ಶನಿವಾರ, ಮೇ 28, 2022
31 °C

ಭಾರತ ಸನಾತನ ದೇಶ: ಸಿದ್ಧೇಶ್ವರ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ:'ಭಾರತ ಸನಾತನ ದೇಶ. ಹೃದಯಗಳನ್ನು ಬೆಸೆಯುವ ಸಂಸ್ಕೃತಿ ನಮ್ಮದು. ಜಗತ್ತಿಗೆ ಹೃದಯದ ಭಾಷೆ ತೋರಿಸಿದವರು ಭಾರತೀಯರು. ಅಂತಹ ಹೃದಯ ಶ್ರೀಮಂತಿಕೆಯಿಂದ ರೂಪುಗೊಂಡ ಕೆ.ಎಲ್.ಇ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ನೆರಳಾಗಿ ಜ್ಞಾನ ನೀಡುತ್ತಿದೆ' ಎಂದು ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಮಂಗಳವಾರ ಕೆ.ಎಲ್.ಇ ಸಂಸ್ಥೆಯು ರೂ. 6.2 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಸಿಬಿಎಸ್‌ಇ ಇಂಗ್ಲಿಷ್ ಮಾಧ್ಯಮ ಶಾಲೆ ಮತ್ತು ರೂ. 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶಾರದಾ ಕೋರೆ ಪ್ರೌಢಶಾಲೆ ನೂತನ ಕಟ್ಟಡಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.`ಪರಸ್ಪರ ಜನರನ್ನು ಮತ್ತು ದೇಶವನ್ನು ಪ್ರೀತಿಸುವ ಶಿಕ್ಷಣವನ್ನು ನೀಡಬೇಕಾಗಿದೆ. ಹೃದಯ ಸುಂದರಗೊಳಿಸುವ ಶಿಕ್ಷಣ ಬೇಕಾಗಿದೆ. ಪ್ರೇಮ ಭಾವ ಇಲ್ಲದಿದ್ದರೆ ಮನುಷ್ಯತ್ವವೇ ಇಲ್ಲದಂತೆ. ಸಂಸ್ಕೃತಿ ಕಲಿಸದ ಶಿಕ್ಷಣದಿಂದ ಪ್ರಯೋಜನವಿಲ್ಲ' ಎಂದು ಹೇಳಿದ ಶ್ರೀಗಳು, ಗ್ರಾಮೀಣ ಮಕ್ಕಳ ಹಿತಕ್ಕಾಗಿ ಡಾ.ಕೋರೆ ಹಾಗೂ ಅವರ ತಂಡದವರು ಈ ಶಾಲೆಯನ್ನು ಅಪರೂಪವಾಗಿ ನಿರ್ಮಿಸಿದ್ದಾರೆ. ಅವರ ಈ ಕಾರ್ಯ ಪ್ರಶಂಸನೀಯ ಎಂದರು.ಸಂಸ್ಥೆಯು ಶಿಕ್ಷಣ ಮತ್ತು ಸಂಸ್ಕೃತಿಯನ್ನು ಒಟ್ಟಿಗೆ ಪ್ರಸಾರ ಮಾಡುತ್ತಿದೆ. ಇಲ್ಲಿಯ ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶಾದ್ಯಂತ ಹೋಗಲಿ ಆದರೆ ಹಳ್ಳಿಯನ್ನು ಮರೆಯದಿರಲಿ' ಎಂದು ಆಶಿಸಿದರು.ಮುಖ್ಯ ಅತಿಥಿ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಡಾ.ಅನಿಲ್ ಕುಂಬ್ಳೆ ಮಾತನಾಡಿ, `ಇಡೀ ರಾಷ್ಟ್ರದುದ್ದಗಲಕ್ಕೂ ವಿಸ್ತರಿಸಿರುವ ಕೆ.ಎಲ್.ಇ. ಸಂಸ್ಥೆ ಅಪ್ರತಿಮ ವಿದ್ಯಾರ್ಥಿಗಳನ್ನು ರೂಪಿಸಿದೆ. ಮಾತ್ರವಲ್ಲ ಶಿಕ್ಷಣದೊಂದಿಗೆ ಆರೋಗ್ಯ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಿದೆ' ಎಂದರು.ಸಣ್ಣ ಕೈಗಾರಿಕೆ, ಸಕ್ಕರೆ ಮತ್ತು ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ, `ಸಂಸ್ಥೆಯು ಗಡಿಭಾಗದಲ್ಲಿ ಇನ್ನಷ್ಟು ಹೆಚ್ಚಿನ ಶಾಲೆಗಳನ್ನು ತೆರೆದು ಗುಣಮಟ್ಟದ ಶಿಕ್ಷಣ ನೀಡಲಿ' ಎಂದರು.ಸಂಸದ ಸುರೇಶ ಅಂಗಡಿ ಮಾತನಾಡಿದರು. ಸ್ವಾಗತಿಸಿ ಮತ್ತು ಪ್ರಾಸ್ತಾವಿಕವಾಗಿ ಮಾತನಾಡಿದ ಕೆ.ಎಲ್.ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಸಂಸ್ಥೆಯ 2016ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುವ ಸಂಭ್ರಮದಲ್ಲಿದ್ದು, ಈ ಸವಿನೆನಪಿಗಾಗಿ ಇನ್ನೂ 250 ಅಂಗಸಂಸ್ಥೆಗಳನ್ನು ತೆರೆಯಲು ಆಡಳಿತ ಮಂಡಳಿ ನಿರ್ಧರಿಸಿದೆ ಹಾಗೂ ಡಾ.ಅನಿಲ್ ಕುಂಬ್ಳೆ ಅವರ ಸಹಕಾರದೊಂದಿಗೆ ಮುಂಬರುವ ದಿನಗಳಲ್ಲಿ ಬೆಳಗಾವಿಯಲ್ಲಿ ಸಂಸ್ಥೆ ಕ್ರೀಡಾ ಶಾಲೆಯನ್ನು ತೆರೆಯಲಿದೆ' ಎಂದು ಹೇಳಿದರು.ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು, `ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ವಿಶೇಷ ಒಲವು ಹೊಂದಿದವರು, ನಗರದ ವಿದ್ಯಾರ್ಥಿಗಳಿಗಿಂತಲೂ ಹೆಚ್ಚಿನ ಅಂಕಗಳಿಸುವ ಸಾಮರ್ಥ್ಯ ಹೊಂದಿದವರು. ಅಂತಹ ಗ್ರಾಮೀಣ ವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸುವಲ್ಲಿ ಕೆ.ಎಲ್.ಇ. ಸಂಸ್ಥೆ ದಿಟ್ಟ ಹೆಜ್ಜೆ ಇಟ್ಟಿದೆ' ಎಂದರು.ಸಂಸ್ಥೆಯ ಉಪಾಧ್ಯಕ್ಷ ಅಶೋಕ ಬಾಗೇವಾಡಿ, ಕಾರ್ಯದರ್ಶಿ ದೇಸಾಯಿ, ಡಾ.ಶ್ರದ್ಧಾನಂದ ಸ್ವಾಮೀಜಿ  ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಬಸವರಾಜ ಪಾಟೀಲ, ಎಸ್.ಕೆ.ಮೆಟಗುಡ್ಡ, ಶಿವಾನಂದ ಮುನವಳ್ಳಿ, ಶಂಕರಣ್ಣ ಮುನವಳ್ಳಿ, ಅನಿಲ ಪಟ್ಟೇದ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಎಲ್ಲ ಸದಸ್ಯರು, ಉಪಾಧ್ಯಕ್ಷ ಭರತೇಶ ಬನವಣೆ, ಶಂಕರಣ್ಣ ಮುನವಳ್ಳಿ, ಬಿ.ಎಲ್.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.