ಭಾರದ್ವಾಜ್ ಕ್ರಮ ಸಂವಿಧಾನಬಾಹಿರ

7

ಭಾರದ್ವಾಜ್ ಕ್ರಮ ಸಂವಿಧಾನಬಾಹಿರ

Published:
Updated:

ನವದೆಹಲಿ: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಮೊಕದ್ದಮೆ ಹೂಡಲು ಅನುಮತಿ ನೀಡಿರುವ  ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕ್ರಮ ರಾಜಕೀಯ ಪ್ರೇರಿತ ಮತ್ತು ಸಂವಿಧಾನಬಾಹಿರ ಎಂದು ಬಿಜೆಪಿ ಟೀಕಿಸಿದೆ.ರಾಜ್ಯಪಾಲರ ರಾಜಕೀಯ ಸಂಬಂಧ ಎಲ್ಲರಿಗೂ ಗೊತ್ತಿರುವ ಸತ್ಯ. ಮೊದಲಿಂದಲೂ ಕಾಂಗ್ರೆಸ್ ಮೇಲೆ ನಿಷ್ಠೆ ವ್ಯಕ್ತಪಡಿಸಿದ್ದಾರೆ. ರಾಜಭವನವನ್ನು ಕಾಂಗ್ರೆಸ್ ಕಚೇರಿಯಾಗಿ ಪರಿವರ್ತಿಸಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಕಿಡಿ ಕಾರಿದ್ದಾರೆ.ಯಡಿಯೂರಪ್ಪ ವಿರುದ್ಧದ ಆರೋಪಗಳನ್ನು ಕುರಿತು ಈಗಾಗಲೇ ಲೋಕಾಯುಕ್ತ ವಿಚಾರಣೆ ನಡೆಸಿದ್ದಾರೆ. ಮತ್ತೊಂದು ವಿಚಾರಣಾ ಆಯೋಗ ರಚನೆಯಾಗಿದೆ. ವಿಚಾರಣೆ ಯಾರು ನಡೆಸಬೇಕು ಎಂಬ ಪ್ರಶ್ನೆ ಹೈಕೋರ್ಟ್ ಮುಂದಿದೆ. ಇಂಥ ಪರಿಸ್ಥಿತಿಯಲ್ಲಿ ವರದಿಗೂ ಕಾಯದೆ ಮೊಕದ್ದಮೆಗೆ ಅನುಮತಿ ನೀಡಿರುವ ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.ಯಾರೋ ಕೆಲವು ವ್ಯಕ್ತಿಗಳ ದೂರಿಗೆ ಸಂಬಂ ಧಿಸಿದಂತೆ ರಾಜ್ಯಪಾಲರು ತನಿಖಾಧಿಕಾರಿಯಾಗಿ ವರ್ತಿಸಿದ್ದಾರೆ. ಆರೋಪ ಕುರಿತಂತೆ ಸೂಕ್ತ ದಾಖಲೆಗೂ ಕಾಯದೆ ಆತುರದ ತೀರ್ಮಾನ ಮಾಡಿದ್ದಾರೆ ಎಂದು ಜೇಟ್ಲಿ ದೂರಿದರು.ರಾಜ್ಯಪಾಲರು ಬಳಸಿದ ಭಾಷೆ, ಪತ್ರ ವ್ಯವಹಾರ, ಹೇಳಿಕೆಗಳೆಲ್ಲವೂ ಅವರ ಉದ್ದೇಶವೇನಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಮಂತ್ರಿ ಮಂಡಲದ ಸಲಹೆಯನ್ನು ಕಡೆಗಣಿಸುವ ಮೂಲಕ ಸಂವಿಧಾನಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ ಎಂದು ಜೇಟ್ಲಿ ಆರೋಪಿಸಿದರು. ಈಚೆಗೆ ನಡೆದ ಪಂಚಾಯತಿ ಚುನಾವಣೆಯಲ್ಲಿ ನೆಲಕಚ್ಚಿದ ಕಾಂಗ್ರೆಸ್ ಪಕ್ಷದ ರಾಜಕೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಭಾರದ್ವಾಜ್ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry