ಭಾರಿ ಮಳೆ: ಕೆರೆ ಏರಿ ಒಡೆದು ಬೆಳೆ ನಷ್ಟ

7
ಚಿಕ್ಕಜಾಜೂರು, ಮೊಳಕಾಲ್ಮುರಿನಲ್ಲಿ ಭಾರಿ ಮಳೆ, ಹಲವು ಮನೆ ಕುಸಿತ

ಭಾರಿ ಮಳೆ: ಕೆರೆ ಏರಿ ಒಡೆದು ಬೆಳೆ ನಷ್ಟ

Published:
Updated:

ಚಿಕ್ಕಜಾಜೂರು: ಭಾನುವಾರ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಸಮೀಪದ ಗುಂಜಿಗನೂರು ಗ್ರಾಮದ ಹಳೆಯ ಕೆರೆ ಏರಿ ಒಡೆದು ಅದರಲ್ಲಿನ ನೀರು ಸಂಪೂರ್ಣವಾಗಿ ಹರಿದು ಹೋಗಿದ್ದು, ಇದೀಗ ಕೆರೆ ಬರಿದಾಗಿದೆ. ನೀರು ಹರಿದ ರಭಸಕ್ಕೆ ಫಸಲಿಗೆ ಬಂದಿದ್ದ ಮೆಕ್ಕೆಜೋಳ, ಹತ್ತಿ ಮತ್ತಿತರ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.ಗುಂಜಿಗನೂರು ಗ್ರಾಮದ ಲತಾ ಜಗದೀಶ್‌, ಜಿ.ಸಿ.ಮೂರ್ತಿ, ಜಿ.ಎಸ್‌.ಬಸವರಾಜಪ್ಪ, ರಮೇಶ್‌, ಹೊನ್ನಕಾಲುವೆ ಗ್ರಾಮದ ಹನುಮಂತಪ್ಪ ಅವರ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ, ಚೆಂಡುಹೂ, ಗೌಡ್ರ ಹನುಮಂತಪ್ಪ, ಹೊಂಗೆನಳ್ಳರ ಸ್ವಾಮಿ, ಷಡಾಕ್ಷರಪ್ಪ, ಮಾಕುಂಟೆ ಕೆಂಚಪ್ಪ, ಶರಣಪ್ಪ, ರಾಜಪ್ಪ ಎಂಬ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆದಿದ್ದ ಹತ್ತಿ, ಮೆಕ್ಕೆಜೋಳ ನೀರಿನಿಂದ ಆವೃತ್ತವಾಗಿ ನಷ್ಟ ಸಂಭವಿಸಿದೆ. ಕುಮಾರ ಎಂಬುವರ ಜಮೀನಿನಲ್ಲಿ ನಿರ್ಮಿಸಲಾಗಿದ್ದ ಚೆಕ್‌ಡ್ಯಾಂಗೆ ಹಾಕಲಾಗಿದ್ದ ಮಣ್ಣು ಕೊಚ್ಚಿಕೊಂಡು ಹೋಗಿದೆ.ಚಿಕ್ಕಜಾಜೂರು ಗ್ರಾಮದ ಹಲವು ಜಮೀನುಗಳಿಗೆ ನೀರು ನುಗ್ಗಿದೆ. ಗ್ರಾಮದ ಕರಲಹಳ್ಳ ರಾತ್ರಿ ಇಡೀ ತುಂಬಿ ಹರಿದಿದ್ದು, ಕಡೂರು ಗ್ರಾಮದ ಕಡೆ ತೆರಳುವ ವಾಹನ ಚಾಲಕರು ಪರದಾಡಬೇಕಾಯಿತು. ಶೀಘ್ರವೇ ಬೆಳೆನಷ್ಟದ ವರದಿ ಬರುವ ನಿರೀಕ್ಷೆ ಇದೆ ಎಂದು ತಹಶೀಲ್ದಾರ್‌ ಚನ್ನಬಸಪ್ಪ ತಿಳಿಸಿದ್ದಾರೆ.ಕೊಚ್ಚಿ ಹೋದ ರಸ್ತೆ: ಭಾನುವಾರ ಸುರಿದ ಭಾರಿ ಮಳೆಯಿಂದಾಗಿ ಗುಂಜಿಗನೂರು ಕೆರೆ ಏರಿ ಒಡೆದು ಹೋಗಿದ್ದರಿಂದ ರಭಸವಾಗಿ ಹರಿದು ಬಂದ ನೀರು ಗುಂಜಿಗನೂರು ಗೇಟ್‌ನಲ್ಲಿರುವ ದಾವಣಗೆರೆ–ಹೊಸದುರ್ಗ ರಸ್ತೆಗೆ ಹಾಕಲಾಗಿದ್ದ ಡಾಂಬರ್‌ ರಸ್ತೆ ಹಾಳಾಗಿದೆ. ಅಲ್ಲದೆ, ಸೇತುವೆ ಮೇಲಿನ ರಸ್ತೆ ಅಲ್ಲಲ್ಲಿ ಕುಸಿದಿದ್ದು ಸಂಚಾರಕ್ಕೆ ತೊಂದರೆಯಾಗಿದೆ.

ಭಾರಿ ವಾಹನಗಳು ಸಂಚರಿಸಿದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಲೋಕೋಪಯೋಗಿ ಇಲಾಖೆಯ ಸಹಾಯಕ  ಕಾರ್ಯ ನಿರ್ವಾಹಕ ಎಂಜಿನಿಯರ್‌‌ ಪರಮೇಶ್ವರಪ್ಪ ಅವರು ಶೀಘ್ರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಕಳೆದ ತಿಂಗಳು ಕೆರೆಗೆ ನೀರು ಬಂದ ಹಿನ್ನೆಲೆಯಲ್ಲಿ 2.5 ಲಕ್ಷ ಮೀನಿನ ಮರಿಗಳನ್ನು ಕೆರೆಗೆಬಿಡಲಾಗಿತ್ತು. ಕೆರೆ ಏರಿ ಒಡೆದ ಪರಿಣಾಮ ಕೆರೆಯಲ್ಲಿನ ಮೀನುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ವೆಂಕಟೇಶ್‌, ರವಿ ಹಾಗೂ ಸದಾಶಿವಪ್ಪ ತಮ್ಮ ಅಳಲನ್ನು ತೋಡಿಕೊಂಡರು.ಮೊಳಕಾಲ್ಮುರು; 6 ಮನೆಗೆ ಹಾನಿ

ತಾಲ್ಲೂಕಿನ ಬಿ.ಜಿ.ಕೆರೆ ಸುತ್ತಮುತ್ತ ಭಾನುವಾರ ರಾತ್ರಿ ಉತ್ತಮ ಮಳೆ ಬಿದ್ದಿದೆ. ಬಿ.ಜಿ.ಕೆರೆ ಮಳೆಮಾಪನ ಕೇಂದ್ರದಲ್ಲಿ 57 ಮಿಮೀ ಮಳೆ ದಾಖಲಾಗಿದೆ. ರಾತ್ರಿ 9.30ಕ್ಕೆ ಆರಂಭವಾದ ಮಳೆ ಸತತ ಎರಡು ಗಂಟೆಗಳ ಕಾಲ ಗುಡುಗು, ಮಿಂಚು ಸಹಿತವಾಗಿ ಸುರಿಯಿತು.ಮಳೆಯಿಂದಾಗಿ ಚೆಕ್‌ಡ್ಯಾಂಗಳಲ್ಲಿ ನೀರು ಶೇಖರಣೆಯಾಗಿ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸಿದೆ ಹಾಗೂ ಬಿತ್ತನೆಯಾಗಿದ್ದ ಬೆಳೆಗಳಿಗೆ ಅನುಕೂಲವಾಗಿದೆ.ಮಳೆಯಿಂದಾಗಿ ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಮಂಜಣ್ಣ, ರಾಮಣ್ಣ, ಮುಕುಂದ, ರತ್ನಮ್ಮ, ಮಾರಮ್ಮನಹಳ್ಳಿಯ ಶಾಂತಮ್ಮ, ಸೂರಮ್ಮ ಎಂಬುವವರಿಗೆ ಸೇರಿದ ಒಟ್ಟು 6 ಮನೆಗಳು ಭಾಗಶಃ ಕುಸಿದಿವೆ ಎಂದು ತಾಲ್ಲೂಕು ಆಡಳಿತ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry