ಭಾರಿ ಮಳೆ: ಒಡೆದ ನಾಲೆ, ಮನೆಗಳಿಗೆ ಹಾನಿ

7

ಭಾರಿ ಮಳೆ: ಒಡೆದ ನಾಲೆ, ಮನೆಗಳಿಗೆ ಹಾನಿ

Published:
Updated:

ಶ್ರೀರಂಗಪಟ್ಟಣ: ಶನಿವಾರ ತಡರಾತ್ರಿ ಬಿದ್ದ ಭಾರಿ ಮಳೆಗೆ ತಾಲ್ಲೂಕಿನ ಕಡತನಾಳು ಬಳಿ ಚಿಕ್ಕದೇವರಾಯ ನಾಲೆಯ ಏರಿ ಒಡೆದು ಜಮೀನಿಗೆ ನೀರು ನುಗ್ಗಿದೆ.ಭಾನುವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ, 14ನೇ ಮೈಲಿಯಲ್ಲಿ ಈ ನಾಲೆ ಒಡೆದಿದೆ. ನಾಲೆಯ ನೀರು ಕಡತನಾಳು, ಕೆನ್ನಾಳು, ರಾಂಪುರ, ಕಿರಂಗೂರು ರೈತರ ಜಮೀನುಗಳಿಗೆ ನುಗ್ಗಿದೆ. ಭತ್ತ, ಕಬ್ಬಿನ ಗದ್ದೆ ಹಾಗೂ ತೆಂಗಿನ ತೋಟಗಳು ಜಲಾವೃತವಾಗಿವೆ. ಕಡತನಾಳು ಗ್ರಾಮದ ಸ್ವಾಮಿಗೌಡ ಎಂಬವರ ಬತ್ತದ ಬೆಳೆ ಕೊಚ್ಚಿ ಹೋಗಿದೆ.

 

ಭತ್ತದ ಫಸಲಿನ ಮೇಲೆ ಕಲ್ಲು, ಮಣ್ಣಿನ ರಾಶಿ ಬಿದ್ದಿದೆ. ಕೆನ್ನಾಳು ಗ್ರಾಮದ ಬಸವೇಗೌಡರ ಮಗ ಮಹಲಿಂಗೇಗೌಡ ಅವರ ಹೂವು ಹಾಗೂ ತೆಂಗಿನ ತೋಟಕ್ಕೆ ನೀರು ನುಗ್ಗಿದೆ. ತೆಂಗು ಹಾಗೂ ಅಡಿಕೆ ಮರಗಳು ನೆಲಕ್ಕುರುಳಿವೆ. ರಾಂಪುರ ಬಳಿ ಬಾಬುರಾಯನಕೊಪ್ಪಲು ರೈತ ಅಶ್ವತ್ಥ ಎಂಬವರ ಕಬ್ಬಿನ ಗದ್ದೆ, ರಾಂಪುರದ ವಿಷಕಂಠೇಗೌಡ ಅವರ ಬತ್ತದ ಗದ್ದೆ ಹಾಗೂ ಪಾಂಡವಪುರದ ಸತ್ಯಮೂರ್ತಿ ಎಂಬವರ ತೆಂಗಿನ ತೋಟ ಜಲಾವೃತವಾಗಿದೆ.ಶನಿವಾರ ತಡರಾತ್ರಿ ಈ ಭಾಗದಲ್ಲಿ 114 ಮಿ.ಮೀ ಮಳೆ ಸುರಿದಿದೆ. ಮಳೆಯ ನೀರು ನಾಲೆಗೆ ಧುಮುಕಿದ್ದರಿಂದ ನೀರಿನ ಹರಿವು ಹೆಚ್ಚಾಗಿ ನಾಲೆ ಒಡೆದಿದೆ ಎಂದು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳು ಹೇಳಿದ್ದಾರೆ.ಕಡತನಾಳು ಬಳಿ ಈ ಹಿಂದೆಯೇ ನಾಲೆಯ ಏರಿ ದೊಗರು ಬಿದ್ದಿತ್ತು. ಅಧಿಕಾರಿಗಳ ಗಮನಕ್ಕೆ ತಂದರೂ ದುರಸ್ತಿ ಕಾರ್ಯಕ್ಕೆ ಮುಂದಾಗಲಿಲ್ಲ ಎಂದು ರೈತರಾದ ಮಲ್ಲೇಗೌಡ, ಸ್ವಾಮಿಗೌಡ ಇತರರು ದೂರಿದ್ದಾರೆ.ನಾಲೆಯಲ್ಲಿ ನೀರು ನಿಂತ ಬಳಿಕ ದುರಸ್ತಿ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮನೆ ಮೇಲೆ ಉರುಳಿದ ಮರ

ಶ್ರೀರಂಗಪಟ್ಟಣ: ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಮನೆಯೊಂದು ಭಾಗಶಃ ಕುಸಿದು ಬಿದ್ದಿದೆ. ಶತಮಾನಗಳಷ್ಟು ಹಳೆಯದಾದ ಅರಳಿ ಮರ ಮನೆಯ ಮೇಲೆ ಉರುಳಿದ ಪರಿಣಾಮ ಸುಬ್ಬಯ್ಯನ ಮಗ ಸ್ವಾಮಿ ಎಂಬವರ ಮನೆಯ ಗೋಡೆಗಳು ನೆಲ ಕಚ್ಚಿವೆ. ಹೆಂಚುಗಳು, ಜಂತಿ, ರಿಪೀಸುಗಳು ಹಾನಿಯಾಗಿವೆ. ಪಾತ್ರೆಗಳು, ಧವಸ, ಧಾನ್ಯ ಕೂಡ ಹಾಳಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಗೋಡೆ ಕುಸಿದಿದ್ದು ಹೆಚ್ಚಿನ ಅನಾಹುತ ಘಟಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ತಾಲ್ಲೂಕಿನ ಬಲ್ಲೇನಹಳ್ಳಿಯಲ್ಲಿ ಚಲುವರಾಜು ಎಂಬವರ ಮನೆಯ ಗೋಡೆಯ ಒಂದು ಪಾರ್ಶ್ವ ಕುಸಿದು ಬಿದ್ದಿದೆ. ಮಣ್ಣಿನ ಗೋಡೆ ನೆಲಸಮವಾಗಿದೆ. ಆದರೆ ಯಾವುದೇ ಅವಘಡ ಸಂಭವಿಸಿಲ್ಲ. ತಾಲ್ಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡಕ್ಕೆ ನೀರು ನುಗ್ಗಿದೆ. ಛಾವಣಿಯ ನೀರು ಒಳಕ್ಕೆ ಹರಿದು ಪಶು ಆಹಾರ ಒದ್ದೆಯಾಗಿದೆ. ಮಳೆಗೆ ಹಳ್ಳಗಳು ಉಕ್ಕಿ ಹರಿದಿದ್ದು ಕಿರಂಗೂರು, ಬಾಬುರಾಯನಕೊಪ್ಪಲು, ಮಹದೇವಪುರ, ಮಂಡ್ಯಕೊಪ್ಪಲು ಇತರೆಡೆ ಹಳ್ಳದ ಪಕ್ಕದ ಜಮೀನುಗಳ ಬೆಳೆಗೆ ನೀರು ನುಗ್ಗಿದೆ.ಗೋಡೆ ಕುಸಿತ, ಎತ್ತು ಸಾವು


ಪಾಂಡವಪುರ: ಶನಿವಾರ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಅನೇಕ ಮನೆಗಳ ಗೋಡೆ ಕುಸಿತ ಉಂಟಾಗಿ, ಒಂದು ಎತ್ತಿಗೆ ಸಿಡಿಲು ಬಡಿದು ಸಾವನ್ನಪ್ಪಿರುವ ಘಟನೆಗಳು ಜರುಗಿವೆ.ಶನಿವಾರ ಮಧ್ಯೆ ರಾತ್ರಿಯಲ್ಲಿ ಪ್ರಾರಂಭಗೊಂಡ ಜೋರು ಮಳೆಯು ಭಾನುವಾರದ ಬೆಳಗ್ಗಿನ 3 ಗಂಟೆಯ ತನಕ ಎಡಬಿಡದೆ ಸುರಿಯಿತು. ಇದ ರೊಂದಿಗೆ ಭಾರಿ ಶಬ್ದದ ಗುಡುಗು ಮತ್ತು ಮಿಂಚಿನಿಂದಾಗಿ ಜನರು ಭಯಭೀತರಾಗಿದ್ದರು.ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ 2 ಮನೆಗಳಿಗೆ ಹಾನಿಯಾಗಿ ಒಂದು ಎತ್ತು ಸಿಡಿಲಿನ ಬಡಿತಕ್ಕೆ ಸಿಕ್ಕಿ ಸಾವನ್ನಪ್ಪಿದೆ. ಈ ಎತ್ತಿನ ಮೌಲ್ಯ ರೂ. 42 ಸಾವಿರ ಎಂದು ಪಶುಸಂಗೋಪಲನಾ ಇಲಾಖೆ ಅಂದಾಜಿಸಿದೆ.ಕೆನ್ನಾಳು ಗ್ರಾಮದ ಬಳಿಯ ವಿಶ್ವೇಶ್ವರಯ್ಯ ನಾಲೆಯ ವಿತರಣಾ ನಾಲೆಯ ಏರಿಯಲ್ಲಿ ಬಿರುಕು ಉಂಟಾಗಿ ಸುಮಾರು 1.20 ಎಕರೆ ಬೆಳೆಗೆ ಹಾನಿಯುಂಟಾಗಿದೆ. ಹೊಸಕೋಟೆ ಸಮೀಪದಲ್ಲಿನ ಜಮೀನಿನಲ್ಲಿ 1 ಎಕರೆ ಭತ್ತದ ಪೈರು ನಾಶವಾಗಿದೆ.ಹರಳಹಳ್ಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಬಿದ್ದಿದ್ದು ಹಾನಿಯಾಗಿದೆ. ಚಿಕ್ಕಾಡೆ ಮತ್ತು ಚಿಕ್ಕಮರಳಿ ಗ್ರಾಮಗಳಲ್ಲಿ 2 ಮನೆಗಳ ಗೋಡೆ ಕುಸಿತ ಉಂಟಾಗಿದೆ. ಕೆರೆತೊಣ್ಣೂರು ಗ್ರಾಮದಲ್ಲಿ 1 ಮನೆಯ ಗೋಡೆ ಕುಸಿತವಾಗಿದೆ. ಅರಳಕುಪ್ಪೆ ಗ್ರಾಮದಲ್ಲಿ 3 ಮನೆಗಳ ಗೋಡೆ ಕುಸಿತ ಉಂಟಾಗಿದೆ. ಸೀತಾಪುರದಲ್ಲಿ 1 ಮನೆ ಕುಸಿತವಾಗಿದೆ. ಚಿಕ್ಕ ಆಯರಹಳ್ಳಿ ಮತ್ತು ಚಿಟ್ಟನಹಳ್ಳಿ ತಲಾ 2 ಮನೆಗಳ ಗೋಡೆ ಕುಸಿತ ಉಂಟಾಗಿದೆ.ತಹಶೀಲ್ದಾರ್ ಬಿ.ಸಿ.ಶಿವಾನಂದಮೂರ್ತಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹಾನಿಗೊಳಗಾಗಿರುವ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೊಳಗಾದವರ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವ ಕ್ರಮಕೈಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry