ಬುಧವಾರ, ಡಿಸೆಂಬರ್ 11, 2019
27 °C

ಭಾರಿ ಮಳೆಗೆ ನಲುಗಿದ ಬಿಸಿಲೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರಿ ಮಳೆಗೆ ನಲುಗಿದ ಬಿಸಿಲೂರು

ಯಾದಗಿರಿ: ಬೆಳಗಿನ ಧಗೆಯನ್ನು ನೋಡಿದರೆ ರಾತ್ರಿ ಮಳೆ ಬರುವುದು ನಿಶ್ಚಿತ ಎನ್ನುವ ಮಾತುಗಳು ಶನಿವಾರ ಮಧ್ಯಾಹ್ನದಿಂದಲೇ ಕೇಳಿ ಬರುತ್ತಿದ್ದವು. ಮಳೆ ಬರಬಹುದು ಎಂದು ನಿರೀಕ್ಷೆ ಮಾಡಿದ್ದ ಜನರು, ಬೆಳಗಾಗುವಷ್ಟರಲ್ಲಿ ವರುಣನ ರುದ್ರ ತಾಂಡವದ ಪರಿಣಾಮ ಎದುರಿಸ­ಬೇಕಾಯಿತು. ರಾತ್ರಿ ಪೂರ್ತಿ ಬಿಡದೇ ಸುರಿದ ಮಳೆಗೆ ಬಿಸಿಲೂರು ತತ್ತರಿಸಿತು. ಸಂಚಾರ ಅಸ್ತವ್ಯಸ್ತಗೊಂಡಿತು. ಬೆಳೆದು ನಿಂತ ಪೈರು ನೀರಿಗೆ ಆಹುತಿಯಾಯಿತು.ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 250 ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಆದರೆ ಯಾವುದೇ ಮನೆಗಳು ಕುಸಿದಿಲ್ಲ. ಪ್ರಾಣ ಹಾನಿಯೂ ಆಗಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಜಿಲ್ಲೆಯ ಶಹಾಪುರ ಹಾಗೂ ಯಾದಗಿರಿ ತಾಲ್ಲೂಕಿ­ನಲ್ಲಿಯೇ ವರುಣನ ಆರ್ಭಟ ಹೆಚ್ಚಾಗಿತ್ತು. ಎರಡೂ ತಾಲ್ಲೂಕುಗಳ ಬಹುತೇಕ ಗ್ರಾಮಗಳಲ್ಲಿ ಮಳೆಯ ರೌದ್ರಾವತಾರದ ದರ್ಶನವಾಗಿದೆ.ಸಂಚಾರ ಸ್ಥಗಿತ: ಸಮೀಪದ ವಡಗೇರಾದ ಹಳ್ಳ ಉಕ್ಕಿ ಹರಿದಿದ್ದರಿಂದ ವಡಗೇರಾ–ಯಾದಗಿರಿ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತ­ಗೊಂಡಿತ್ತು. ಈ ರಸ್ತೆಯ ಮೂಲಕ ತುಮಕೂರಿನ ಸಕ್ಕರೆ ಕಾರ್ಖಾನೆಗೆ ಹೋಗುವ ವಾಹನಗಳು ಹಾಗೂ ಪಕ್ಕದ ರಾಯಚೂರು ಜಿಲ್ಲೆಗೆ ತೆರಳುವ ಜನರು ಹಲವಾರು ಗಂಟೆ ರಸ್ತೆಯಲ್ಲಿಯೇ ಕಾಲ ಕಳೆಯುವಂತಾಯಿತು.ಈ ಹಳ್ಳಕ್ಕೆ ಕಟ್ಟಿದ ಮೇಲ್ಸೇತುವೆ ಚಿಕ್ಕದಾಗಿದ್ದು, ಹಳ್ಳಕ್ಕೆ ನುಗ್ಗಿದ ನೀರು ಸೇತುವೆಯ ಮೇಲೆ ಹರಿಯಿತು. ರಸ್ತೆಯ ಮೆಲೆ ನೀರು ಎದೆಯ ಮಟ್ಟದವರೆಗೆ ಹರಿದಿದ್ದರಿಂದ ಸಾರಿಗೆ ಸಂಸ್ಥೆ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಸಂಚರಿಸಲಿಲ್ಲ. ಅನೇಕ ಟಂಟಂ, ಜೀಪು, ಲಾರಿ, ದ್ವಿಚಕ್ರ ವಾಹನಗಳ ಚಾಲಕರು ನೀರು ಇಳಿಯುವುದನ್ನು ನೋಡುತ್ತಾ ಕಾಲ ಕಳೆಯುವಂತಾಯಿತು. ಇನ್ನೊಂದೆಡೆ ಸಮೀಪದ ಕುರಕುಂದಿ ಗ್ರಾಮದ ಹಳ್ಳದ ಸೇತುವೆಯ ಮೇಲೂ ನೀರು ಹರಿದಿದ್ದರಿಂದ ಆ ರಸ್ತೆಯಲ್ಲೂ ಸಂಚಾರ ಸ್ಥಗಿತಗೊಂಡಿತ್ತು. ಯಾದಗಿರಿಗೆ ಹೋಗಬೇಕಾದ ಈ ಭಾಗದ ಗ್ರಾಮಸ್ಥರು ಮಧ್ಯಾಹ್ನದವರೆಗೆ ಪರದಾಡಬೇಕಾಯಿತು.ಪ್ರತಿವರ್ಷ ಮಳೆಗಾಲದಲ್ಲಿ ಈ ಹಳ್ಳವು ತುಂಬಿ ಹರಿಯುತ್ತಿದ್ದು, ಈ ಭಾಗದ ಅನೇಕ ಹಳ್ಳಿಗಳು ಜಿಲ್ಲೆಯ ಸಂಪರ್ಕ ಕಡಿದುಕೊಳ್ಳುವಂತಾಗಿದೆ. ವಡಗೇರಾದ ಕೆಇಬಿ ಹತ್ತಿರ ಈ ಹಳ್ಳಕ್ಕೆ ನಿರ್ಮಿಸಿರುವ ಸೇತುವೆಯ ಎತ್ತರವನ್ನು ಹೆಚ್ಚಿಸಲು ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದರೂ ಪ್ರಯೊಜನವಾಗಿಲ್ಲ. ಅಧಿಕಾರಿಗಳು ಈ ಸೇತುವೆ ಎತ್ತರ ಹೆಚ್ಚಸಲು ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.ಡಾನ್‌ ಬಾಸ್ಕೋ ಜಲಾವೃತ:  ನಗರದ ಚಿತ್ತಾಪುರ ರಸ್ತೆಯಲ್ಲಿರುವ ಡಾನ್‌ ಬಾಸ್ಕೋ ಶಿಕ್ಷಣ ಸಂಸ್ಥೆ ಭಾನುವಾರ ಬೆಳಿಗ್ಗೆ ಸಂಪೂರ್ಣ ಜಲಾವೃತವಾಗಿತ್ತು. ಬೆಳಗಾಗುವಷ್ಟರಲ್ಲಿಯೇ ಶಾಲೆಯ ಆವರಣದಲ್ಲಿ ನೀರು ತುಂಬಿದ್ದು, ಕಟ್ಟಡವನ್ನು ಪ್ರವೇಶಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಕಟ್ಟಡದ ಒಳಗೂ ನೀರು ನುಗ್ಗಿದ್ದರಿಂದ ಕಂಪ್ಯೂಟರ್‌, ಪೀಠೋಪಕರಣ, ಪುಸ್ತಕಗಳಿಗೆ ಹಾನಿಯಾಗಿದೆ.ಡಾನ್‌ ಬಾಸ್ಕೋ ಶಾಲೆಯ ಬಳಿ ಇರುವ ಹಳ್ಳವು ಉಕ್ಕಿ ಹರಿದಿದ್ದರಿಂದ ಶಾಲೆಯ ಆವರಣಕ್ಕೆ ನೀರು ನುಗ್ಗಿದೆ. ಶನಿವಾರದ ಧಾರಾಕಾರ ಮಳೆಗೆ ಹಳ್ಳವು ಸಂಪೂರ್ಣ ತುಂಬಿದ್ದು, ಜಿಲ್ಲಾ ಕ್ರೀಡಾಂಗಣ ಹಾಗೂ ಡಾನ್‌ ಬಾಸ್ಕೋ ಶಾಲೆಯ ಆವರಣದಲ್ಲಿ ನೀರು ನುಗ್ಗಿದೆ. ನಗರದ ತರಕಾರಿ ಮಾರುಕಟ್ಟೆ ಹಿಂಭಾಗದ ಮನೆಗಳಿಗೆ ನೀರಿ ನುಗ್ಗಿ, ನಿವಾಸಿಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಒಂದನೇ ವಾರ್ಡ್‌ನ ವಿದ್ಯುತ್ ಪರಿವರ್ತಕ ನೀರಿನಲ್ಲಿ ಮುಳುಗಿದ್ದು,   ಈ ರಸ್ತೆಯಲ್ಲಿ ಜನತೆ ಸಂಚರಿಸಲು ಹಿಂದೇಟು ಹಾಕುವಂತಾಗಿದೆ.ತಂಡ ರಚನೆ: ಮಳೆಯಿಂದಾಗಿ ಜಿಲ್ಲೆಯಲ್ಲಿ ಸಂಭವಿಸಿರುವ ಆಸ್ತಿ ಹಾನಿಯ ಬಗ್ಗೆ ವರದಿ ಸಿದ್ಧಪಡಿಸಲು ಕಂದಾಯ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಫ್‌.ಆರ್‌. ಜಮಾದಾರ ತಿಳಿಸಿದ್ದಾರೆ. ಜಮೀನಿಗೆ ನೀರು ನುಗ್ಗಿರುವುದು ಹಾಗೂ ಮನೆ ಬಿದ್ದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ. ಈ ಬಗ್ಗೆ ತಕ್ಷಣ ಸಮೀಕ್ಷೆ ಮಾಡಿ ವರದಿ ನೀಡುವಂತೆ ಸಂಬಂಧಪಟ್ಟ ಕಂದಾಯ ನಿರೀಕ್ಷಕರಿಗೆ ತಿಳಿಸಲಾಗಿದೆ. ವರದಿ ಬಂದ ತಕ್ಷಣ ಸರ್ಕಾರಕ್ಕೆ ಸಲ್ಲಿಸಲಾಗುವುದು. ಹಾನಿ ಆಗಿದ್ದಲ್ಲಿ ಜಿಲ್ಲಾಡಳಿತದ ವತಿಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)