ತಂಡದ `ಆಡದಿರುವ ನಾಯಕ' ಎಸ್.ಪಿ. ಮಿಶ್ರಾ ಮತ್ತು ಹಿರಿಯ ಆಟಗಾರ ಲಿಯಾಂಡರ್ ಪೇಸ್ ಅವರನ್ನು ಕೆಎಸ್‌ಎಲ್‌ಟಿಎ ವತಿಯಿಂದ ಸನ್ಮಾನಿಸಲಾಯಿತು. ಮಿಶ್ರಾ ಅವರು ಇಂಡೊನೇಷ್ಯಾ ವಿರುದ್ಧದ ಪಂದ್ಯದೊಂದಿಗೆ ನಾಯಕ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಪೇಸ್ ಅವರಿಗೆ ಇದು 50ನೇ ಡೇವಿಸ್ ಕಪ್ ಹೋರಾಟ ಎನಿಸಿದೆ.ವಿವಾದ ದುರದೃಷ್ಟಕರ: ಎಐಟಿಎ ಮತ್ತು ಆಟಗಾರರ ನಡುವಿನ ಬಿಕ್ಕಟ್ಟು `ದುರದೃಷ್ಟಕರ' ಎಂದು ಅಮೃತ್‌ರಾಜ್ ಹೇಳಿದರು. `ಆಟಗಾರರು ವಿವಾದಕ್ಕೆ ಅಲ್ಪ ವಿರಾಮ ಹಾಕಿ ಇಂಡೊನೇಷ್ಯಾ ವಿರುದ್ಧದ ಪಂದ್ಯವನ್ನು ಆಡಿದ್ದಾರೆ. ಎಲ್ಲ ವಿವಾದ ಸಂಪೂರ್ಣವಾಗಿ ಬಗೆಹರಿಯುವ ವಿಶ್ವಾಸ ನನ್ನದು' ಎಂದರು.ಸೋಮದೇವ್, ಯೂಕಿ ಭಾಂಬ್ರಿ ಮತ್ತು ವಿಷ್ಣುವರ್ಧನ್ ಅವರಂತಹ ಯುವ ಪ್ರತಿಭೆಗಳು ಭಾರತದಲ್ಲಿ ಇದ್ದಾರೆ ಎಂದ ಅನಂದ್, `ಆದರೆ ವಿಶ್ವ ರ‌್ಯಾಂಕಿಂಗ್‌ನಲ್ಲಿ 50 ರೊಳಗಿನ ಸ್ಥಾನದಲ್ಲಿ ಕಾಣಿಸಿಕೊಳ್ಳಲು ಒಬ್ಬ ಆಟಗಾರನಿಗೆ ವಿಶೇಷ ಸಾಮರ್ಥ್ಯ ಅಗತ್ಯ' ಎಂದು ತಿಳಿಸಿದರು.`ಭಾರತದ ಆಟಗಾರರು ಆಗಿಂದಾಗ್ಗೆ 200ರ ಒಳಗಿನ ರ‌್ಯಾಂಕ್‌ನಲ್ಲಿ ಕಾಣಿಸಿಕೊಳ್ಳುವರು. 100 ಹಾಗೂ 50ರ ಒಳಗಿನ ಸ್ಥಾನ ಪಡೆಯಲು ಉನ್ನತಮಟ್ಟದ ಪ್ರತಿಭೆ ಅನಿವಾರ್ಯ' ಎಂದು ಅವರು ನುಡಿದರು.

ಸಹ ಆಟಗಾರರಿಗೆ ಪೇಸ್ ಕಿವಿಮಾತು

ಬೆಂಗಳೂರು:  `ನಮ್ಮಲ್ಲಿ ಕಿತ್ತಾಟ ಬೇಡ. ದೇಶಕ್ಕಾಗಿ ನಾವು ಒಟ್ಟಿಗೆ ಆಡೋಣ. ನಮಗಿಂತ ಕ್ರೀಡೆ ದೊಡ್ಡದು. ಎಲ್ಲದಕ್ಕಿಂತ ದೇಶ ದೊಡ್ಡದು. ಇದನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಗೆಲುವು ಮೂಲ ಉದ್ದೇಶವಾಗಬೇಕೇ ಹೊರತು; ನಮ್ಮಲ್ಲಿನ ಅಹಂ ಅಲ್ಲ'ಏಷ್ಯಾ ಓಸೀನಿಯಾ (ಗುಂಪು-1) ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪ್ಲೇ ಆಫ್ ಪಂದ್ಯದಲ್ಲಿ ಭಾರತಕ್ಕೆ 3-0ರಲ್ಲಿ ಮುನ್ನಡೆ ದೊರಕಿಸಿ ಕೊಟ್ಟ ಲಿಯಾಂಡರ್ ಪೇಸ್ ಹೇಳಿದ ಮಾತಿದು.`ನಮ್ಮೆಲ್ಲರ ಕನಸು ಒಂದು ದಿನ ಡೇವಿಸ್ ಕಪ್ ಟ್ರೋಫಿ ಎತ್ತಿ ಹಿಡಿಯಬೇಕು ಎಂಬುದು. ಆ ಸಾಧನೆ ಮಾಡುವ ತಾಕತ್ತು ನಮ್ಮಲ್ಲಿದೆ. ಅದಕ್ಕಾಗಿ ಒಗ್ಗಟ್ಟಾಗಿ ಆಡಬೇಕು. ಇದು ಯುವ ಆಟಗಾರರ ತಂಡ. ಈಗ ತಂಡದಲ್ಲಿ ಒಗ್ಗಟ್ಟು ನಿಧಾನವಾಗಿ ಕಂಡುಬರುತ್ತಿದೆ. ಅದು ಪೂರ್ಣವಾಗಿ ಬರಬೇಕು' ಎಂದು 40 ವರ್ಷ ವಯಸ್ಸಿನ ಆಟಗಾರ ನುಡಿದರು.

`ನೀವು ದೇಶದ ಯಾವುದೋ ಮೂಲೆಯಿಂದ ಬಂದು ತಂಡದಲ್ಲಿ ಆಡುತ್ತಿರಬಹುದು. ಆದರೆ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಎಂಬುದು ಇಲ್ಲಿ  ಮುಖ್ಯವಲ್ಲ. ದೇಶಕ್ಕಾಗಿ ಆಡಬೇಕು.  ಚೆನ್ನಾಗಿ ಆಡಿ ಗೆಲ್ಲಬೇಕು' ಎಂದು 23 ವರ್ಷಗಳಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಲಿಯಾಂಡರ್ ನುಡಿದರು.

ಪ್ರತಿಕ್ರಿಯಿಸಿ (+)