ಭಾರತ ಹುಣ್ಣಿಮೆ: ಸವದತ್ತಿ ಯಲ್ಲಮ್ಮನ ಜಾತ್ರೆ ಇಂದು

7

ಭಾರತ ಹುಣ್ಣಿಮೆ: ಸವದತ್ತಿ ಯಲ್ಲಮ್ಮನ ಜಾತ್ರೆ ಇಂದು

Published:
Updated:

ಸವದತ್ತಿ: ಬೆಳಗಾವಿ ಜಿಲ್ಲೆಯ ಸವದತ್ತಿಯ ಪ್ರಸಿದ್ಧ ಶಕ್ತಿಪೀಠ ಯಲ್ಲಮ್ಮನ (ರೇಣುಕಾ) ಗುಡ್ಡದಲ್ಲಿ  ಮಂಗಳವಾರ (ಫೆ.7) `ಭಾರತ ಹುಣ್ಣಿಮೆ~ ಆಚರಣೆಗೆ ಲಕ್ಷಾಂತರ ಭಕ್ತರು ಸೇರಲಿದ್ದಾರೆ.  ಹುಣ್ಣಿಮೆಗೆ ಒಂದು ವಾರ ಮುಂಚೆಯೇ ರಾಜ್ಯದ ಹಾಗೂ ನೆರೆಯ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.ಗುಡ್ಡದಲ್ಲಿ ಎಲ್ಲಿ ನೋಡಿದಲ್ಲಿ ಎತ್ತಿನ ಗಾಡಿಗಳು (ಚಕ್ಕಡಿ), ವಿವಿಧ ವಾಹನಗಳು ತುಂಬಿರುತ್ತವೆ. ರಸ್ತೆಪಕ್ಕದಲ್ಲಿ ಭಕ್ತರೇ ನಿರ್ಮಿಸಿಕೊಂಡ ತಾತ್ಕಾಲಿಕ ಶೆಡ್‌ಗಳು, ಅಲ್ಲಲ್ಲಿ  ಅಡುಗೆ ತಯಾರಿಸುವುದು ಹಾಗೂ ದೇವಿಯ ಹಡ್ಡಲಿಗೆ ತುಂಬುತ್ತಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. `ಆದಿಶಕ್ತಿ ಯಲ್ಲಮ್ಮನ ಜಾತ್ರೆಗೆ ಹೋಗೋಣ ಬಾ....ಉಧೋ, ಉಧೋ ಎನ್ನುತ್ತ, ಭಂಡಾರ ತೂರುತ್ತ....ಶಕ್ತಿದೇವಿ ದರ್ಶನ ಪಡೆಯೋಣ ಬಾ ....ಎಂದು ಜೋಗಮ್ಮ, ಜೋಗಪ್ಪಗಳು ಚೌಡಕಿ ಬಾರಿಸುತ್ತ ದೇವಸ್ಥಾನದ ಸುತ್ತಲಿನ ಪ್ರಾಂಗಣದಲ್ಲಿ ಭಕ್ತಿಯಿಂದ ಹಾಡುತ್ತ, ಕುಣಿಯುತ್ತ,          ಭಂಡಾರದ ಓಕುಳಿಯಾಡುತ್ತಾರೆ.ಇಡೀ ಕ್ಷೇತ್ರವನ್ನು ಭಂಡಾರ (ಬಂಗಾರ)ಮಯವಾಗಿಸುತ್ತ ಭಕ್ತಿಯ ಸಾಗರದಲ್ಲಿ ಮುಳುಗಿ ದೇವಿಯ ದರ್ಶನ ಪಡೆಯುತ್ತಾರೆ.ಭಕ್ತರು ತರುವ ಚಕ್ಕಡಿ, ವಾಹನಗಳನ್ನು ವ್ಯವಸ್ಥಿತವಾಗಿ ನಿಲ್ಲಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ವಸತಿ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ನಿಂಬಾಳಕರ ತಿಳಿಸಿದ್ದಾರೆ. ಈ ಕ್ಷೇತ್ರವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕೆಂದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಳ ಅಧಿವೇಶನ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಸಚಿವ ಬಸವರಾಜ ಬೊಮ್ಮಾಯಿ ಅವರು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದರು.ಹೀಗಾಗಿ ಪ್ರಾಧಿಕಾರ ರಚಿಸುವಲ್ಲಿ ಯಶಸ್ವಿಯಾದ ಶಾಸಕ ಆನಂದ ಮಾಮನಿ ಅವರು ಇದಕ್ಕಾಗಿ ರೂ 50 ಕೋಟಿ ಆಡಳಿತಾತ್ಮಕ ಮಂಜೂರಾತಿ ಪಡೆದಿದ್ದು, ಇದೀಗ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ.

ಕ್ಷೇತ್ರದಲ್ಲಿ ಇನ್ನಷ್ಟು ಯಾತ್ರಿ ನಿವಾಸಗಳನ್ನು ನಿರ್ಮಿಸಲು ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.ಸುಲಭ ಶೌಚಾಲಯ, ವಸತಿಗೃಹ, ಸ್ನಾನಗೃಹಗಳನ್ನು ನಿರ್ಮಿಸುವುದರ ಜೊತೆಗೆ ಸುಸಜ್ಜಿತ ವ್ಯಾಪಾರ ಮಳಿಗೆ, ಕಾಂಕ್ರೀಟ್ ರಸ್ತೆ ಮುಂತಾದ ಕೆಲಸಗಳು ಭರದಿಂದ ನಡೆದಿವೆ.    

 -

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry