ಮಂಗಳವಾರ, ನವೆಂಬರ್ 19, 2019
27 °C

ಭಾರಿ ಮಳೆ, ಧರೆಗುರುಳಿದ ಮರ

Published:
Updated:

ಬಾಗೇಪಲ್ಲಿ: ಬಿರುಬಿಸಿಲು ಹಾಗೂ ದೂಳಿನಿಂದ ಆವರಿಸಿಕೊಂಡಿರುವ ಪಟ್ಟಣದಲ್ಲಿ ಈಗ ತಣ್ಣನೆ ವಾತಾವರಣ ಆವರಿಸಿದೆ. ಒಂದೆಡೆ ರಣಬಿಸಿಲಿನಿಂದ ಸೆಕೆ, ಮತ್ತೊಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾಗಲೇ ಭಾನುವಾರ ರಾತ್ರಿ ಸುರಿದ ಮಳೆ ಜನರಿಗೆ ಹಿತಾನುಭವ ಉಂಟು ಮಾಡಿತು. ಭಾರಿ ಗುಡುಗು ಹಾಗೂ ಮಿಂಚಿನ ಮಳೆಯಿಂದ ವಿದ್ಯುತ್ ಕಂಬ ಮತ್ತು ಮರಗಳು ಉರುಳಿ ಬಿದ್ದಿವೆ. ಮಳೆ ರೈತರಿಗೆ ಸ್ವಲ್ಪಮಟ್ಟಿಗೆ ಸಂತಸ ತಂದಿದೆ. ತಾಲ್ಲೂಕಿನಲ್ಲಿ 14.1 ಸೆಂ.ಮೀ ಮಳೆಯಾಗಿದೆ. ಸರಾಸರಿ ಪ್ರಮಾಣ 2.8 ಸೆಂ.ಮೀ ಮಳೆಯಾಗಿದೆ. ತಾಲ್ಲೂಕಿನ ಹೋಬಳಿಗಳಾದ ಕಸಬಾ-4 ಸೆಂ.ಮೀ, ಮಿಟ್ಟೇಮರಿ-3.6 ಸೆಂ.ಮೀ, ಚೇಳೂರು-1.4 ಸೆಂ.ಮೀ ಮತ್ತು ಗೂಳೂರು-0.6 ಸೆಂ.ಮೀ ಮಳೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಶಿವನಾಗಪ್ಪ `ಪ್ರಜಾವಾಣಿ'ಗೆ ತಿಳಿಸಿದರು.ಮಳೆಯಿಂದ ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮದ ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಪಟ್ಟಣದ ಮುಖ್ಯರಸ್ತೆಯಲ್ಲಿ ಮತ್ತು ಪಾದಚಾರಿ ಮಾರ್ಗದಲ್ಲಿ ನೀರು ನಿಂತ ಕಾರಣ ಪಾದಚಾರಿಗಳು ಮತ್ತು ಬೀದಿ ವ್ಯಾಪಾರಸ್ಥರು ತೊಂದರೆ ಎದುರಿಸಬೇಕಾಯಿತು. ಪಟ್ಟಣದ ಕೆಎಸ್‌ಆರ್‌ಸಿಟಿ ಬಸ್ ನಿಲ್ದಾಣ, ಮಾಂಸ ಮಾರುಕಟ್ಟೆ, ಎಚ್.ಎನ್.ವೃತ್ತ ಸೇರಿದಂತೆ ವಿವಿಧ ಬಡಾವಣೆ ಗುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಚಿಂತಾಮಣಿ, ಚೇಳೂರು, ಗೂಳೂರು, ತಿಮ್ಮಂಪಲ್ಲಿ ಕಡೆ ಸಂಚರಿಸುವ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮಳೆ ನೀರಿನಲ್ಲೇ ಓಡಾಡಬೇಕಾಯಿತು.ಪಟ್ಟಣ ಹೊರಲವಯದ ತೀಮಾಕಲಪಲ್ಲಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಭಾವಣ್ಣ ಎಂಬುವರ ಮನೆ ಮೇಲೆ ಅಳವಡಿಸಿರುವ ಶೀಟುಗಳು ಹಾರಿಹೋಗಿದ್ದು, ವಿದ್ಯುತ್ ಕಂಬ ಮನೆ ಮೇಲೆ ಉರುಳಿ ಬಿದ್ದಿದೆ. ಪಟ್ಟಣದ ಬಳಿಯಿರುವ ತೀಮಾಕಲಪಲ್ಲಿ ಗ್ರಾಮದ ಕ್ರಾಸ್‌ನಲ್ಲಿ ಮರವೊಂದು ಉರುಳಿ ಬಿದ್ದಿದೆ.

ಪ್ರತಿಕ್ರಿಯಿಸಿ (+)