ಬುಧವಾರ, ಜೂನ್ 23, 2021
29 °C

ಭಾರಿ ಭದ್ರತೆ ನಡುವೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಸ­ಲಾಗು­ವುದು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಮತ್ತು ವಿವಿಧ ಸಂಘಟನೆಗಳ ಸದಸ್ಯರು ಎಚ್ಚರಿಕೆ ನೀಡಿದ್ದರ ಹಿನ್ನೆಲೆ­ಯಲ್ಲಿ ಸೋಮವಾರ ಭಾರಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ವಿರೋಧದ ನಡುವೆಯೇ ಶಂಕುಸ್ಥಾಪನೆ ನಡೆಯಿತು.ಕಾರ್ಯಕ್ರಮ ಸ್ಥಳದ ಸುತ್ತಮುತ್ತ, ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿಯೂ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಳೆಯ ಜಿಲ್ಲಾಧಿಕಾರಿ ಕಚೇರಿಯಿಂದ ವಾಪಸಂದ್ರದವರೆಗೆ ವಾಹನ­ಗಳ ಸಂಚಾರವನ್ನು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು.ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ಕೆಜಿಎಫ್‌ ಮುಂತಾದ ಕಡೆಯಿಂದ ಆಗಮಿಸಿದ್ದ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಭದ್ರತೆ ಒದಗಿಸಿದರು. ಪ್ರತಿಭಟನಾಕಾರರು ಕಾರ್ಯಕ್ರಮ ಸ್ಥಳದತ್ತ ಬಂದು ಕಪ್ಪು ಬಟ್ಟೆ ಪ್ರದರ್ಶಿಸುವ ಅಥವಾ ಪ್ರತಿಭಟನೆ ಮಾಡುವ ಸಾಧ್ಯತೆಯಿದ್ದ ಕಾರಣ ಕಾರ್ಯಕ್ರಮ ಸ್ಥಳದಲ್ಲೂ ತೀವ್ರ ನಿಗಾ ವಹಿಸಲಾಗಿತ್ತು. ಸಭಿಕರು ಸೇರಿದಂತೆ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿದ ನಂತರವಷ್ಟೇ ಕಾರ್ಯಕ್ರಮದತ್ತ ತೆರಳಲು ಅವಕಾಶ ನೀಡುತ್ತಿದ್ದರು. ಕಾರ್ಯಕ್ರಮದ ಪಾಸ್‌ ಹೊಂದಿದವರೂ ಸಹ ಪ್ರಯಾಸದಿಂದ ಪ್ರವೇಶಿಸ­ಬೇಕಾಯಿತು.ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ನಿಗಾ ವಹಿಸಲು ಕೇಂದ್ರ ವಲಯ ಐಜಿಪಿ ಉಲ್ಫತ್‌ ಹುಸೇನ್‌ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್‌, ಜಿಲ್ಲಾಧಿಕಾರಿ ಡಾ.ಆರ್‌.­ವಿಶಾಲ್‌ ಸೇರಿದಂತೆ ಜಿಲ್ಲಾಡಳಿತ ಅಧಿಕಾರಿಗಳು ಯಾವುದೇ ರೀತಿಯ ತೊಂದರೆ ತಲೆದೋರದಂತೆ ಪರಿಸ್ಥಿತಿ ನಿಭಾಯಿಸಿದರು. ಆಯ್ದ ಅತಿಥಿಗಳನ್ನು ಹೊರತುಪಡಿಸಿದರೆ, ಬೇರೆ ಯಾರಿಗೂ ಸಹ ವೇದಿಕೆಯತ್ತ ತೆರಳಲು ಅವಕಾಶ ನೀಡಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.