ಭಾರಿ ಮಳೆ: ಹಗರಿಗೆ ಪ್ರವಾಹ

7

ಭಾರಿ ಮಳೆ: ಹಗರಿಗೆ ಪ್ರವಾಹ

Published:
Updated:

ಸಿರುಗುಪ್ಪ: ಸಿರುಗುಪ್ಪ ನಗರ ಹಾಗೂ ಸುತ್ತಮುತ್ತ ಶನಿವಾರ ರಾತ್ರಿ ಸುರಿದ ಮಳೆಗೆ ಹಗರಿ ನದಿಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಳೆ ನೀರಿನ ಪ್ರವಾಹ ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿದೆ.ತಾಲ್ಲೂಕಿನ ನದಿ ದಂಡೆಯ ಮೇಲ್ಭಾಗದಲ್ಲಿ ಮತ್ತು ಆಂಧ್ರದ ಗಡಿ ಭಾಗದ ಪ್ರದೇಶದಲ್ಲಿ ಶನಿವಾರ ರಾತ್ರಿ ಸುರಿದ ಭಾರೀ ಮಳೆಯಿಂದ ನದಿಯಲ್ಲಿ ನೀರಿನ ಒಳ ಹರಿವು ಅಧಿಕ ಪ್ರಮಾಣ ದಲ್ಲಿ ಎರಡೂ ದಡ ಸೋಸಿ ತುಂಬಿ ಹರಿಯುತ್ತಿದೆ.ದಿಢೀರನೇ ನದಿಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ನದಿ ದಂಡೆಯ ತಗ್ಗು ಪ್ರದೇಶದಲ್ಲಿರುವ ನೂರಾರು ರೈತರ ಅನೇಕ ಪಂಪ್‌ಸೆಟ್‌ಗಳು ಮುಳುಗಡೆಯಾಗಿ ಪಂಪ್‌ಸೆಟ್ ರೂಮ್‌ಗಳು ಜಖಂಗೊಂಡಿವೆ. ವಿದ್ಯುತ್ ಕಂಬಗಳು, ತಂತಿ ನೀರಿನಿಂದ ಜಲಾವೃತಗೊಂಡಿವೆ.ನದಿ ದಂಡೆಯ ರಾರಾವಿ, ಬಗ್ಗೂರು, ಚಾಣಕನೂರು, ಕರ್ಚಿಗನೂರು, ಗಜಿಗಿನಹಾಳು, ನಾಗಲಾಪುರ, ಶ್ರೀಧರಗಡ್ಡೆ, ತೊಂಡೆಹಾಳು, ರಾಂಪುರ ಗ್ರಾಮಗಳ ರೈತರು ಇಂದು ಪಂಪ್‌ಸೆಟ್‌ಗಳನ್ನು ಪೈಪುಗಳನ್ನು ಹೊರತೆಗೆದು ಎತ್ತುಗಳ ಮುಖಾಂತರ ಸ್ಥಳಾಂತರಿಸುವ ಕಾರ್ಯ ಕಂಡುಬಂದಿತು.ಮಳೆ ನೀರಿನ ಪ್ರವಾಹ ಇದೇ ರೀತಿ ಮುಂದುವರೆದರೆ ರಾರಾವಿ ಗ್ರಾಮದ ಬಳಿಯ ಹಗರಿ ನದಿಯ ಕೆಳಮಟ್ಟದ ರಸ್ತೆಸೇತುವೆ ಮುಳುಗಡೆಯಾಗುವ ಸಂಭವವಿದೆ. ಆದವಾನಿ ಮಾರ್ಗದ ಯಲ್ಲಮ್ಮನ ಹಳ್ಳದಲ್ಲೂ ಮಳೆ ನೀರಿನ ಹರಿವು ಹೆಚ್ಚಳವಾಗಿದೆ.ಈ ಹಳ್ಳದ ಸೇತುವೆಯನ್ನು ಇಂದು ದಾಟಲು ಮುಂದಾದ ಆದವಾನಿ- ಸಿರುಗುಪ್ಪ ಮಾರ್ಗದ ಖಾಸಗಿಯ ಬಸ್ ನೀರಿನಲ್ಲಿ ದಾರಿ ತಪ್ಪಿ ಸೇತುವೆ ಕೆಳಗೆ ಬಸ್ಸಿನ ಮುಂದಿನ ಒಂದು ಚಕ್ರ ಉರುಳಿ ಅಪಾಯಕ್ಕೆ ಸಿಲುಕಿದೆ, ಆದರೆ ಯಾವುದೇ ಹಾನಿಯಾಗಿಲ್ಲ. ನಂತರ ಗ್ರಾಮಸ್ಥರು ವಾಹನಗಳ ಸಹಾಯ ದಿಂದ ಈ ಬಸ್‌ನ್ನು ಮೇಲೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.ಈ ಘಟನೆಯಿಂದ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಳ್ಳದ ಸೇತುವೆ ಮಧ್ಯ ಬಸ್ ನಿಂತ ಪರಿಣಾಮ ಆಂಧ್ರದ ಮತ್ತು ಗಡಿಭಾಗದ ಹಳ್ಳಿಗಳಿಗೆ ಬಸ್ಸು, ಇತರೇ ವಾಹನಗಳು ಕುಡುದರಹಾಳು ಮಾರ್ಗವಾಗಿ ಸಂಚರಿಸಿದವು.

ಈ ಬಾರಿಯ ಮುಂಗಾರು ಹಂಗಾಮಿ ನಲ್ಲಿ ಕೇವಲ ಇದು ಎರಡನೇ ಬಾರಿಗೆ ನದಿಯಲ್ಲಿ ನೀರಿನ ಪ್ರವಾಹ ಉಂಟಾಗಿದೆ.ನೆನಗುದಿಗೆ: ರಾರಾವಿ ಗ್ರಾಮದ ಬಳಿಯ ಹಗರಿ ನದಿಯ ಕೆಳ ಮಟ್ಟದ ರಸ್ತೆ ಸೇತುವೆಯನ್ನು ಎತ್ತರದಲ್ಲಿ ನಿರ್ಮಿಸುವ ಸೇತುವೆ ಕಾಮಗಾರಿಗೆ ಸರ್ಕಾರ ಮಂಜೂರಾತಿ ನೀಡಿದೆ. ಗುಲ್ಬರ್ಗದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ಪಡೆದು ಬಳ್ಳಾರಿಯಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಈ ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.ಆದರೆ ಇಲ್ಲಿಯ ವರೆಗೆ ಯಾವುದೇ ಕಾಮಗಾರಿಗೆ ಚಾಲನೆ ಕಾಣದೇ ನೆನೆಗುದಿಗೆ ಬಿದ್ದಿದೆ. ಪ್ರತಿ ಮಳೆಗಾಲದಲ್ಲಿ ಈ ಕೆಳಮಟ್ಟದ ಸೇತುವೆ ಮೇಲೆ ಮಳೆ ನೀರಿನ ಪ್ರವಾಹ ಉಂಟಾಗಿ ಆಂಧ್ರ ಮಾರ್ಗ ಸಂಚಾರ ಸೇವೆ ಸ್ಥಗಿತಗೊಳ್ಳುವುದು ಸಾಮಾನ್ಯ ವಾಗಿದೆ ಎಂದು ರಾರಾವಿ ಗ್ರಾಮಸ್ಥರು ಅಳಲು ತೋಡಿಕೊಂಡು ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry