ಮಂಗಳವಾರ, ನವೆಂಬರ್ 19, 2019
28 °C

ಭಾರಿ ಚಿನ್ನ ಕಳ್ಳ ಸಾಗಣೆ ಜಾಲ ಬೆಳಕಿಗೆ

Published:
Updated:

ಮಂಗಳೂರು: ವಿದೇಶದಿಂದ ಭಾರತಕ್ಕೆ ಬಂದು, ಬಳಿಕ ದೇಶದ ಇತರ ನಗರಗಳಿಗೆ ಸಂಚರಿಸುತ್ತಿದ್ದ ವಿಮಾನಗಳನ್ನು ಬಳಸಿ ಚಿನ್ನವನ್ನು ಕಳ್ಳಸಾಗಣೆಗೆ ಮಾಡುತ್ತಿದ್ದ ಭಾರಿ ಜಾಲವನ್ನು ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಪೊಲೀಸರು ಮಂಗಳೂರು ವಿಮಾನ ನಿಲ್ದಾಣಲದಲ್ಲಿ ಭಾನುವಾರ ಭೇದಿಸಿದ್ದಾರೆ.ದುಷ್ಕರ್ಮಿಗಳ ತಂಡವೊಂದು ಅಂತರರಾಷ್ಟ್ರೀಯ ವಿಮಾನಗಳನ್ನು ಬಳಸಿ ಚಿನ್ನಾಭರಣಗಳ ಕಳ್ಳಸಾಗಣೆ ಯಲ್ಲಿ ಸಕ್ರಿಯವಾಗಿದ್ದ ಬಗ್ಗೆ ಡಿಆರ್‌ಐ ಪೊಲೀಸರಿಗೆ ಮಾಹಿತಿ ಇತ್ತು. ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಭಾನುವಾರ ಬೆಳಿಗ್ಗೆ ದುಬೈನಿಂದ ಬಂದ ಜೆಟ್ ಏರ್‌ವೇಸ್‌ನಿಂದ ಇಳಿದ ಕೊಯಿಕ್ಕೋಡ್‌ನ ಮೀಠಾಲೆ ಕಲ್ಲುಳ ಪರಂಬತ್ ನಝರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಚಿನ್ನ ಕಳ್ಳಸಾಗಣೆ ಜಾಲ ಬೆಳಕಿಗೆ ಬಂದಿದೆ.`ಸುಮಾರು 500 ಗ್ರಾಂ ತೂಕದ 5 ಚಿನ್ನದ ಬಿಸ್ಕತ್ತುಗಳನ್ನು ನಾನು ಕುಳಿತ್ತಿದ್ದ ಸೀಟಿನಡಿ ಅಡಗಿಸಿಟ್ಟಿದ್ದೆ. ಅದನ್ನು ಅದೇ ವಿಮಾನದಲ್ಲಿ ಮಂಗಳೂರಿನಿಂದ ಮುಂಬೈಗೆ ತೆರಳಿದ ಇನ್ನೊಬ್ಬ ಪ್ರಯಾಣಿಕ ಕಾಸರಗೋಡಿನ ಪೈವಳಿಕೆ ಅಹ್ಮದ್ ಅಲಿ ಎಂಬಾತ ಮುಂಬೈಗೆ ಸಾಗಿಸಿದ್ದಾನೆ' ಎಂದು ಆರೋಪಿ ಪರಂಬತ್ ನಝರ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಈ ಬಗ್ಗೆ ಮುಂಬೈ ವಿಮಾನನಿಲ್ದಾಣದ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ ಅಧಿಕಾರಿಗಳು ಅಲ್ಲಿ ಇನ್ನೊಬ್ಬ ಆರೋಪಿ ಅಹ್ಮದ್ ಆಲಿಯನ್ನು ಬಂಧಿಸಲು ನೆರವಾದರು.`ಮುಂಬೈ ವಿಮಾನನಿಲ್ದಾಣದಲ್ಲಿ ಆರೋಪಿ ಅಹ್ಮದ್ ಆಲಿಯನ್ನು ಬಂಧಿಸಿದ ಡಿಆರ್‌ಐ ಅಧಿಕಾರಿಗಳು ಅಕ್ರಮವಾಗಿ ಸಾಗಿಸಿದ 500 ಗ್ರಾಂ ತೂಕದ ಚಿನ್ನದ ಬಿಸ್ಕತ್ ವಶಪಡಿಸಿಕೊಂಡರು. ದೇಶದ ವಿವಿಧ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಬಳಸಿಕೊಂಡ ಆರೋಪಿಗಳು ಇದೇ ತಂತ್ರದ ಮೂಲಕ ದುಬೈನಿಂದ ಅಕ್ರಮವಾಗಿ ಭಾರಿ ಪ್ರಮಾಣದ ಚಿನ್ನವನ್ನು ಸಾಗಿಸಿದ್ದಾರೆ' ಎಂದು ಕಂದಾಯ ಗುಪ್ತಚರ ನಿರ್ದೇಶನಾಯದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)