ಶನಿವಾರ, ಡಿಸೆಂಬರ್ 7, 2019
21 °C

ಭಾರಿ ಮಳೆ: ಇನ್ನಿಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರಿ ಮಳೆ: ಇನ್ನಿಬ್ಬರ ಸಾವು

ಬೆಂಗಳೂರು: ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಶನಿವಾರವೂ ಮುಂದು­ವರಿದಿದ್ದು ಇನ್ನಿಬ್ಬರನ್ನು ಬಲಿ ತೆಗೆದುಕೊಂಡಿದೆ.

ಹುಬ್ಬಳ್ಳಿ ವರದಿ: ಹುಬ್ಬಳ್ಳಿ-ಧಾರವಾಡ ಅವಳಿನಗರ ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಗೆ ತತ್ತರಗೊಂಡಿದ್ದು, ಸಿಡಿಲು ಬಡಿದು ಬಾಲಕ ಸಾವಿಗೀಡಾದ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್‌ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಭರತ ಪರಶುರಾಮ ಹುರುಳಿ (12) ಮೃತ ಬಾಲಕ. ಗಣೇಶನ ಹಬ್ಬಕ್ಕೆ ಅಜ್ಜನ ಮನೆಗೆ ಬಂದಿದ್ದ ಭರತ ಆಟವಾಡಲು ಹೋಗಿದ್ದ ವೇಳೆ ಸಿಡಿಲು ಬಡಿದಿದೆ. ಮಳೆಯಿಂದಾಗಿ ಹುಬ್ಬಳ್ಳಿ ನಗರದ ಹೊಸೂರು, ಕೊಪ್ಪಿಕರ, ಗೋಕುಲ ರಸ್ತೆ, ಚನ್ನಮ್ಮ ವೃತ್ತ ಜಲಾವೃತ­ಗೊಂಡು ವಾಹನ ಸಂಚಾರ ಅಸ್ತವ್ಯಸ್ತ­ಗೊಂಡಿತು. ವಿವಿಧ ತಗ್ಗುಪ್ರದೇಶಗಳಲ್ಲಿ ನೀರು ತುಂಬಿಕೊಂಡಿತು.ಧಾರವಾಡ ನಗರದಲ್ಲಿ ಹಳಿಯಾಳ ರಸ್ತೆಯ ನೆಹರು ನಗರ, ಗೌಡರ ಓಣಿಯ 60ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿತು. ಸರಿಯಾದ ಚರಂಡಿ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ನಿವಾಸಿಗಳು ಧಾರವಾಡ-ಹಳಿಯಾಳ ರಸ್ತೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪ್ರತಿ­ಭಟನಾ­ಕಾರರನ್ನು ಚದುರಿಸಿದರು.ಸತ್ತೂರು ಬಳಿಯ ಎಸ್‌ಡಿಎಂ ಆಸ್ಪತ್ರೆಯ ಒಳಗೂ ನೀರು ಸೇರಿದ್ದರಿಂದ ರೋಗಿಗಳು ಹಾಗೂ ಸಿಬ್ಬಂದಿಗೆ ತೀವ್ರ ತೊಂದರೆಯಾಯಿತು. ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ನೀರು ಹೊರಹಾಕಲು ಶ್ರಮಪಟ್ಟರು. ಧಾರವಾಡ ಜಿಲ್ಲೆಯಲ್ಲಿ ಕೆಲವೆಡೆ ಕಳೆದ ಮೂರು ದಿನಗಳಿಂದ ಮಳೆ ಸುರಿಯುತ್ತಿದ್ದು, ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಇದರಿಂದ ಹುಬ್ಬಳ್ಳಿ, ಕುಂದಗೋಳ ಮತ್ತು ನವಲಗುಂದ ತಾಲ್ಲೂಕಿನ ನೂರಾರು ಹೆಕ್ಟೇರ್‌ ಪ್ರದೇಶ­ದಲ್ಲಿ ಬೆಳೆದ ಬೆಳೆ ಜಲಾವೃತ­ವಾಗಿದೆ. ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಹಳ್ಳದ ಪಾತ್ರದ ಅಕ್ಕ-ಪಕ್ಕದ ಜಮೀನಿನಲ್ಲಿನ ಶೇಂಗಾ, ಈರುಳ್ಳಿ, ಹತ್ತಿ, ಹೆಸರು, ಕಡಲೆ, ಮೆಕ್ಕೆಜೋಳ, ಮೆಣಸಿನಕಾಯಿ ಹೊಲದಲ್ಲಿ ನೀರು ನಿಂತಿದೆ.ತುಮಕೂರು ವರದಿ: ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಮನೆ ಗೋಡೆ ಕುಸಿದು ಶನಿವಾರ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಮೂವರು ಮಳೆಗೆ ಬಲಿಯಾದಂತಾಗಿದೆ. ಚಿಕ್ಕನಾಯಕ­ನ­ಹಳ್ಳಿ ತಾಲ್ಲೂಕು ಕಾತ್ರಿಕೆ­ಹಾಳ್‌ನ ರಾವುಂಡಯ್ಯ ಮೃತಪಟ್ಟ ದುರ್ದೈವಿ. ಗುಬ್ಬಿ ತಾಲ್ಲೂಕಿ­ನಲ್ಲಿ 103 ಹಾಗೂ ತುಮಕೂರು ತಾಲ್ಲೂಕಿನಲ್ಲಿ 20 ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿ­ನಲ್ಲಿ 11 ಮನೆಗಳು ಕುಸಿದಿವೆ.

ಪ್ರತಿಕ್ರಿಯಿಸಿ (+)