ಭಾರಿ ಮಳೆ: ಇಬ್ಬರ ಸಾವು, 246 ಮನೆಗಳಿಗೆ ಹಾನಿ

7

ಭಾರಿ ಮಳೆ: ಇಬ್ಬರ ಸಾವು, 246 ಮನೆಗಳಿಗೆ ಹಾನಿ

Published:
Updated:

ಬೆಂಗಳೂರು: ತುಮಕೂರು, ದಾವಣಗೆರೆ, ಚಾಮರಾಜನಗರ, ಗದಗ, ಹಾಸನ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಸುರಿದ ಭಾರಿ ಮಳೆಗೆ ಒಟ್ಟು ಇಬ್ಬರು ಮೃತಪಟ್ಟಿದ್ದಾರೆ, 246 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಅಪಾರ ಬೆಳೆ ನಷ್ಟವಾಗಿದೆ.ತುಮಕೂರು: ಜಿಲ್ಲೆಯಲ್ಲಿ ಸತತ ಮೂರನೆ ದಿನವೂ ಮಳೆಯ ಆರ್ಭಟ ಮುಂದುವರಿದಿದೆ. ತುಮಕೂರು ತಾಲ್ಲೂಕಿನ ಮುದಿಗೆರೆಯಲ್ಲಿ ಮನೆ ಕುಸಿದು ನರಸಮ್ಮ ಎಂಬುವವರು ಮೃತಪಟ್ಟಿದ್ದಾರೆ. ಮಧುಗಿರಿಯ ಕಡಗತ್ತೂರಿನಲ್ಲಿ ಮನೆ ಕುಸಿದು ಸಾಕಮ್ಮ ಎಂಬುವವರು ತೀವ್ರ ಗಾಯಗೊಂಡಿದ್ದಾರೆ.ತುಮಕೂರು, ಕುಣಿಗಲ್‌, ಮಧುಗಿರಿ, ಶಿರಾ ಹಾಗೂ ತಿಪಟೂರು ತಾಲ್ಲೂಕುಗಳಲ್ಲಿ ಒಟ್ಟು 136 ಮನೆಗಳು ಕುಸಿದು ಬಿದ್ದಿವೆ. ನೂರಾರು ಹೆಕ್ಟೇರ್‌ ಭತ್ತ, ರಾಗಿ, ದಾಳಿಂಬೆ, ಬಾಳೆ ಬೆಳೆ ನಾಶವಾಗಿದೆ. ಹಲವು ಕೆರೆಕಟ್ಟೆಗಳು ಒಡೆದು ಹೋಗಿವೆ. ಪಾವಗಡದಲ್ಲಿ ಅತಿವೃಷ್ಟಿಯಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.ದಾವಣಗೆರೆ: ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ತೆಲಿಗಿ ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಧಾರಾಕಾರ ಮಳೆ ಸುರಿದು 40ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ.ದಾವಣಗೆರೆಯ ಶಾಂತಿನಗರದಲ್ಲಿ ಗೋಡೆ ಕುಸಿದು ಕೈಗಾಡಿ ವ್ಯಾಪಾರಿ ಚಂದ್ರಾಚಾರಿ (48) ಮೃತಪಟ್ಟಿದ್ದಾರೆ.ಮಣ್ಣಿನ ಗೋಡೆಗೆ ತಡೆಯಾಗಿ ನಿಲ್ಲಿಸಿದ್ದ ಕಲ್ಲು ಆತನ ಮೇಲೆ ಬಿದ್ದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹರಪನಹಳ್ಳಿ ತಾಲ್ಲೂಕಿನ ತೆಲಿಗಿ ಗ್ರಾಮದ ಪರಿಶಿಷ್ಟರ ಹಳೆ ಕಾಲೊನಿ ಹಾಗೂ ಹೊಸ ಕ್ಯಾಂಪಿನ ನೂರಾರು ಮನೆಗಳಿಗೆ ನೀರು ನುಗ್ಗಿದೆ. ನಿವಾಸಿಗಳು ರಾತ್ರೋರಾತ್ರಿ ಮಕ್ಕಳು- ಮರಿಗಳನ್ನು ಕಟ್ಟಿಕೊಂಡು ಜೀವಭಯದಿಂದ ಎತ್ತರದ ಪ್ರದೇಶಗಳಿಗೆ ತೆರಳಿ ರಾತ್ರಿ ಕಳೆದಿದ್ದಾರೆ.    ಹತ್ತಾರು ಚೆಕ್‌ಡ್ಯಾಮ್‌ಗಳು ಕೊಚ್ಚಿಹೋಗಿವೆ.ಅರಸೀಕೆರೆ ಹೋಬಳಿಯ ಕ್ಯಾರಕಟ್ಟೆ ಗ್ರಾಮದ ಹೊರವಲಯದಲ್ಲಿ ಬಾರಿಕರ ದೊಡ್ಡಶೇಖರಪ್ಪ ಎಂಬುವವರಿಗೆ ಸೇರಿದ ಕೋಳಿಫಾರಂ ಒಳಗೆ ನೀರು ನುಗ್ಗಿ  ೯ ದಿನಗಳ ಹಿಂದೆಯಷ್ಟೇ ಸಾಕಣೆಗಾಗಿ ಖರೀದಿಸಿ ತಂದಿದ್ದ ಸುಮಾರು 3 ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಮೃತಪಟ್ಟಿವೆ.ಬೆಂಡೆಗೇರಿ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದೆ. ಹೀಗಾಗಿ ಹೊಳಲು–- ದಾವಣಗೆರೆ ರಾಜ್ಯ ಹೆದ್ದಾರಿ- ೧೫೦ರಲ್ಲಿನ ಬೆಂಡಿಗೇರಿ- ಬಾಲೇನಹಳ್ಳಿ ರಸ್ತೆ ಮಧ್ಯೆ ಸೇತುವೆ ಮೇಲೆ ನೀರು ರಭಸವಾಗಿ ಹರಿದ ಪರಿಣಾಮ ವಾಹನ ಸಂಚಾರ ಕಡಿತಗೊಂಡಿತ್ತು.ಬಿಕ್ಕಿಕಟ್ಟಿ ಕೆರೆಯಲ್ಲಿ ಮೀನು ಸಾಕಾಣಿಕೆಗಾಗಿ ಬಿಡಲಾಗಿದ್ದ 3ಲಕ್ಷದಷ್ಟು ೩ತಿಂಗಳ ಮೀನು ಮರಿ, ಬಾಲೇನಹಳ್ಳಿ ಕೆರೆಯಲ್ಲಿ 2ಲಕ್ಷ ಹಾಗೂ ಬೆಂಡಿಗೇರಿ ಕೆರೆಯಲ್ಲಿನ 1.50ಲಕ್ಷ ಮೀನು ಮರಿಗಳು ಕೋಡಿಯ ನೀರಿನಲ್ಲಿ ಕೊಚ್ಚಿಹೋಗಿವೆ.ಲಕ್ಷ್ಮೇಶ್ವರ (ಗದಗ ಜಿಲ್ಲೆ): ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಮೀಪದ ಹುಲ್ಲೂರು ಹಳ್ಳದ ಪ್ರವಾಹದಲ್ಲಿ ಈರುಳ್ಳಿ ಮತ್ತಿತರ ಬೆಳೆಗಳು ಕೊಚ್ಚಿ ಹೋಗಿ ಹಾನಿ ಸಂಭವಿಸಿದೆ.ಲಕ್ಷ್ಮೇಶ್ವರ-ಬೆಳ್ಳಟ್ಟಿ ಮಧ್ಯದಲ್ಲಿ ಹರಿಯುವ ಹುಲ್ಲೂರು ಹಳ್ಳಕ್ಕೆ ಶುಕ್ರವಾರ ಪ್ರವಾಹ ಬಂದಿದ್ದು ಬೂದಿಹಾಳ ಸರಹದ್ದಿನಲ್ಲಿರುವ ಹೊಲಕ್ಕೆ ನೀರು ನುಗ್ಗಿದೆ. ಬೆಳೆಗಳೆಲ್ಲ ಕೊಚ್ಚಿಕೊಂಡು ಹೋಗಿದ್ದಲ್ಲದೆ, ನೀರೆತ್ತುವ ಮೋಟಾರ್ ಹಾಗೂ ಸ್ಟಾರ್ಟರ್ ಜಲಾವೃತವಾಗಿ ಹಾನಿಯಾಗಿದೆ.ತಾಳಿಕೋಟೆ (ವಿಜಾಪುರ ಜಿಲ್ಲೆ): ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಡೋಣಿ ನದಿಗೆ ಶುಕ್ರವಾರ ಪ್ರವಾಹ ಬಂದಿದ್ದು, ಹಡಗಿನಾಳ ರಸ್ತೆಯಲ್ಲಿರುವ ನೆಲಮಟ್ಟದ ಸೇತುವೆ ಮೇಲೆ ನಾಲ್ಕು ಅಡಿಗೂ ಹೆಚ್ಚು ನೀರು ಬಂದಿದ್ದರಿಂದ ಇಡೀ ದಿನ ಸಂಚಾರಕ್ಕೆ ವ್ಯತ್ಯಯವಾಯಿತು.ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ  ಮುದ್ದೇಬಿಹಾಳ, ನಾಲತವಾಡ ಕಲ್ಲದೇವನಹಳ್ಳಿ, ಮೂಕಿಹಾಳ, ಶಿವಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ  ಕಡಿತಗೊಂಡಿದ್ದು, ಎಲ್ಲ ವಾಹನಗಳು ಮಿಣಜಗಿ ಮಾರ್ಗದ ಮೂಲಕ ಸಂಚರಿಸುವಂತಾಯಿತು.ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲ್ಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಯರಿಯೂರು ಕೆರೆ ಏರಿಯು ಭಾರಿ ಮಳೆಗೆ ಶುಕ್ರವಾರ ಒಡೆದ ಪರಿಣಾಮ ನೂರಾರು ಎಕರೆ ಫಸಲು ನಷ್ಟವಾಗಿದೆ. ಯಳಂದೂರು ತಾಲ್ಲೂಕಿನ   ಬಸವಾಪುರ ಗ್ರಾಮಕ್ಕೆ ಜೋಡಿ ಕೆರೆಯ ನೀರು ಮತ್ತು ಮಳೆ ನೀರು ನುಗ್ಗಿ ಸುಮಾರು 70 ಮನೆಗಳು ಕುಸಿದಿವೆ. ಬಸವಾಪುರ ಗ್ರಾಮದಲ್ಲಿ ಗಂಜಿ ಕೇಂದ್ರ ಆರಂಭಗೊಂಡಿದೆ.ಚಾಮರಾಜನಗರದಲ್ಲಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ವಿವಿಧೆಡೆ ಗುರುವಾರ ರಾತ್ರಿ ಸುರಿದ ಮಳೆಗೆ ಕಲ್ಲಹಳ್ಳಿ ಗ್ರಾಮದಲ್ಲಿ ಮನೆಯೊಂದು ತೀವ್ರವಾಗಿ ಹಾನಿಗೊಳಗಾಗಿದೆ. ವೀರದೇವನಹಳ್ಳಿ ಗ್ರಾಮದಲ್ಲಿ  ಹಸುವೊಂದು ಕೊಚ್ಚಿ ಹೋಗಿ ಸಾವನ್ನಪ್ಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry