ಭಾರಿ ನಿರೀಕ್ಷೆಯೊಂದಿಗೆ 2013ರ ಸ್ವಾಗತಕ್ಕೆ ಸಜ್ಜು

7
ಷೇರುಪೇಟೆ ಹೂಡಿಕೆದಾರರ ಪಾಲಿಗೆ 2012 ಲಾಭದಾಯಕ ವರ್ಷ

ಭಾರಿ ನಿರೀಕ್ಷೆಯೊಂದಿಗೆ 2013ರ ಸ್ವಾಗತಕ್ಕೆ ಸಜ್ಜು

Published:
Updated:

ಮುಂಬೈ(ಪಿಟಿಐ): ಭಾರತದ ಷೇರುಪೇಟೆಯಲ್ಲಿ ಬಂಡವಾಳ ತೊಡಗಿಸಿದವರಿಗೆ 2012 ಬಹಳ ಲಾಭದಾಯಕ ವರ್ಷವೇ ಆಗಿದ್ದಿತು. ಜನವರಿಯಿಂದ ಡಿಸೆಂಬರ್‌ವರೆಗೂ (ಡಿ. 24) ನಡೆದ ಷೇರುಪೇಟೆ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಶೇ 27ರಷ್ಟು ಹೆಚ್ಚಳವಾಗಿದೆ. ಅಂದರೆ, ವಹಿವಾಟಿನಲ್ಲಿದ್ದ ಷೇರುಗಳು ತಮ್ಮ ಮೌಲ್ಯವನ್ನು ರೂ. 67.70 ಲಕ್ಷ ಕೋಟಿಯಷ್ಟು ಹೆಚ್ಚಿಸಿಕೊಂಡಿವೆ.ಇದೇ ನಿಟ್ಟಿನಲ್ಲಿ 2013ನೇ ವರ್ಷವೂ ಷೇರುಪೇಟೆ ಹೂಡಿಕೆದಾರರಿಗೆ ಲಾಭದಾಯಕ ಎನಿಸಲಿದೆ ಎಂಬ ನಿರೀಕ್ಷೆಯೂ ಮೂಡಿದೆ.ಹೂಡಿಕೆ ಪ್ರಮಾಣ ಹೆಚ್ಚಿದ್ದು ಮತ್ತು ವರ್ಷದ ದ್ವಿತೀಯಾರ್ಧದಲ್ಲಿ ಕೇಂದ್ರ ಸರ್ಕಾರ ಕೆಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ಘೋಷಿಸಿದ್ದರ ಫಲವಾಗಿ ಷೇರುಪೇಟೆಯಲ್ಲಿ ಸಾಕಷ್ಟು ತೇಜಿ ಕಂಡುಬಂದಿತು. ಪರಿಣಾಮ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‌ಎಸ್‌ಇ)ಯ ಪ್ರಮುಖ  ಸೂಚ್ಯಂಕಗಳಲ್ಲಿ ಸಾಕಷ್ಟು ಏರಿಕೆಯಾಯಿತು(ಸದ್ಯ ಬಿಎಸ್‌ಇ ಸೆನ್ಸೆಕ್ಸ್ 20 ಸಾವಿರ ಅಂಶಗಳ ಸನಿಹದಲ್ಲಿದೆ).ಇಲ್ಲಿ ಗಮನಾರ್ಹ ಅಂಶವೆಂದರೆ 2011ರ ಸಂದರ್ಭ. ಆ ವರ್ಷ ಭಾರತದ ಷೇರುಪೇಟೆಗಳು ಬಹಳ ನಾಟಕೀಯವಾಗಿ ಕುಸಿತ ಕಂಡಿದ್ದವು. ಆಗಿನ ಪರಿಸ್ಥಿತಿಗೆ ಹೋಲಿಸಿದರೆ 2012 ಹೂಡಿಕೆದಾರರ ಪಾಲಿಗೆ `ಅದೃಷ್ಟದ ವರ್ಷ' ಎಂದೇ ಪರಿಗಣಿತವಾಯಿತು.ಡಿ. 21ರ ಹೋಲಿಕೆ

ಡಿಸೆಂಬರ್ 21ರಂದು ಷೇರುಪೇಟೆಯಲ್ಲಿ ಕಂಡು ಬಂದ ಬೆಳವಣಿಗೆಯು ಒಂದೇ ದಿನ ಹೂಡಿಕೆದಾರರಿಗೆ ರೂ. 14.5 ಲಕ್ಷ ಕೋಟಿಯಷ್ಟು ಲಾಭ ತಂದುಕೊಟ್ಟಿತು. ಪೇಟೆಯಲ್ಲಿನ ಷೇರುಗಳ ಮೌಲ್ಯವನ್ನೂ ರೂ. 67,78,609 ಕೋಟಿಗೆ ಹೆಚ್ಚಿಸಿತು. 2011ರಲ್ಲಿ ಇದೇ ದಿನ ಷೇರುಪೇಟೆಯ ಒಟ್ಟಾರೆ ಮೌಲ್ಯ ರೂ. 53,12,875 ಕೋಟಿ ಇದ್ದಿತು.ಬಿಎಸ್‌ಇ ಸೂಚ್ಯಂಕ 2011ರ ಡಿ. 21ರಂದು 15,454ರಲ್ಲಿತ್ತು. ಈ ವರ್ಷದ ಅದೇ ದಿನ 19,242 ಅಂಶಗಳಿಗೆ ಏರಿಕೆಯಾಗಿತ್ತು. `ಸೆನ್ಸೆಕ್ಸ್'ನ  ಒಂದು ವರ್ಷದ ಗಳಿಕೆ 3,787 ಅಂಶಗಳಷ್ಟು(ಶೇ 24.5) ಹೆಚ್ಚಿನದಾಗಿದೆ.2012ರ ವರ್ಷಾಂತ್ಯಕ್ಕೆ ಹೋಲಿಸಿದರೆ 2011ರ ಡಿಸೆಂಬರ್‌ನಲ್ಲಿ ವಿರುದ್ಧಪರಿಸ್ಥಿತಿ ಇದ್ದಿತು. ಅಂದರೆ, 2010ರಲ್ಲಿದ್ದುದಕ್ಕಿಂತ 2011ರಲ್ಲಿ ಸೆನ್ಸೆಕ್ಸ್ ಮಟ್ಟ 5054 ಅಂಶಗಳಷ್ಟು ಕಡಿಮೆ ಇದ್ದಿತು. ಅಂದರೆ 2011ರಲ್ಲಿ ಸೂಚ್ಯಂಕ ಶೇ 24ರಷ್ಟು ನಷ್ಟ ಅನುಭವಿಸಿದ್ದಿತು.ಎನ್‌ಎಸ್‌ಇ `ನಿಫ್ಟಿ' ಸಹ 2012ರಲ್ಲಿ ಶೇ 26.5ರಷ್ಟು ಭಾರಿ ಪ್ರಮಾಣದ (1,223 ಅಂಶಗಳು) ಪ್ರಗತಿಯೊಡನೆ 5,847.70 ಅಂಶಗಳಿಗೆ ಏರಿದೆ. 2011ರಲ್ಲಿ 4624 ಅಂಶಗಳಲ್ಲಿ ಇದ್ದಿತು.ನಿರೀಕ್ಷೆಗಳ ವರ್ಷ 2013

ಮುಂದಿರುವುದೇ 2013. ಆಗಲೇ ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜನವರಿ 29ರಂದು ಪ್ರಕಟಿಸಲಿರುವ ಹಣಕಾಸು ಪರಾಮರ್ಶೆ ವರದಿಯತ್ತಲೂ ಎಲ್ಲರ ಗಮನವಿದೆ. ಅಂದು ಬಡ್ಡಿದರದಲ್ಲಿ ಕಡಿತ ಮಾಡುವ ಸುಳಿವನ್ನೂ ಆರ್‌ಬಿಐ ನೀಡಿದೆ.`ಹಣದುಬ್ಬರ'ದತ್ತಲೇ ಬೊಟ್ಟು ಮಾಡಿರುವ ಆರ್‌ಬಿಐ, ಹಲವು ತಿಂಗಳಿಂದಲೂ ಬ್ಯಾಂಕಿಂಗ್ ಬಡ್ಡಿದರ ಕಡಿತಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಜ. 29ರ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ.ಜತೆಗೆ, ಕೇಂದ್ರ ಸರ್ಕಾರವೂ ಮತ್ತಷ್ಟು ಸುಧಾರಣಾ ಕ್ರಮಗಳನ್ನು ಪ್ರಕಟಿಸಬಹುದು, ಸಬ್ಸಿಡಿ ನೀತಿಯಲ್ಲಿಯೂ ಬದಲಾವಣೆ ತರಬಹುದು, ಹಲವು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಿರುವಂತೆ ಡೀಸೆಲ್ ದರ ಏರಿಕೆ ಅಥವಾ ಸಬ್ಸಿಡಿ ಕಡಿತ ಕುರಿತೂ ಚಿಂತಿಸಬಹುದು ಎಂಬ ಅಂಶಗಳು 2013ರ ಬಗ್ಗೆ ಆಶಾಭಾವ ಮೂಡಿಸಿವೆ.ತ್ರೈಮಾಸಿಕ ಪ್ರಗತಿ

ಅಲ್ಲದೆ, 2012-13ನೇ ಹಣಕಾಸು ವರ್ಷದ 3ನೇ ತ್ರೈಮಾಸಿಕ ಅವಧಿಯಲ್ಲಿ ತಕ್ಕಮಟ್ಟಿಗಿನ ಪ್ರಗತಿ ದಾಖಲಾಗಿದೆ. ಹೊಸ ವರ್ಷದಲ್ಲಿ ವಿದೇಶದಿಂದ ಹೂಡಿಕೆಯ ಮಹಾಪೂರ ಆಗಲಿದೆ. ಸದ್ಯ ಅಸ್ಥಿರತೆಯಲ್ಲಿ ಬಳಲುತ್ತಿರುವ ಜಾಗತಿಕ ಆರ್ಥಿಕ ಸ್ಥಿತಿಯಲ್ಲಿಯೂ ಸುಧಾರಣೆ ಕಂಡ ಬರಲಿದೆ ಎಂಬ ವಿಶ್ಲೇಷಣೆಗಳೂ ನೂತನ ವರ್ಷದ ಬಗ್ಗೆ ಷೇರುಪೇಟೆಯಲ್ಲಿ ಮತ್ತು ಹೂಡಿಕೆದಾರರಲ್ಲಿ ಹೊಸ ಕನಸುಗಳನ್ನು ಹುಟ್ಟುಹಾಕಿವೆ.ಇದೆಲ್ಲ ಅಂಶಗಳೂ ಷೇರುಪೇಟೆ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ ಪೇಟೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬಹುದು ಎಂಬ ನಿರೀಕ್ಷೆಗಳೇ 2013ನೇ ವರ್ಷವನ್ನು ಹೂಡಿಕೆದಾರರು ಬಹಳ ಹರ್ಷದಿಂದ ಸ್ವಾಗತಿಸುವಂತೆ ಮಾಡಿವೆ.ಷೇರುಪೇಟೆಯ ಅನುಭವಿ ವಿಶ್ಲೇಷಕರೂ ಇದೇ ನಿಟ್ಟಿನಲ್ಲಿ ತಮ್ಮ ಚಿಂತನೆ ಹೊರಹಾಕಿದ್ದಾರೆ. `ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿನ ಚಟುವಟಿಕೆ ಹೆಚ್ಚಲಿದೆ. ಭಾರಿ ಪ್ರಮಾಣದ ಹೂಡಿಕೆ ಹರಿದುಬರಲಿದೆ. ಆರಂಭಿಕ ಸಾರ್ವಜನಿಕ ಆಹ್ವಾನದ ಷೇರು(ಐಪಿಒ)ಗಳು, `ಎಫ್‌ಪಿಒ' ಮತ್ತು `ಒಎಫ್‌ಎಸ್'ಗಳ ಚಟುವಟಿಕೆಯೂ 2013ರಲ್ಲಿ ಹೆಚ್ಚಲಿದೆ' ಎಂದಿದ್ದಾರೆ.

ಹೂಡಿಕೆದಾರರಲ್ಲಿ ಉಮೇದು

ಷೇರುಪೇಟೆಗೆ 2012ರಲ್ಲಿ ಹೊಸ ಹೂಡಿಕೆದಾರರೂ ಕಾಲಿಟ್ಟಿದ್ದಾರೆ. ಹಳೆಯ ಹೂಡಿಕೆದಾರರೂ ಬಂಡವಾಳ ಪ್ರಮಾಣ ಹೆಚ್ಚಿಸಿದ್ದಾರೆ. ಅಷ್ಟೇ ಅಲ್ಲ, ಅವರ ಆಲೋಚನಾ ದಾಟಿಯೂ ಬದಲಾಗಿದೆ.

ಉದಾಹರಣೆಗೆ; ದೇಶದ ಕೈಗಾರಿಕಾ ವಲಯದ ಸಾಧನೆ 2012ರಲ್ಲಿ ಕಳವಳಕಾರಿ ಮಟ್ಟದಲ್ಲಿ ಇಳಿಮುಖವಾಗಿದ್ದರೂ ಈ ಅಂಶ ಹೂಡಿಕೆದಾರರ ಚಿತ್ತವನ್ನು ಕದಡಲಿಲ್ಲ. ರಫ್ತು ಚಟುವಟಿಕೆಗೆ ಹಿನ್ನಡೆಯಾಗಿದ್ದು, ವಿತ್ತೀಯ ಕೊರತೆಯಲ್ಲಿ ಹೆಚ್ಚಳ, ಮೇಲ್ಮಟ್ಟದಲ್ಲಿಯೇ ಉಳಿದ ಹಣದುಬ್ಬರ, ಬ್ಯಾಂಕಿಂಗ್ ವಲಯದಲ್ಲಿ ವಸೂಲಾಗದ ಸಾಲ (ಎನ್‌ಪಿಎ) ಪ್ರಮಾಣದಲ್ಲಿ ಹೆಚ್ಚಳ... ಈ ಯಾವ ಕಳವಳಕಾರಿ ಅಂಶಗಳೂ ಹೂಡಿಕೆದಾರರ ಮನಸ್ಸನ್ನು ಹೆಚ್ಚು ಕೆಡಿಸಲಿಲ್ಲ. ಅಷ್ಟರಮಟ್ಟಿಗೆ ಹೂಡಿಕೆದಾರರು ದೇಶದ ಷೇರುಪೇಟೆ ಬಗ್ಗೆ 2012ರಲ್ಲಿ ಭಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ನಂಬಿಕೆಯನ್ನೂ ಮುಂದುವರಿಸಿದ್ದಾರೆ.ಚಂಚಲಗೊಳ್ಳದ ಚಿತ್ತ

ಕಡೆಗೆ, ಯೂರೋಪ್ ದೇಶಗಳಲ್ಲಿನ ಸಾಲದ ಬಿಕ್ಕಟ್ಟು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮೊದಲಾದ ಅಂಶಗಳೂ ಭಾರತದ ಷೇರುಪೇಟೆಯ ಆಧಾರವಾದ ಹೂಡಿಕೆದಾರರ ಚಿತ್ತಚಾಂಚಲ್ಯಕ್ಕೆ ಅವಕಾಶ ಮಾಡಿಕೊಡಲಿಲ್ಲ.ಇಲ್ಲಿ ಇದಕ್ಕೆ ವಿರುದ್ಧವಾದ ನಡೆಗಳೇ ಕಂಡುಬಂದಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರ(ಎಫ್‌ಐಐ) ಬಂಡವಾಳ ದೊಡ್ಡ ಪ್ರಮಾಣದಲ್ಲಿ ಭಾರತದ ಷೇರುಪೇಟೆಗೆ ಹರಿದುಬಂದಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2012ರಲ್ಲಿನ `ಎಫ್‌ಐಐ'ಗಳ ಹೂಡಿಕೆ 2ನೇ ಗರಿಷ್ಠ ಪ್ರಮಾಣದ್ದಾಗಿದೆ.`ಸೆಬಿ' ಮಾಹಿತಿ ಪ್ರಕಾರ 2012ರಲ್ಲಿ (ಡಿ. 21ರವರೆಗೆ) `ಎಫ್‌ಐಐ'ಗಳಿಂದ ಒಟ್ಟು 2315 ಕೋಟಿ ಡಾಲರ್(ರೂ. 1,21,652 ಕೋಟಿ) ಬಂಡವಾಳ ಭಾರತದ ಷೇರುಪೇಟೆಗೆ ಹರಿದುಬಂದಿದೆ! 2010ರಲ್ಲಿ `ಎಫ್‌ಐಐ'ಗಳಿಂದ ಒಟ್ಟು 2936 ಕೋಟಿ ಡಾಲರ್(ರೂ. 1,33,266 ಕೋಟಿ) ಹೂಡಿಕೆ ಆಗಿದ್ದಿತು. ಇದುವೇ ಭಾರತದ ಷೇರುಪೇಟೆಯಲ್ಲಿನ `ಎಫ್‌ಐಐ'ಗಳ ಈವರೆಗಿನ ಗರಿಷ್ಠ ಹೂಡಿಕೆ.`ಸಿಎನ್‌ಐ ರೀಸರ್ಚ್ ಲಿ.' ಅಧ್ಯಕ್ಷ ಕಿಶೋರ್ ಪಿ.ಓಸ್ವಾಲ್ ಪ್ರಕಾರ, `ಕೆಲವು ಆಯ್ದ ಷೇರುಗಳು 2012ರಲ್ಲಿ ಅತ್ಯಂತ ಗರಿಷ್ಠ ಮಟ್ಟಕ್ಕೆ ಏರಿದ ಕಾರಣ ಕೈಬೆರಳೆಣಿಕೆಯಷ್ಟು ಸಂಖ್ಯೆ ದೊಡ್ಡ ಹೂಡಿಕೆದಾರರಂತೂ ಊಹಿಸಲಾಗದಷ್ಟು ಭಾರಿ ಪ್ರಮಾಣದ ಲಾಭ ಕಂಡಿದ್ದಾರೆ'.

2012 ಷೇರುದಾರರ ಅದೃಷ್ಟದ ವರ್ಷ ಎನಿಸಿಕೊಂಡಿದ್ದರೂ, ಚಿಲ್ಲರೆ ಹೂಡಿಕೆದಾರರಿಗೆ ದೊಡ್ಡ ಮಟ್ಟದ ಲಾಭವೇನೂ ಕೈಸೇರಿಲ್ಲ.ಹಾಗಾಗಿ ಚಿಲ್ಲರೆ ಹೂಡಿಕೆದಾರರು ಖರೀದಿಗಿಂತ ಮಾರಾಟದತ್ತಲೇ ಗಮನ ಹರಿಸಿದ್ದರು. ಪರಿಣಾಮ, ದೇಶದ ಕಂಪೆನಿಗಳಲ್ಲಿನ ಚಿಲ್ಲರೆ ಹೂಡಿಕೆದಾರರ ಬಂಡವಾಳ 2007ರಲ್ಲಿ ಶೇ 15ರಷ್ಟಿದ್ದುದು 2012ರಲ್ಲಿ ಶೇ 6-7ರ ಪ್ರಮಾಣಕ್ಕೆ ತಗ್ಗಿದೆ.

ಹಗರಣಗಳ ವರ್ಷ 2012

ಭಾರತ 2012ರಲ್ಲಿ ಹಲವು ಹಗರಣಗಳಿಗೆ ಸಾಕ್ಷಿಯಾಯಿತು. 2ಜಿ, 3ಜಿ ತರಂಗಾಂತರ ಮತ್ತು ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬುದರಿಂದ ಆರಂಭಿಸಿ, ಇತ್ತೀಚಿನ `ವಾಲ್‌ಮಾರ್ಟ್ ಲಾಭಿ' ವಿಚಾರದವರೆಗೂ ಹಲವು ಹಗರಣಗಳು ಚರ್ಚೆಗೆ ಗ್ರಾಸ ಒದಗಿಸಿದವು. ಇವೆಲ್ಲವೂ ಷೇರುಪೇಟೆ ಮೇಲೆಯೂ ಸಾಕಷ್ಟು ಪರಿಣಾಮ ಬೀರಿದವು. ಬಿಎಸ್‌ಇ-ಎನ್‌ಎಸ್‌ಇ ಸೂಚ್ಯಂಕಗಳು ಕುಸಿದರೂ ಮತ್ತೆ ಸುಧಾರಿಸಿಕೊಂಡು ಮೇಲ್ಮುಖವಾಗಿಯೇ ಸಾಗಿದವು.ಒಟ್ಟಾರೆ 2012ರಲ್ಲಿ ಬಿಎಸ್‌ಇ ಸೆನ್ಸೆಕ್ಸ್ 15,358.02 ಅಂಶಗಳಿಂದ  ಗರಿಷ್ಠ 19,612.18ರವರೆಗೂ ಏರಿಳಿತ ಕಂಡಿದೆ. ಡಿ. 24ರಂದು ಸೆನ್ಸೆಕ್ಸ್ 19,252.09 ಅಂಶಗಳಲ್ಲಿ ದಿನದಂತ್ಯ ಕಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry